Bombay High Court, Bakrid 
ಸುದ್ದಿಗಳು

ಬಕ್ರೀದ್, ಉರುಸ್ ಹಿನ್ನೆಲೆ: ವಿಶಾಲ್‌ಗಢ ದರ್ಗಾದಲ್ಲಿ ಪ್ರಾಣಿಬಲಿಗೆ ಬಾಂಬೆ ಹೈಕೋರ್ಟ್ ಅನುಮತಿ

ಜೂನ್ 2024ರಲ್ಲಿ ಇದೇ ರೀತಿಯ ಮನವಿಯ ಪರವಾಗಿ ತೀರ್ಪು ನೀಡಿದ್ದನ್ನು ಗಮನಿಸಿದ ನ್ಯಾಯಾಲಯ ಅದೇ ಷರತ್ತುಗಳ ಆಧಾರದಲ್ಲಿ ಅರ್ಜಿ ಪುರಸ್ಕರಿಸಿತು.

Bar & Bench

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಿಶಾಲಗಢ ಕೋಟೆಯ ಆವರಣದಲ್ಲಿರುವ ದರ್ಗಾದಲ್ಲಿ ಬಕ್ರೀದ್ ಹಬ್ಬ ಮತ್ತು ಉರುಸ್ (ವಾರ್ಷಿಕೋತ್ಸವ) ಆಚರಣೆಯ ಸಮಯದಲ್ಲಿ ಪ್ರಾಣಿ ಬಲಿ ನೀಡಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ [ಹಜರತ್ ಪೀರ್ ಮಲಿಕ್ ರೆಹನ್ ಮೀರಾ ಸಾಹೇಬ್ ದರ್ಗಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಅನುಮತಿ ದರ್ಗಾ ಟ್ರಸ್ಟ್‌ಗೆ ಮಾತ್ರವಲ್ಲದೆ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವ ಭಕ್ತರಿಗೂ ಅನ್ವಯಿಸಲಿದೆ. ಕೋಟೆಯ ಆವರಣದಲ್ಲಿ ಪ್ರಾಣಿ ಹತ್ಯೆ ನಿಷೇಧಿಸಿ ಪುರಾತತ್ವ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ ನಿರ್ದೇಶನ ಪ್ರಶ್ನಿಸಿ ನೋಂದಾಯಿತ ಟ್ರಸ್ಟ್ ಹಜರತ್ ಪೀರ್ ಮಲಿಕ್ ರೆಹನ್ ಮೀರಾ ಸಾಹೇಬ್ ದರ್ಗಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

ಜೂನ್ 2024ರಲ್ಲಿ ಇದೇ ರೀತಿಯ ಮನವಿಯ ಪರವಾಗಿ ತೀರ್ಪು ನೀಡಿದ್ದನ್ನು ಗಮನಿಸಿದ ನ್ಯಾಯಾಲಯ ಅದೇ  ಷರತ್ತುಗಳ ಆಧಾರದಲ್ಲಿ ಅರ್ಜಿ ಪುರಸ್ಕರಿಸಿತು. ಜೂನ್ 2024ರ ಆದೇಶದಲ್ಲಿ ವಿಧಿಸಲಾದ ಎಲ್ಲಾ ಷರತ್ತುಗಳು ಅರ್ಜಿದಾರರು ಮತ್ತು ಭಕ್ತರಿಬ್ಬರಿಗೂ ಅನ್ವಯಿಸುತ್ತವೆ ಎಂದು ಅದು ಹೇಳಿದೆ.

ನಿರ್ದಿಷ್ಟ ನಿರ್ಬಂಧಿತ ಮತ್ತು ಖಾಸಗಿ ಜಾಗದಲ್ಲಿ ಮಾತ್ರವೇ ಪ್ರಾಣಿಬಲಿ ನಡೆಯಬೇಕು ತೆರೆದ ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ ಎಂದು ಹೈಕೋರ್ಟ್‌ ಷರತ್ತು ವಿಧಿಸಿತು.

ಕೊಲ್ಲಾಪುರ ಜಿಲ್ಲಾಧಿಕಾರಿಗೆ ವಿಶಾಲ್‌ಗಢ ಕೋಟೆ ಪ್ರದೇಶದೊಳಗೆ ಪ್ರಾಣಿ ಹತ್ಯೆಯನ್ನು ನಿಷೇಧಿಸಲು ಕೋರಿ 2023ರಲ್ಲಿ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಉಪ ನಿರ್ದೇಶಕರು ಪತ್ರ  ಬರೆದಿದ್ದರು. ಈ ಹಿನ್ನೆಲೆಯಲ್ಲಿ ದರ್ಗಾ ಟ್ರಸ್ಟ್ ನ್ಯಾಯಾಲಯದ ಮೊರೆ ಹೋಗಿತ್ತು.

ಮಹಾರಾಷ್ಟ್ರಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯಿದೆ 1998ರ ಪ್ರಕಾರ ಮತ್ತು ಸಾರ್ವಜನಿಕವಾಗಿ ಪ್ರಾಣಿ ಬಲಿ ನಿಷೇಧಿಸಿ ಔರಂಗಾಬಾದ್‌ ಪೀಠ ನೀಡಿದ್ದ ತೀರ್ಪಿನಂತೆ ನಿಷೇಧ ವಿಧಿಸಿರುವುದು ತಿಳಿದುಬಂದಿತ್ತು.