Tik Tok, Bombay High Court 
ಸುದ್ದಿಗಳು

ಟಿಕ್‌ಟಾಕ್‌ಗೆ 'ಹೆಸರುವಾಸಿ ವಾಣಿಜ್ಯ ಚಿಹ್ನೆ' ಸ್ಥಾನಮಾನ ನೀಡಲು ಬಾಂಬೆ ಹೈಕೋರ್ಟ್ ನಕಾರ

ರಾಷ್ಟ್ರೀಯ ಭದ್ರತೆಗೆ ಆತಂಕ ಇದೆ ಎಂದು ಭಾರತ ಸರ್ಕಾರ ಟಿಕ್‌ಟಾಕ್‌ ಅಪ್ಲಿಕೇಶನ್ ಮೇಲೆ ವಿಧಿಸಿರುವ ನಿಷೇಧ ವಾಣಿಜ್ಯ ಚಿಹ್ನೆ ನಿರ್ಧಾರ ಸಮರ್ಥಿಸುವುದರಲ್ಲಿ ಪ್ರಸಕ್ತ ಅಂಶವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ವಾಣಿಜ್ಯ ಚಿಹ್ನೆ ನಿಯಮಾವಳಿ 2017ರ ಸೆಕ್ಷನ್‌ 124ರ ಅಡಿಯಲ್ಲಿ ಟಿಕ್‌ಟಾಕ್‌ಗೆ ಹೆಸರುವಾಸಿಯಾದ ವಾಣಿಜ್ಯಚಿಹ್ನೆ ಸ್ಥಾನಮಾನ ನೀಡದೆ ಇರಲು ವಾಣಿಜ್ಯ ಚಿಹ್ನೆ ರಿಜಿಸ್ಟ್ರಾರ್‌ ಕೈಗೊಂಡ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.

ರಾಷ್ಟ್ರೀಯ ಭದ್ರತೆಗೆ ಆತಂಕ ಇದೆ ಎಂದು ಭಾರತ ಸರ್ಕಾರ ಟಿಕ್‌ಟಾಕ್‌ ಅಪ್ಲಿಕೇಶನ್ ಮೇಲೆ ವಿಧಿಸಿರುವ ನಿಷೇಧ ವಾಣಿಜ್ಯ ಚಿಹ್ನೆ ನಿರ್ಧಾರ ಸಮರ್ಥಿಸುವುದರಲ್ಲಿ ಅಗತ್ಯ ಅಂಶವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಟಿಕ್‌ಟಾಕ್ ಲಿಮಿಟೆಡ್ ತನ್ನ ವಕೀಲ ಫಹೀಮ್ ಅಹ್ಮದ್ ಮೂಲಕ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮನೀಶ್ ಪಿತಾಳೆ ಈ ತೀರ್ಪು ನೀಡಿದ್ದಾರೆ. ರಿಜಿಸ್ಟ್ರಾರ್ ನಿಷೇಧದ ಮೇಲೆ ಅವಲಂಬಿತರಾಗಿರುವುದು ತಪ್ಪೆಂದು ತನಗೆ ಅನ್ನಿಸುತ್ತಿಲ್ಲ. ವಾಣಿಜ್ಯ ಚಿಹ್ನೆ ಕಾಯಿದೆಯಡಿ ಗುರುತೊಂದು ಪ್ರಸಿದ್ಧವಾಗಿದೆಯೇ ಎಂದು ನಿರ್ಧರಿಸಲು ಅಗತ್ಯವೆಂದು ಪರಿಗಣಿಸಲಾದ "ಯಾವುದೇ ಸಂಗತಿ"  ಪರಿಗಣಿಸಲು ಅವಕಾಶ ನೀಡುತ್ತದೆ ಎಂದು ಅದು ಹೇಳಿದೆ.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಇರುವುದರಿಂದ ಟಿಕ್‌ಟಾಕ್‌ ಮೇಲೆ ನಿಷೇಧ ಹೇರಿರುವುದನ್ನು ಗಮನಿಸಿದ ನ್ಯಾಯಾಲಯ "ಇವು ಗಂಭೀರ ವಿಷಯಗಳು, ಇವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ " ಎಂದಿತು.

ವಾಣಿಜ್ಯ ಚಿಹ್ನೆ ನಿಯಮ 124ರ ಅಡಿಯಲ್ಲಿ ಹೆಸರುವಾಸಿ ವಾಣಿಜ್ಯ ಚಿಹ್ನೆ ಪಟ್ಟಿಯಲ್ಲಿ ಸೇರಿಸಲು ನಿರಾಕರಿಸಿ ರಿಜಿಸ್ಟ್ರಾರ್‌ ಅವರು ಅಕ್ಟೋಬರ್ 31, 2023ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ  ಟಿಕ್‌ಟಾಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.ತಾನು ಈಗಾಗಲೇ ಭಾರತದಲ್ಲಿ ನೋಂದಾಯಿತ ವಾಣಿಜ್ಯ ಚಿಹ್ನೆಯಾಗಿದ್ದರೂ ಹೆಸರುವಾಸಿ ವಾಣಿಜ್ಯ ಚಿಹ್ನೆಗಳಿಗೆ ನೀಡಲಾಗುತ್ತಿರುವ ವರ್ಧಿತ ಶಾಸನಬದ್ಧ ರಕ್ಷಣೆಯನ್ನು ತನಗೂ ನೀಡುವಂತೆ ಅದು ಕೋರಿತ್ತು.