ಭೀಮಾ ಕೋರೆಗಾಂವ್ ಘಟನೆಗೆ ಕಾರಣವಾದ ಎಲ್ಗಾರ್ ಪರಿಷತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ನಿಷೇಧಿತ ಸಂಘಟನೆ ಕಬೀರ್ ಕಲಾ ಮಂಚ್‌ನ ಸದಸ್ಯ ರಮೇಶ್ ಮುರಳೀಧರ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಮೂರು ದಿನಗಳ ಅವಧಿಗೆ ಜಾಮೀನು ನೀಡಿದೆ [ರಮೇಶ್ ಮುರಳೀಧರ್ ಗೈಚೋರ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ನಡುವಣ ಪ್ರಕರಣ].
ಗೈಚೋರ್ ಅವರು ತಮ್ಮ ಅನಾರೋಗ್ಯ ಪೀಡಿತ 76 ವರ್ಷದ ತಂದೆಯನ್ನು ಭೇಟಿ ಮಾಡಲು ಅನುವಾಗುವಂತೆ ನ್ಯಾಯಮೂರ್ತಿ ಎ ಎಸ್ ಗಡ್ಕರಿ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರಿದ್ದ ಪೀಠ ತಾತ್ಕಾಲಿಕ ಜಾಮೀನು ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಬಂಧನಕ್ಕೊಳಗಾದಂದಿನಿಂದಲೂ ಗೈಚೋರ್ ಅವರಿಗೆ ಅವರ ತಂದೆಯನ್ನು ಭೇಟಿಯಾಗಲು ಅವಕಾಶ ನೀಡಲಾಗಿಲ್ಲ ಎನ್ನುವ ಅಂಶವನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿತು.
ಗೈಚೋರ್ ಅವರ ತಂದೆಯನ್ನು ಜೂನ್ 26 ರಂದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಪುಣೆಯ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಅವರು ಬಿಡುಗಡೆಯಾಗಿದ್ದರು.
ದಾಖಲೆಗಳ ಪ್ರಕಾರ ಮೇಲ್ಮನವಿದಾರರ 76 ವರ್ಷದ ತಂದೆಯವರನ್ನು ಜೂನ್ 26, 2025ರಂದು ಪುಣೆಯ ಯೆರವಾಡ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಜೂನ್ 27ರಂದು ಬಿಡುಗಡೆ ಮಾಡಲಾಗಿದೆ. ಬಂಧನವಾದ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ಅಪೀಲುದಾರರಿಗೆ ತಂದೆಯನ್ನು ಭೇಟಿಯಾಗಲು ಅವಕಾಶ ದೊರೆತಿರಲಿಲ್ಲ. ಆದ್ದರಿಂದ, ತಂದೆಯನ್ನು ಭೇಟಿಯಾಗಲು ಮೂರು ದಿನಗಳ ತಾತ್ಕಾಲಿಕ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ವಿವರಿಸಿದೆ.
ಕೇಂದ್ರ ಕಾರಾಗೃಹ ಅಧಿಕಾರಿಗಳಲ್ಲಿ ₹25,000 ನಗದು ಭದ್ರತಾ ಠೇವಣಿ ಇರಿಸುವುದಕ್ಕೆ ಒಳಪಟ್ಟು ಗೈಚೋರ್ ಅವರನ್ನು ಸೆಪ್ಟೆಂಬರ್ 9 ರಿಂದ 11ರವರೆಗೆ ಬಿಡುಗಡೆ ಮಾಡಬೇಕು. ಅವರಿಗೆ ಒದಗಿಸುವ ಬೆಂಗಾವಲು ಶುಲ್ಕಗಳನ್ನು ಮನ್ನಾ ಮಾಡಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಅನಾರೋಗ್ಯ ಪೀಡಿತ ತಂದೆಯವರನ್ನು ಭೇಟಿಯಾಗಲು ಗೈಚೋರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎನ್ಐಎ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು.
ತನ್ನ ತಂದೆಯವರ ಭೇಟಿಗಾಗಿ ಗೈಚೋರ್ ಎರಡು ವಾರಗಳ ಕಾಲ ಜಾಮೀನು ಕೋರಿದ್ದರು ಆದರೆ ಅವರ ತಂದೆಯವರ ವೈದ್ಯಕೀಯ ದಾಖಲೆಗಳು ಯಾವುದೇ ಗಂಭೀರ ಅಥವಾ ತುರ್ತು ಸ್ಥಿತಿಯನ್ನು ಸೂಚಿಸುತ್ತಿಲ್ಲ ಎಂದಿದ್ದ ವಿಶೇಷ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ನಂತರ, ಗೈಚೋರ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ಗೈಚೋರ್ ಪರವಾಗಿ ಹಿರಿಯ ವಕೀಲ ಮಿಹಿರ್ ದೇಸಾಯಿ , ಎನ್ಐಎ ಪರವಾಗಿ ವಕೀಲ ಸಂದೇಶ್ ಪಾಟೀಲ್ ವಾದ ಮಂಡಿಸಿದರು.