ಮಗಳ ಮದುವೆ: ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ ಪೆರೋಲ್ ನೀಡಿದ ಬಾಂಬೆ ಹೈಕೋರ್ಟ್

1993ರ ಮುಂಬೈ ಸರಣಿ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ರುಬಿನಾ ಸುಲೇಮಾನ್ ಮೆಮನ್ ತಮ್ಮ ಮಗಳ ಮದುವೆಗೆ ಹಾಜರಾಗಲು ಅವಕಾಶ ಕಲ್ಪಿಸಿ ನ್ಯಾಯಾಲಯ ಪೆರೋಲ್ ನೀಡಿದೆ.
ಮಗಳ ಮದುವೆ: ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ ಪೆರೋಲ್ ನೀಡಿದ ಬಾಂಬೆ ಹೈಕೋರ್ಟ್
Published on

1993 ರ ಮುಂಬೈ ಸರಣಿ ಸ್ಫೋಟದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮಹಿಳೆಯೊಬ್ಬರು ತಮ್ಮ ಮಗಳ ಮದುವೆಗೆ ಹಾಜರಾಗಲು ಬಾಂಬೆ ಹೈಕೋರ್ಟ್‌ ಅವಕಾಶ ಕಲ್ಪಿಸಿ ಪೆರೋಲ್‌ ನೀಡಿದೆ. ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಅಭಯ್ ಅಹುಜಾ ಅವರಿದ್ದ ರಜೆಕಾಲದ ಪೀಠ ಅಪರಾಧಿ ರುಬಿನಾ ಸುಲೇಮಾನ್‌ ಮೆಮನ್‌ ಅವರ ಮಗಳ ಮಾನವ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ಮನವಿಯನ್ನು ಪುರಸ್ಕರಿಸಿತು.

ಮೆಮನ್‌ ಆರಂಭದಲ್ಲಿ ಪೆರೋಲ್‌ಗಾಗಿ ಯೆರವಾಡ ಕೇಂದ್ರ ಕಾರಾಗೃಹಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪೆರೋಲ್‌ ಸಂಬಂಧ ಅಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಡಿ. 29ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ದಿನಗಳ ಪೆರೋಲ್‌ಗೆ ಅವಕಾಶ ನೀಡಿತು. ಅಲ್ಲದೆ ಪೊಲೀಸ್‌ ಬಂದೋಬಸ್ತ್‌ಗೆ ಅಗತ್ಯವಾದ ಶುಲ್ಕ ಪಾವತಿಸುವಂತೆ ರುಬಿನಾಗೆ ಸೂಚಿಸಿದೆ.

Also Read
ಸಾಕ್ಷ್ಯ ಕೊರತೆ ಹಿನ್ನೆಲೆಯಲ್ಲಿ 12 ಮಂದಿ ವಿದೇಶಿ ತಬ್ಲೀಘಿ ಜಮಾತ್ ಸದಸ್ಯರನ್ನು ದೋಷಮುಕ್ತಗೊಳಿಸಿದ ಮುಂಬೈ ನ್ಯಾಯಾಲಯ

ಮದುವೆಯಲ್ಲಿ ಪಾಲ್ಗೊಳ್ಳಲು ರುಬಿನಾಗೆ ಕನಿಷ್ಠ 7 ದಿನಗಳವರೆಗೆ ಪೆರೋಲ್ ನೀಡಬೇಕೆಂದು ಆಕೆಯ ಪರ ವಕೀಲೆ ಫರ್ಹಾನಾ ಶಾ ವಿನಂತಿಸಿಕೊಂಡಿದ್ದರು. ರುಬಿನಾ 13 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ್ದು ಒಮ್ಮೆ ಕೂಡ ಪೆರೋಲ್‌ ಮೇಲೆ ಬಿಡುಗಡೆಯಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ಕಾಯಿದೆಯ ಅಡಿ ಆಕೆಯನ್ನು ಬಂಧಿಸಲಾಗಿತ್ತು.

Kannada Bar & Bench
kannada.barandbench.com