ಇಸ್ಕಾನ್ ಕುರಿತ ವಾಣಿಜ್ಯ ಚಿಹ್ನೆಗೆ (ಟ್ರೇಡ್‌ಮಾರ್ಕ್) ಸಂಬಂಧಿಸಿದಂತೆ ಬೆಂಗಳೂರಿನ ಇಸ್ಕಾನ್ ತನ್ನ ಹಕ್ಕು ಸ್ಥಾಪಿಸಲು ಸ್ವತಂತ್ರವಾಗಿದೆ ಎಂದು ಬಾಂಬೆ ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ [ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ ಬೆಂಗಳೂರು ವರ್ಸಸ್ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ ಮತ್ತಿತರರ ನಡುವಣ ಪ್ರಕರಣ].|
ಮುಂಬೈ ಇಸ್ಕಾನ್ ಆ ವಾಣಿಜ್ಯ ಚಿಹ್ನೆಯ ಏಕೈಕ ಮತ್ತು ವಿಶೇಷ ನೋಂದಾಯಿತ ಒಡೆಯ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪೊಂದನ್ನು ಬೆಂಗಳೂರು ಇಸ್ಕಾನ್ ಪ್ರಶ್ನಿಸಿತ್ತು. 2020ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ವಾಣಿಜ್ಯ ಚಿಹ್ನೆಗಳ ನೋಂದಣಿ ಕಚೇರಿ ತನ್ನ ಹಕ್ಕನ್ನು ಮನ್ನಿಸಲು ನಿರಾಕರಿಸಿದೆ ಎಂದು ಬೆಂಗಳೂರು ಇಸ್ಕಾನ್ ಅಳಲು ತೋಡಿಕೊಂಡಿತ್ತು.
ತಾನು ಈ ಹಿಂದೆ ನೀಡಿದ್ದ ತೀರ್ಪು ಇಸ್ಕಾನ್ ಒಂದು ಸುಪ್ರಸಿದ್ಧ ಚಿಹ್ನೆ ಎಂಬುದಕ್ಕೆ ಸೀಮಿತವಾಗಿದ್ದು ಇಸ್ಕಾನ್ ಬೆಂಗಳೂರು ಆ ಮೊಕದ್ದಮೆಯಲ್ಲಿ ಪಕ್ಷಕಾರನಾಗಿಲ್ಲದಿದ್ದ ಕಾರಣ ಅದು ಚಿಹ್ನೆಯ ಮೇಲೆ ವಿಶೇಷ ಅಥವಾ ಸಹವರ್ತಿ ಹಕ್ಕು ಪಡೆಯಲು ಮುಕ್ತವಾಗಿದೆ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಗೌರಿ ಗೋಡ್ಸೆ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
“ಇದು ತಮ್ಮ ವಿರುದ್ಧ ನೀಡಿದ ತೀರ್ಪಲ್ಲ ಎಂದು (ವಾಣಿಜ್ಯ ಚಿಹ್ನೆಗಳ ನೋಂದಣಿ ಕಚೇರಿ) ಸ್ಪಷ್ಟಪಡಿಸಿ. ನೀವು ಅದರ ಮೇಲೆ ವಿಶೇಷ ಅಥವಾ ಸಹವರ್ತಿ ಹಕ್ಕು ಸಾಧಿಸಲು ಮುಕ್ತರು” ಎಂದು ನ್ಯಾ. ಪಟೇಲ್ ತಿಳಿಸಿದರು.
ಏಕ ಸದಸ್ಯ ಪೀಠ ಈ ಹಿಂದೆ ನೀಡಿದ್ದ ಆದೇಶ ವಾಣಿಜ್ಯ ಚಿಹ್ನೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಹಕ್ಕು ಇಲ್ಲವೇ ವಿವಾದಗಳನ್ನು ಪ್ರತ್ಯೇಕ ಅಥವಾ ಜಂಟಿಯಾಗಿ ನಿರ್ಧರಿಸುವ ಅಂತಿಮ ತೀರ್ಪು ಎಂದು ಅರ್ಥೈಸಬಾರದು ಎಂದು ಅದು ಹೇಳಿದೆ.
"ಆ ವಿವಾದಗಳನ್ನು ಸೂಕ್ತ ಪ್ರಕ್ರಿಯೆಗಾಗಿ ವಾಣಿಜ್ಯ ಚಿಹ್ನೆ ನೋಂದಣಿ ಕಚೇರಿಗೆ ಬಿಡಲಾಗಿದೆ. ರಿಜಿಸ್ಟ್ರಾರ್ ಅವರು ಇಸ್ಕಾನ್ ಪ್ರಸಿದ್ಧ ಚಿಹ್ನೆ ಎಂದು ಗುರುತಿಸಿದ್ದಾರೆ. ಇತರ ಪ್ರಶ್ನೆಗಳು ಮುಕ್ತವಾಗಿವೆ" ಎಂದು ನ್ಯಾಯಾಲಯ ಹೇಳಿದೆ.
“ಏನೇ ಆದರೂ ಮುಂಬೈ ಮತ್ತು ಬೆಂಗಳೂರು ಇಸ್ಕಾನ್‌ಗಳ ಸಮರ ಸುಪ್ರೀಂ ಕೋರ್ಟ್‌ನಲ್ಲಿದೆ” ಎಂದು ಮೇಲ್ಮನವಿ ವಜಾಗೊಳಿಸುವ ಮುನ್ನ ನ್ಯಾಯಾಲಯ ನೆನಪಿಸಿತು. ಬೆಂಗಳೂರಿನಲ್ಲಿರುವ ಇಸ್ಕಾನ್ ಬೆಂಗಳೂರಿನ ಆಸ್ತಿಗೆ ಸಂಬಂಧಿಸಿದಂತೆ ಅದರ ಹಾಗೂ ಇಸ್ಕಾನ್ ಮುಂಬೈ ನಡುವಣ ಪ್ರಕರಣ ನ್ಯಾಯಾಲಯದಲ್ಲಿದೆ.
2011ರಲ್ಲಿ, ಇಸ್ಕಾನ್ ಮುಂಬೈ ಅನ್ನು ಆಸ್ತಿಯ ನಿಜವಾದ ಮಾಲೀಕ ಎಂದು ಕರ್ನಾಟಕ ಹೈಕೋರ್ಟ್ ಘೋಷಿಸಿತು. ಇಸ್ಕಾನ್ ಬೆಂಗಳೂರು ಕಾನೂನುಬದ್ಧವಾಗಿ ಸ್ಥಾಪನೆಯಾದ ಸಂಸ್ಥೆ ಅಲ್ಲ, ಬದಲಿಗೆ ಮುಂಬೈನ ಶಾಖೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪರಿಣಾಮ, ಇಸ್ಕಾನ್ ಬೆಂಗಳೂರು ಸ್ವತಂತ್ರ ಘಟಕವಲ್ಲ ಎಂಬುದಾಗಿತ್ತು. ಈ ಆದೇಶದ ವಿರುದ್ಧದ ಮೇಲ್ಮನವಿ ಈಗ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.
ಬಾಂಬೆ ಹೈಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ಇಸ್ಕಾನ್ ಬೆಂಗಳೂರು ಪರವಾಗಿ ಹಿರಿಯ ವಕೀಲ ಡಾ. ಬೀರೇಂದ್ರ ಸರಾಫ್ ವಾದ ಮಂಡಿಸಿದರೆ, ಹಿರಿಯ ವಕೀಲ ವೀರೇಂದ್ರ ತುಳಜಾಪುರ್‌ಕರ್ ಹಾಗೂ ವಕೀಲ ಹಿರೇನ್ ಕಾಮೋದ್ ಅವರು ಇಸ್ಕಾನ್ ಮುಂಬೈ ಪರ ವಾದ ಮಂಡಿಸಿದರು.