Vaccine  AI generated image
ಸುದ್ದಿಗಳು

ಮಾನವರ ಮೇಲೆ ಭಾರತದ ಕ್ಯಾನ್ಸರ್ ಲಸಿಕೆ ಪ್ರಯೋಗ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

ಘನ ಅಂಗಾಂಗ ಕ್ಯಾನ್ಸರ್‌ಗಳಿಗೆ ಲಸಿಕೆಯಾದ ಪರ್-ಸಿ-ವ್ಯಾಕ್ಸ್ ಪ್ರಯೋಗ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಸಿಡಿಎಸ್ಒ ಆದೇಶವನ್ನು ನಾಸಿಕ್ ಮೂಲದ ಕಂಪನಿಯೊಂದು ಪ್ರಶ್ನಿಸಿದೆ.

Bar & Bench

ಘನ ಅಂಗಗಳ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ತನ್ನ ದೇಶೀಯ ಕ್ಯಾನ್ಸರ್ ಇಮ್ಯುನೊಥೆರಪಿ ಔಷಧ ಪರ್-ಸಿ-ವ್ಯಾಕ್ಸ್‌  ಹಂತ Iರ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಅನುಮತಿ ನೀಡುವಂತೆ ಕೋರಿ ಕ್ಯಾನ್ಸರ್ ಸಂಶೋಧನಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಭಾರತ ಔಷಧ ನಿಯಂತ್ರಕಕ್ಕೆ ಬಾಂಬೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ಶ್ವಾಸಕೋಶ, ಹೃದಯ, ಪಿತ್ತಜನಕಾಂಗ, ಮೂತ್ರಪಿಂಡದಂತಹ ಘನ ಅಂಗಾಂಗ ಕ್ಯಾನ್ಸರ್‌ಗಳಿಗೆ ಲಸಿಕೆಯಾದ ಪರ್-ಸಿ-ವ್ಯಾಕ್ಸ್ ಪ್ರಯೋಗ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಸಿಡಿಎಸ್‌ಸಿಒ ಏಪ್ರಿಲ್ 22ರಂದು ನೀಡಿದ್ದ ಆದೇಶವನ್ನು ನಾಸಿಕ್ ಮೂಲದ ಕಂಪನಿಯೊಂದು ಪ್ರಶ್ನಿಸಿದೆ. ಆದೇಶ "ನಿರಂಕುಶ," "ಅವೈಜ್ಞಾನಿಕ" ಮತ್ತು "ಕಾನೂನಿಗೆ ಎಸಗಿದ ವಂಚನೆ" ಎಂದು ಅದು ಆರೋಪಿಸಿದೆ.

ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿರುವ ನಾಸಿಕ್ ಮೂಲದ ಕಂಪನಿಯಾದ ದಾತಾರ್ ಕ್ಯಾನ್ಸರ್ ಜೆನೆಟಿಕ್ಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಸಿಡಿಎಸ್‌ಸಿಒಗೆ ನೋಟಿಸ್ ಜಾರಿ ಮಾಡಿತು.

ಪರ್-ಸಿ-ವ್ಯಾಕ್ಸ್ ಅನ್ನು ರೋಗಿಯಿಂದ ಪಡೆದ ಗೆಡ್ಡೆ ಕೋಶಗಳು ಅಥವಾ ಗೆಡ್ಡೆ ಕೋಶ ಮೇಲ್ಪದರಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿರುವುದರಿಂದ ಪ್ರಾಣಿಗಳ ಮಾದರಿಗಳ ಮೇಲೆ ಅದನ್ನು ಪರೀಕ್ಷಿಸುವುದು ಸೂಕ್ತವಲ್ಲ ಮತ್ತು ಕಾರ್ಯಸಾಧುವಲ್ಲ ಎಂದು ಕಂಪೆನಿ ಹೇಳಿದೆ.

ಅರ್ಜಿ ತಿರಸ್ಕರಿಸಿದ ಸಿಡಿಎಸ್‌ಸಿಒ ಕ್ರಮವು "ದುರುದ್ದೇಶಪೂರಿತ" ಎಂದಿರುವ ಸಂಸ್ಥೆಯು ಕಾಲಮಿತಿಯ ನಿರ್ಧಾರ ಕೈಗೊಳ್ಳುವುದಕ್ಕಾಗಿ ರೂಪಿಸಲಾದ ಕಾನೂನು ಸುರಕ್ಷತೆಗಳನ್ನು ತಪ್ಪಿಸುವ ಗುರಿ ಹೊಂದಿದ್ದು, ಅಧಿಕಾರದ ಅತಿರಂಜಿತ ಕಸರತ್ತು ಎಂದಿದೆ. ಹೀಗಾಗಿ ಸಿಡಿಎಸ್‌ಸಿಒ ಆದೇಶ ರದ್ದುಗೊಳಿಸಿ ಪ್ರಯೋಗಕ್ಕೆ ಅನುಮತಿಸಲು ಸಿಡಿಎಸ್‌ಸಿಒಗೆ ನಿರ್ದೇಶಿಸುವಂತೆ ಅದು ನ್ಯಾಯಾಲಯವನ್ನು ಕೋರಿದೆ.