ಆರ್‌ಎಸ್‌ಎಸ್ ಮಾಜಿ ಕಾರ್ಯಕರ್ತ ಸಾಂಭಾಜಿ ಭಿಡೆ ಮತ್ತು ಬಿಜೆಪಿ ಮಾಜಿ ಕಾರ್ಪೊರೇಟರ್ ಮಿಲಿಂದ್ ಏಕಬೋಟೆ ಅವರು ಭೀಮಾ ಕೋರೆಗಾಂವ್ ಗಲಭೆಗೆ ಪ್ರಚೋದನೆ ನೀಡಿದ್ದರು ಎಂದು ನಿಷೇಧಿತ ಸಿಪಿಐ (ಎಂ) ಜೊತೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಹರ್ಷಾಲಿ ಪೋತ್ದಾರ್ ಅವರು ಕೋರೆಗಾಂವ್ ಭೀಮಾ ವಿಚಾರಣಾ ಆಯೋಗಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಯೋಗವನ್ನು ಪ್ರತಿನಿಧಿಸಿರುವ ವಕೀಲ ಆಶೀಶ್ ಸತ್ಪುತೆ ಅವರು ಬುಧವಾರದಿಂದ ವಿಚಾರಣೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. 2018ರ ಅಫಿಡವಿಟ್‌ನಲ್ಲಿ ಪೋತ್ದಾರ್ ಅವರು ಸಾಕ್ಷಿಯಾಗಿ ಏನು ಹೇಳಿದ್ದರೋ ಅದನ್ನೇ ಪುನರುಚ್ಚರಿಸಿದ್ದಾರೆ.
“ಸಾಂಭಾಜಿ ಭಿಡೆ ಮತ್ತು ಅವರ ಶಿವ ಪ್ರತಿಷ್ಠಾನ್ ಹಿಂದೂಸ್ಥಾನ್ ಸಂಘಟನೆಯ ಸದಸ್ಯರು ಮತ್ತು ಮಿಲಿಂದ್ ಏಕಬೋಟೆ ಮತ್ತು ಅವರ ಸಮಸ್ತ್ ಹಿಂದೂ ಅಘಾಡಿ ಸಂಘಟನೆಯ ಸದಸ್ಯರು ಗಲಭೆಗೆ ನಾಂದಿ ಹಾಡಿ ಪ್ರಚೋದನೆ ನೀಡಿದ್ದರು” ಎಂದು ತಮ್ಮ ಸಂಶೋಧನೆಯಿಂದ ಕಂಡುಕೊಂಡಿರುವುದಾಗಿ ಪೋತ್ದಾರ್ ಹೇಳಿದ್ದಾರೆ.
2018ರ ಜನವರಿ 1ರಂದು ಗಲಭೆ ನಡೆಯುವುದಕ್ಕೂ ಮುನ್ನ ಏಕಬೋಟೆ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ಮತ್ತು ಅವರು ಪುಣೆ ಜಿಲ್ಲಾ ದಂಡಾಧಿಕಾರಿಗೆ ಬರೆದಿರುವ ಪತ್ರವನ್ನು ಪೋತ್ದಾರ್ ಆಯೋಗಕ್ಕೆ ಸಲ್ಲಿಸಿದ್ದಾರೆ. ಸ್ಥಳೀಯ ಬ್ರಾಹ್ಮಣ ಪೇಶ್ವೆ ನಾಯಕ ವಿರುದ್ಧ ಜಯಶಾಲಿಯಾಗಿದ್ದ ದಲಿತ ಸೈನಿಕರ ಗೆಲುವನ್ನು ಸಂಭ್ರಮಿಸುವುದಕ್ಕೋಸ್ಕರ ದಲಿತ-ಅಂಬೇಡ್ಕರ್‌ವಾದ ಪ್ರತಿಪಾದಿಸುವ ಜನರು ಒಟ್ಟಾಗಿ ಸೇರುವ ಕುರಿತು ತಮ್ಮ ನಿಲುವನ್ನು ಭಿಡೆ ಇವುಗಳಲ್ಲಿ ಉಲ್ಲೇಖಿಸಿದ್ದರು.
“ಅಧಿಕಾರಿಗಳನ್ನು ದಾರಿತಪ್ಪಿಸಿದ್ದ ಏಕಬೋಟೆ ಅವರು ಗಲಭೆ ನಡೆಯುವಲ್ಲಿ ಪ್ರಮುಖ ಪಾತ್ರದಾರಿ” ಎಂದು ಪೋತ್ದಾರ್ ವಾದಿಸಿದ್ದಾರೆ.
ಎಫ್‌ಐಆರ್‌ನಲ್ಲಿ ತಮ್ಮ ಹಾಗೂ ಸುಧೀರ್ ಧವಳೆ, ಸಾಗರ್ ಗೋರಖೆ, ರಮೇಶ್ ಗೈಚೋರ್, ಜ್ಯೋತಿ ಜಗತಾಪ್ ಮತ್ತು ದೀಪಕ್ ದೆಂಗಾಲೆ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅಕ್ಷೇಪ ಎತ್ತಿದ್ದಾರೆ. ಸಮಾರಂಭವನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಪೋತ್ದಾರ್ ವಿಚಾರಣೆ ನಡೆಸಿದ್ದು, ಸಾಕ್ಷಿಯನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಸಂತ್ರಸ್ತರ ಹೇಳಿಕೆಗಳು, ಅವರ ವಿವರ ಮತ್ತು ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಸೇರಿವೆ.
ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಪುಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ದತ್ತಾಂಶವನ್ನು ಮರು ಪಡೆಯಲು ಸಾಕಷ್ಟು ಪ್ರಯತ್ನಪಟ್ಟಿದ್ದು, ಅಪರಾಧಿಗಳ ವಿರುದ್ಧ ಸಾಕ್ಷ್ಯವನ್ನಾಗಿ ಬಳಸಬಹುದಾದ ಮೂಲ ದಾಖಲೆಗಳು ಇನ್ನೂ ಸಿಗುತ್ತಿಲ್ಲ ಎಂದಿದ್ದಾರೆ. ಯಾವ ದಾಖಲೆಗಳನ್ನು ಮರು ಸಂಗ್ರಹಿಸಬೇಕಿದೆ ಎಂದು ಅವರು ಆಯೋಗವನ್ನು ಕೋರಿದ್ದಾರೆ.
ಆಯೋಗದ ಮುಂದೆ ಸತ್ಯ ಹೇಳಿದ್ದಕ್ಕಾಗಿ ಪೊಲೀಸರು ತನ್ನ ವಿರುದ್ದ ಕ್ರಮಕೈಗೊಳ್ಳಬಹುದು ಎಂಬ ಆತಂಕವನ್ನೂ ಅವರು ಅಫಿಡವಿಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಬುಧವಾರವೂ ಸಹ ಅವರು ತಮಗೆ ಜೀವ ಬೆದರಿಕೆಯ ಕುರಿತು ಹೇಳಿದ್ದಾರೆ. ಹೀಗಾಗಿ, ಜೀವ ಭಯ ಇದೆ ಎಂದಾದರೆ ಸರ್ಕಾರದ ವೆಚ್ಚದಲ್ಲಿ ರಕ್ಷಣೆ ಪಡೆಯಲು ಸರ್ಕಾರವನ್ನು ಕೋರುವ ಸ್ವಾತಂತ್ರ್ಯವನ್ನು ಆಯೋಗವು ಪೋತ್ದಾರ್ ಅವರಿಗೆ ಕಲ್ಪಿಸಿದೆ.
2018ರಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಸಂಬಂಧಿಸಿದಂತೆ ತುಷಾರ್ ದಾಂಗುಡೆ ದೂರಿನ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪ್ಯಾಂಥರ್ ಸದಸ್ಯೆ ಪೋತ್ದಾರ್ ಸೇರಿದಂತೆ ಆರು ಮಂದಿಯ ವಿರುದ್ಧ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಸಮಾರಂಭದ ನಡುವೆ ದಲಿತ ಮತ್ತು ಮರಾಠಾ ಸಮುದಾಯಗಳ ನಡುವೆ ಗಲಭೆ ವಿಕೋಪಕ್ಕೆ ತಿರುಗಿದ್ದರಿಂದ ಒಬ್ಬರು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಸಮಾರಂಭದಲ್ಲಿನ ಭಾಷಣದಿಂದಾಗಿ ಗಲಭೆ ನಡೆದಿತ್ತು ಎಂದು ಪುಣೆ ಪೊಲೀಸರು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದರು.
ಒಂದು ಎಫ್‌ಐಆರ್‌ನಲ್ಲಿ ಪೋತ್ದಾರ್ ಆರೋಪಿಯಾಗಿದ್ದು, 2018ರ ಜನವರಿ 2ರಂದು ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ನಿಯಂತ್ರಣ) ಕಾಯಿದೆ ಅಡಿ ಭಿಡೆ ಮತ್ತು ಏಕಬೋಟೆ ವಿರುದ್ಧ ದೂರು ದಾಖಲಿಸಲಾಗಿತ್ತು. 2018ರಲ್ಲಿ ಏಕಬೋಟೆಗೆ ಜಾಮೀನು ದೊರೆತಿದ್ದು, ಭಿಡೆ ಬಂಧನವೇ ಆಗಿಲ್ಲ.
ಗಲಭೆಗೆ ಕಾರಣವಾದ ಅಂಶಗಳನ್ನು ಒಳಗೊಂಡ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜೆ ಎನ್ ಪಟೇಲ್ ಮತ್ತು ಸುಮಿತ್ ಮುಲ್ಲಿಕ್ ನೇತೃತ್ವದಲ್ಲಿ 2018ರಲ್ಲಿ ದ್ವಿಸದಸ್ಯ ಸಮಿತಿ ರಚಿಸಲಾಗಿದೆ. ಇತರ ವಕೀಲರು ತಮ್ಮನ್ನು ಪಾಟಿ ಸವಾಲಿಗೆ ಒಡ್ಡುವುದಕ್ಕೂ ಮುನ್ನ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಪೋತ್ದಾರ್ ಕೋರಿದ್ದರು.
ಈ ಮಧ್ಯೆ, ತನಿಖಾ ಆಯೋಗವು ಗುರುವಾರವೂ ಸಾಕ್ಷ್ಯ ದಾಖಲೀಕರಣ ಮುಂದುವರಿಸಿದ್ದು, ಗಲಭೆಯಲ್ಲಿ ಸಂತ್ರಸ್ತರಾಗಿರುವ ತಸ್ಸಾಬರ್ ಶಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. “ವಧು ಚೌಕ್ ಬಳಿಗೆ ಕೇಸರಿ ಬಾವುಟ ಹಿಡಿದವರು ನುಗ್ಗಿದ ಸಂದರ್ಭದಲ್ಲಿ ಗಲಭೆ ಆರಂಭವಾಯಿತು. ರಸ್ತೆಯುದ್ದಕ್ಕೂ ಅವರು ಕಲ್ಲು ತೂರಾಟ ನಡೆಸಿ, ಆಸ್ತಿ-ಪಾಸ್ತಿಗೆ ಹಾನಿ ಮಾಡಲು ಆರಂಭಿಸಿದಾಗ ಗಲಭೆ ತೀವ್ರ ಸ್ವರೂಪ ಪಡೆಯಿತು” ಎಂದು ಶಾ ಹೇಳಿದ್ದಾರೆ.
ಪ್ರತಿ ವರ್ಷ ನೀಲಿ ಬಾವುಟ (ದಲಿತ ಸಂಘಟನೆಗಳ ಜೊತೆ ಇರುವವರು) ಹಿಡಿದ ಮಂದಿ ದಲಿತ ಯುದ್ಧ ಸ್ಮಾರಕಕ್ಕೆ ಬರುತ್ತಾರೆ. “ಈ ಜನರು ಯಾವುದೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಿರಲಿಲ್ಲ. ಅವರು ಗಲಭೆಕೋರರಾಗಿಲಿಲ್ಲ” ಎಂದು ಹೇಳಿದ್ದಾರೆ.
ವಿಚಾರಣೆಯ ಮುಂದಿನ ದಿನಾಂಕವನ್ನು ಆಯೋಗವು ಬಿಡುಗಡೆ ಮಾಡಲಿದೆ.