ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರ ಅವರು ತಮ್ಮ ಚಿತ್ರಗಳ ದುರ್ಬಳಕೆ ಮತ್ತು ತಮ್ಮನ್ನು ಹೋಲುವ ಡೀಪ್‌ಫೇಕ್ ವಸ್ತುವಿಷಯಗಳಿಗೆ ಸಂಬಂಧಿಸಿದಂತೆ ಹೂಡಿರುವ ವ್ಯಕ್ತಿತ್ವ ಹಕ್ಕುಗಳ ಮೊಕದ್ದಮೆಯಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ಮಧ್ಯಂತರ ಪರಿಹಾರ ನೀಡಿದೆ. ಯಾವುದೇ ವ್ಯಕ್ತಿಯ ಮೂಲಭೂತ ಖಾಸಗಿ ಹಕ್ಕಿಗೆ ಧಕ್ಕೆಯಾಗುವ ರೀತಿಯಲ್ಲಿ ಅವರನ್ನು ಚಿತ್ರಿಸಬಾರದು ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿತು.
ಸಾಮಾಜಿಕ ಮಾಧ್ಯಮ ವೇದಿಕೆಗಳ ಸಹಿತ ಎಐ ಆಧಾರಿತ ಅನಾಮಿಕ ಪ್ರತಿವಾದಿಗಳನ್ನು ಒಳಗೊಂಡಂತೆ ಹಲವು ಸಂಸ್ಥೆಗಳಿಗೆ ಶಿಲ್ಪಾ ಶೆಟ್ಟಿಯವರ ವಿಕೃತಗೊಳಿಸಿದ ಅಥವಾ ಮಾರ್ಪಡಿಸಿದ ಚಿತ್ರಗಳು ಹಾಗೂ ವಿಡಿಯೋಗಳನ್ನು ಹೊಂದಿರುವ ಯುಆರ್‌ಎಲ್‌ಗಳು, ಲಿಂಕ್‌ಗಳು, ಪೋಸ್ಟ್‌ಗಳು ಮತ್ತು ಜಾಲತಾಣಗಳನ್ನು ತೆಗೆದುಹಾಕುವಂತೆ ಹಾಗೂ ಅವುಗಳನ್ನು ಬಳಸದಂತೆ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಮೂರ್ತಿ ಅದ್ವೈತ್ ಎಂ. ಸೇಠ್ನಾ ಅವರನ್ನು ಒಳಗೊಂಡ ರಜಾಕಾಲೀನ ಪೀಠ ತಿಳಿಸಿತು.
ದೃಶ್ಯಗಳು ಮೇಲ್ನೋಟಕ್ಕೆ ವಿಚಲಿತಗೊಳಿಸುವಂತಿವೆ ಅತಿ ಅಸಹ್ಯಕರವಾಗಿವೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು. ಇದೇ ವೇಳೆ ವ್ಯಕ್ತಿತ್ವ ಹಕ್ಕು, ವರ್ಚಸ್ಸಿನ ಹಕ್ಕಿಗೆ ಸಂಬಂಧಿಸಿದ ಅರ್ಜಿಯನ್ನು ನಿಯಮಿತ ಪೀಠ ವಿಚಾರಣೆ ನಡೆಸಲಿದೆ. ಅಲ್ಲಿಯವರೆಗೆ ಸಂವಿಧಾನದ 21ನೇ ವಿಧಿಯಡಿ ಶಿಲ್ಪಾ ಅವರ ಖಾಸಗಿತನ ಮತ್ತು ಗೌರವದ ಹಕ್ಕು ರಕ್ಷಿಸುವುದು ತನ್ನ ಕರ್ತವ್ಯ ಎಂದು ಅದು ತಿಳಿಸಿತು.
ಶಿಲ್ಪಾ ಅವರು ಖ್ಯಾತ ಚಲನಚಿತ್ರ ಹಾಗೂ ಟಿವಿ ಕಲಾವಿದೆ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 3.33 ಕೋಟಿ ಕ್ಕೂ ಹೆಚ್ಚು ಅನುಯಾಯಿಗಳು ಹೊಂದಿದ್ದಾರೆ. ಅವರನ್ನು ಅನರ್ಹ ಮತ್ತು ಅಸ್ವೀಕಾರಾರ್ಹ ರೀತಿಯಲ್ಲಿ ಚಿತ್ರಿಸಿರುವುದು ಅವರ ಪ್ರತಿಷ್ಠೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅದು ಹೇಳಿತು.
ಇಂತಹ ವಿಷಯಗಳ ನಿರಂತರ ಪ್ರಸಾರವು ಶೆಟ್ಟಿಯವರ ಗೌರವಯುತ ಜೀವನ ನಡೆಸುವ ಮೂಲಭೂತ ಹಕ್ಕಿಗೆ ಧಕ್ಕೆ ತರುತ್ತದೆ ಎಂದ ಅದು ಅವುಗಳನ್ನು ಕೂಡಲೇ ತೆಗೆದುಹಾಕುವಂತೆ ಸೂಚಿಸಿತು.
ಕೃತಕ ಬುದ್ಧಿಮತ್ತೆ ಆಧಾರಿತ ಡೀಪ್‌ಫೇಕ್‌ಗಳು, ಮಾರ್ಪಡಿಸಿದ ವಿಷಯಗಳು ಹಾಗೂ ಅನುಮತಿ ಇಲ್ಲದ ವಾಣಿಜ್ಯ ಬಳಕೆ ವಿರುದ್ಧ ತಮ್ಮ ವ್ಯಕ್ತಿತ್ವ ಮತ್ತು ಪ್ರಸಿದ್ಧಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ದೇಶದ ಅನೇಕ ಖ್ಯಾತನಾಮರು ನ್ಯಾಯಾಲಯಗಳ ಕದ ತಟ್ಟುತ್ತಿರುವುದು ಹೆಚ್ಚುತ್ತಿರುವ ಬೆನ್ನಲ್ಲಿಯೇ ಶಿಲ್ಪಾ ಈ ದಾವೆ ಹೂಡಿದ್ದಾರೆ.
ತಮ್ಮ ಹೆಸರು, ಚಿತ್ರ, ಸಾದೃಶ್ಯ, ಧ್ವನಿ ಹಾಗೂ ಇತರೆ ವಿಶಿಷ್ಟ ಗುಣಲಕ್ಷಣಗಳನ್ನು ಬಳಸದಂತೆ ವಿವಿಧ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿರುವ ಶಿಲ್ಪಾ ಶೆಟ್ಟಿ ಅವರು ಕೆಲ ಪ್ರತಿವಾದಿಗಳು ₹5 ಲಕ್ಷ ಪರಿಹಾರ ನೀಡಬೇಕು ಹಾಗೂ ತಮ್ಮ ಗೌಪ್ಯತೆ ಮತ್ತು ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿರುವ ಎಲ್ಲಾ ವಸ್ತುವಿಷಯಗಳನ್ನು ಇಡಿಯಾಗಿ ತೆಗೆದುಹಾಕಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಅವರ ಪರವಾಗಿ ವಕೀಲೆ ಸಾನಾ ರಯೀಸ್ ಖಾನ್ ವಾದ ಮಂಡಿಸಿದರು.