Bombay High Court
Bombay High Court 
ಸುದ್ದಿಗಳು

ಪರಿಹಾರ ನೀಡಲು ಸಮ್ಮತಿ: ಬಿನೋಯ್ ಕೊಡಿಯೇರಿ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

Bar & Bench

ಕೇರಳ ಸಿಪಿಎಂ ನಾಯಕ ದಿವಂಗತ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೋಯ್‌ ಕೊಡಿಯೇರಿ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್‌ ರದ್ದುಗೊಳಿಸಿದೆ.

ವರದಿಗಳ ಪ್ರಕಾರ ₹ 80 ಲಕ್ಷ ಪಾವತಿಸುವುದಾಗಿ ಬಿನೋಯ್ ದೂರುದಾರೆಯೊಂದಿಗೆ ರಾಜಿ ಮಾಡಿಕೊಂಡ ಬಳಿಕ ಎಫ್‌ಐಆರ್ ರದ್ದುಗೊಳಿಸಲಾಗಿದೆ.

ಸೆಪ್ಟೆಂಬರ್ 27ರಂದು ರಾಜಿ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ಎಸ್‌ ಎಂ ಮೋದಕ್ ಅವರಿದ್ದ ಪೀಠ ಪ್ರಕರಣ ರದ್ದುಗೊಳಿಸಿತು. ನ್ಯಾಯಾಲಯದ ವಿವರವಾದ ಆದೇಶದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲಾಗಿದೆ ಎಂದು ಆರೋಪಿಸಿ 32 ವರ್ಷದ ಮಹಿಳೆಯೊಬ್ಬರು ತನ್ನ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ರದ್ದುಗೊಳಿಸಲು ಕೋರಿ ಬಿನೋಯ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮಿಬ್ಬರಿಗೂ ಮಗು ಇದೆ ಎಂದು ಫಿರ್ಯಾದಿ ಮಹಿಳೆ ಹೇಳಿಕೊಂಡಿದ್ದರು.

ಬಿನೋಯ್‌ ಈಗಾಗಲೇ ಮದುವೆಯಾಗಿದ್ದು ತನ್ನನ್ನು ಮತ್ತು ತನ್ನ ಮಗುವನ್ನು ತೊರೆದ ಹಿನ್ನೆಲೆಯಲ್ಲಿ ದೂರುದಾರೆ 2018ರಲ್ಲಿ ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. 2020ರಲ್ಲಿ ಪೊಲೀಸರು ಬಿನೋಯ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಒಂದು ತಿಂಗಳ ಬಳಿಕ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ ಕಕ್ಷಿದಾರರಿಬ್ಬರೂ ರಾಜಿಗೆ ಯತ್ನಿಸುತ್ತಿರುವುದರಿಂದ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಲಾಯಿತು. ಎಫ್‌ಐಆರ್‌ ರದ್ದುಗೊಳಿಸಲು ದೂರುದಾರೆ ಸಮ್ಮತಿ ಕೂಡ ನೀಡಿದರು. ಅದರಂತೆ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್‌ ಬಿನೋಯ್‌ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸಿದೆ.

ಶನಿವಾರ ನಿಧನರಾದ ಬಾಲಕೃಷ್ಣನ್‌

ಕಳೆದ ಏಳು ವರ್ಷಗಳಿಂದ ಆಗಸ್ಟ್‌ 2022ರವರೆಗೆ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿಯಾಗಿದ್ದ ಹಿರಿಯ ರಾಜಕಾರಣಿ ಕೊಡಿಯೇರಿ ಬಾಲಕೃಷ್ಣನ್‌ ನಿನ್ನೆ (ಶನಿವಾರ) ಕ್ಯಾನ್ಸರ್‌ನಿಂದಾಗಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯರಾಗಿದ್ದ ಅವರು ಕೇರಳದ ಮಾಜಿ ಗೃಹ ಸಚಿವರೂ ಕೂಡ. ಅನಾರೋಗ್ಯದ ಕಾರಣಕ್ಕೆ ಕಳೆದ ಆಗಸ್ಟ್‌ನಲ್ಲಿ ಅವರು ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಬೆಂಗಳೂರು ಡ್ರಗ್ಸ್‌ ಜಾಲ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಾಲಕೃಷ್ಣನ್ ಅವರ ಮತ್ತೊಬ್ಬ ಪುತ್ರ, ವಕೀಲ ಬಿನೀಶ್ ಕೊಡಿಯೇರಿ ವಿರುದ್ಧ ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ಈ ಹಿಂದೆ ದೂರು ದಾಖಲಿಸಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಒಂದು ವರ್ಷ ಕಾಲ ಜೈಲಿನಲ್ಲಿದ್ದ ಬಿನೀಶ್‌ ನಂತರ ಕೊಚ್ಚಿಯಲ್ಲಿ ತಮ್ಮದೇ ಆದ ಕಾನೂನು ಸಂಸ್ಥೆ ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.