ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಸಭೆಗಳಲ್ಲಿ ಭಾಗವಹಿಸಿದ್ದೇಕೆ? ಸ್ಫೋಟ ತಡೆಯಲು ನೀವು ತೆಗೆದುಕೊಂಡ ಕ್ರಮಗಳು ಯಾವುವು ಎಂದು 2008ರ ಮಾಲೆಗಾಂವ್ ಸ್ಫೋಟದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನುಬಾಂಬೆ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರಿದ್ದ ಪೀಠ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಅಗತ್ಯ ಕಾರ್ಯವಿಧಾನದ ಒಪ್ಪಿಗೆ ಪಡೆಯದೆ ಎನ್ಐಎ ವಿಶೇಷ ನ್ಯಾಯಾಲಯ ಪ್ರಕರಣವನ್ನು ಪರಿಗಣಿಸಿರುವ ಸಂಬಂಧ ಪುರೋಹಿತ್ ಸಲ್ಲಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
"ಮುಂದೆ ಏನಾಗಲಿದೆ ಎಂದು ಪುರೋಹಿತ್ ಅವರಿಗೆ ತಿಳಿದಿದ್ದರೆ ಅದನ್ನು ತಡೆಯಲು ಅವರು ಯಾಕೆ ಯತ್ನಿಸಲಿಲ್ಲ" ಎಂದು ಶಿಂಧೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರೋಹಿತ್ ಪರ ವಕೀಲ ಶ್ರೀಕಾಂತ್ ಶಿವಾಡೆ ಅವರು ಪುರೋಹಿತ್ ಪಾಲ್ಗೊಂಡಿದ್ದ ಸಭೆಯು ʼಸಾಮಾಜಿಕ-ರಾಜಕೀಯ ಸಭೆಯಾಗಿದ್ದು, ಇದರಲ್ಲಿ ಉದ್ದೇಶಿತ ಸ್ಫೋಟಗಳ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ. ಸ್ಫೋಟದ ಬಗ್ಗೆ ತನ್ನ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ನೀಡಲು ಪುರೋಹಿತ್ ಸಭೆಯಲ್ಲಿ ಭಾಗವಹಿಸಿದ್ದರು ʼ ಎಂದರು.
ಆಗ ನ್ಯಾಯಮೂರ್ತಿ ಶಿಂಧೆ, “ತನ್ನ ಅಧಿಕೃತ ಕರ್ತವ್ಯದ ಭಾಗವಾಗಿ ಸಭೆಯಲ್ಲಿ ಪುರೋಹಿತ್ ಭಾಗವಹಿಸಿದ್ದರು ಎಂಬುದಕ್ಕೆ ಯಾವುದಾದರೂ ಸಾಕ್ಷಿಗಳಿವೆಯೇ ?” ಎಂದು ಪ್ರಶ್ನಿಸಿದರು. ಆಗ ಶಿವಾಡೆ “ಯಾವುದೇ ಪತ್ರ ವ್ಯವಹಾರ ನಡೆದಿಲ್ಲ ಆದರೆ ಪುರೋಹಿತ್ ಮಾಹಿತಿ ಕಲೆ ಹಾಕುತ್ತಿರುವ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿರುವ ಸಂಬಂಧ ಸಾಕ್ಷಿಯೊಬ್ಬರು ಹೇಳಿದ್ದಾರೆ. ಮೂಲವೊಂದರಿಂದ ದೊರೆತ ಮಾಹಿತಿ ಆಧರಿಸಿ ಕರ್ತವ್ಯ ನಿರ್ವಹಿಸಿದ ಪುರೋಹಿತ್ ನಂತರ ತಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ” ಎಂದು ತಿಳಿಸಿದರು.
ಈ ವಿಚಾರಗಳನ್ನು ಪುರೋಹಿತ್ ವಿಚಾರಣಾ ನ್ಯಾಯಾಲಯದಲ್ಲಿ ಮಂಡಿಸದೆ ಹೈಕೋರ್ಟ್‌ನಲ್ಲಿ ಏಕೆ ಪ್ರಸ್ತಾಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಾಡೆ “ಈವರೆಗೆ ವಿಚಾರಣೆಯಲ್ಲಿ ಯಾವುದೇ ಸಾಕ್ಷಿಗಳು ಪುರೋಹಿತ್ ವಿರುದ್ಧ ಏನನ್ನೂ ಹೇಳಿಲ್ಲ. ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲಾಗಿದೆ. ಈ ಸಂಪೂರ್ಣ ವಿಚಾರಣೆಯಿಂದ ಏಕೆ ಅವರು ಬಳಲಬೇಕು” ಎಂದರು.
ಸಮಯದ ಕೊರತೆಯಿಂದಾಗಿ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 15 ಕ್ಕೆ ಮುಂದೂಡಿದೆ. ವಿಚಾರಣೆಗೂ ಮುನ್ನವೇ ಎಲ್ಲಾ ವಕೀಲರು ಲಿಖಿತವಾಗಿ ತಮ್ಮ ವಾದ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.