ಪ್ರಸ್ತುತ ನಿಷ್ಕ್ರಿಯವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳಲ್ಲಿ ಒಂದಾದ ʼಕೊಚ್ಚಿ ಟಸ್ಕರ್ಸ್ ಕೇರಳʼ ಮಾಲೀಕರ ಪರವಾಗಿ ನೀಡಲಾಗಿದ್ದ ₹538 ಕೋಟಿಗೂ ಹೆಚ್ಚಿನ ಮೊತ್ತದ ಮಧ್ಯಸ್ಥಿಕೆ ತೀರ್ಪನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹಿನ್ನಡೆಯಾಗಿದೆ [ಬಿಸಿಸಿಐ ಮತ್ತು ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ಇನ್ನಿತರರ ನಡುವಣ ಪ್ರಕರಣ].
ಬಿಸಿಸಿಐ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಆರ್.ಐ. ಚಾಗ್ಲಾ ಅವರಿದ್ದ ಏಕಸದಸ್ಯ ಪೀಠ ಮಧ್ಯಸ್ಥಿಕೆದಾರರ ತೀರ್ಪಿನ್ನು ನ್ಯಾಯಾಲಯ ತಡೆ ಹಿಡಿಯಲು ಸಾಧ್ಯವಿಲ್ಲ ಎಂದಿತು.
2011ರ ಐಪಿಎಲ್ ಋತುವಿನಲ್ಲಿ ಭಾಗವಹಿಸಿದ್ದ ಕೊಚ್ಚಿ ಟಸ್ಕರ್ಸ್ ತಂಡವನ್ನು ಫ್ರಾಂಚೈಸಿ ಒಪ್ಪಂದ ಉಲ್ಲಂಘನೆಯ ಆರೋಪದ ಮೇಲೆ ಮುಂದಿನ ವರ್ಷ ಬಿಸಿಸಿಐ ವಜಾಗೊಳಿಸಿತ್ತು.
" ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 34ರ ಅಡಿಯಲ್ಲಿ ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ತುಂಬಾ ಸೀಮಿತವಾದುದು. ವ್ಯಾಜ್ಯದ ಅರ್ಹತೆಯನ್ನು ಪರಿಶೀಲಿಸುವ ಬಿಸಿಸಿಐನ ಪ್ರಯತ್ನ ಕಾಯಿದೆಯ ಸೆಕ್ಷನ್ 34 ರಲ್ಲಿರುವ ಆಧಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಾಕ್ಷ್ಯಗಳು, ಅರ್ಹತೆಗಳಿಗೆ ಸಂಬಂಧಿಸಿದಂತೆ ನೀಡಲಾದ ತೀರ್ಪಿನ ಬಗ್ಗೆ ಬಿಸಿಸಿಐಗೆ ಇರುವ ಅತೃಪ್ತಿ ತೀರ್ಪನ್ನು ಪ್ರಶ್ನಿಸಲು ಕಾರಣವಾಗುವುದಿಲ್ಲ " ಎಂದು ನ್ಯಾಯಾಲಯ ವಿವರಿಸಿದೆ.
ಬಿಸಿಸಿಐ ಕೊಚ್ಚಿ ಫ್ರಾಂಚೈಸಿಯನ್ನು ರದ್ದುಗೊಳಿಸಿದ್ದು ಒಪ್ಪಂದದ ಉಲ್ಲಂಘನೆಯಾಗಿದೆ ಎಂಬ ಮಧ್ಯಸ್ಥಿಕೆದಾರರ ತೀರ್ಪು " ದಾಖಲೆಯಲ್ಲಿರುವ ಪುರಾವೆಗಳ ಸೂಕ್ತ ಪರಾಮರ್ಶೆಯನ್ನು ಆಧರಿಸಿದೆ ಎಂಬುದನ್ನು ಪರಿಗಣಿಸಿ ಅದು ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 34ರ ಅಡಿಯಲ್ಲಿ ಯಾವುದೇ ಹಸ್ತಕ್ಷೇಪ ಬಯಸುವುದಿಲ್ಲ" ಎಂದು ಹೈಕೋರ್ಟ್ ಹೇಳಿದೆ. ಭಿನ್ನ ನಿಲುವು ಇದೆ ಎಂಬ ಕಾರಣಕ್ಕೆ ಮಧ್ಯಸ್ಥಿಕೆ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್‌ಎಸ್‌ಡಬ್ಲ್ಯೂ) ನೇತೃತ್ವದ ಒಕ್ಕೂಟಕ್ಕೆ ನೀಡಲಾದ ಮತ್ತು ನಂತರ ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ನಿರ್ವಹಿಸುತ್ತಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯನ್ನು ಸೆಪ್ಟೆಂಬರ್ 2011ರಲ್ಲಿ ಬಿಸಿಸಿಐ ರದ್ದುಗೊಳಿಸಿತ್ತು.
ಪಾಲುದಾರಿಕೆ ಕಾಯಿದೆಯಡಿಯಲ್ಲಿ ಆರ್‌ಎಸ್‌ಡಬ್ಲ್ಯೂನ ಹಕ್ಕುಗಳಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ತಿಳಿಸಿರುವ ಹೈಕೋರ್ಟ್ ಮಧ್ಯಸ್ಥಿಕೆಯನ್ನು ಅನುಚಿತವಾಗಿ ಅನ್ವಯಿಸಲಾಗಿದೆ ಎಂಬ ವಾದ ತಿರಸ್ಕರಿಸಿತು.
ಜೊತೆಗೆ ಯಾವುದೇ ಪೇಟೆಂಟ್ ಅಕ್ರಮ ಅಥವಾ ದೋಷ ಕಂಡುಬಂದಿಲ್ಲ ಎಂದು ತೀರ್ಮಾನಿಸಿದ ಅದು ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂ ಠೇವಣಿ ಇಟ್ಟ ಮೊತ್ತವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ ಮೇಲ್ಮನವಿ ಸಲ್ಲಿಸಲು ಬಿಸಿಸಿಐಗೆ ಆರು ವಾರಗಳ ಕಾಲಾವಕಾಶ ನೀಡಿತು.
ಬಿಸಿಸಿಐ ಪರವಾಗಿ ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್ ಕಾನೂನು ಸಂಸ್ಥೆಯ ಹಿರಿಯ ನ್ಯಾಯವಾದಿಗಳಾದ ರಫೀಕ್ ಎ ದಾದಾ ಮತ್ತು ಟಿ ಎನ್ ಸುಬ್ರಮಣಿಯನ್ ಮತ್ತವರ ತಂಡ ವಾದ ಮಂಡಿಸಿತ್ತು. ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂ ಸಂಸ್ಥೆಗಳನ್ನು ಹಿರಿಯ ವಕೀಲ ವಿಕ್ರಮ್ ನಂಕಣಿ ಹಾಗೂ ಅವರ ಕಾನೂನು ತಂಡ ಪ್ರತಿನಿಧಿಸಿತ್ತು.