ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಕೋವಿಡ್ ಲಸಿಕೆ ಕುರಿತ ಬಾಬಾ ರಾಮದೇವ್ ಹೇಳಿಕೆಗಳ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ

ಇಂತಹ ಹೇಳಿಕೆಗಳು ಆಯುರ್ವೇದಕ್ಕೆ ಕೆಟ್ಟ ಹೆಸರು ತರುವುದಲ್ಲದೆ ಬೇರೆ ರಾಷ್ಟ್ರಗಳೊಂದಿಗೆ ನಮ್ಮ ದೇಶ ಹೊಂದಿರುವ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಎಂದ ನ್ಯಾಯಾಲಯ.
Ramdev and Coronil
Ramdev and Coronil facebook

ಕೋವಿಡ್ ಲಸಿಕೆಯ ಚಿಕಿತ್ಸಾ ಸಾಮರ್ಥ್ಯವನ್ನು ಪ್ರಶ್ನಿಸಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಲಸಿಕೆ ತೆಗೆದುಕೊಂಡ ನಂತರವೂ ಕೋವಿಡ್‌ ಸೋಂಕು ತಗುಲಿದ್ದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಾಬಾ ರಾಮ್‌ದೇವ್ ಅವರು ನೀಡಿದ್ದ ಹೇಳಿಕೆಗಳ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ [ಸ್ಥಾನಿಕ ವೈದ್ಯರ ಸಂಘ, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ- ಏಮ್ಸ್‌, ರಿಷಿಕೇಶ್‌ ಮತ್ತಿತರರು ಹಾಗೂ ರಾಮಕೃಷ್ಣನ್‌ ಯಾದವ್‌ ಅಲಿಯಾಸ್‌ ಸ್ವಾಮಿ ರಾಮದೇವ್‌ ಮತ್ತಿತರರ ನಡುವಣ ಪ್ರಕರಣ].

ಇಂತಹ ಹೇಳಿಕೆಗಳು ಆಯುರ್ವೇದಕ್ಕೆ ಕೆಟ್ಟ ಹೆಸರು ತರುವುದಲ್ಲದೆ ಬೇರೆ ರಾಷ್ಟ್ರಗಳೊಂದಿಗೆ ನಮ್ಮ ದೇಶ ಹೊಂದಿರುವ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಪ್ರಕರಣದ ವಿಚಾರಣೆ ವೇಳೆ ಹೇಳಿದರು.

ಆಯುರ್ವೇದವು ಪುರಾತನ ಮತ್ತು ಗೌರವಾನ್ವಿತ ವೈದ್ಯಕೀಯ ಪದ್ಧತಿಯಾಗಿರುವುದರಿಂದ ಅದರ ವರ್ಚಸ್ವಿ ಹೆಸರನ್ನು ಹಾಳುಗೆಡವಬಾರದು ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಭಂಬಾನಿ ತಿಳಿ ಹೇಳಿದರು.

ಲಸಿಕೆ ಪಡೆದರೂ ಅಮೆರಿಕ ಅಧ್ಯಕ್ಷರು ಮೂರನೇ ಬಾರಿಗೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆಗಸ್ಟ್ 4 ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಮ್‌ದೇವ್ ಹೇಳಿಕೆಯನ್ನು ನೀಡಿದ್ದಾರೆ ಎಂಬುದಾಗಿ ಹಿರಿಯ ವಕೀಲ ಅಖಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.

Also Read
ಅಲೋಪತಿ ವಿರುದ್ಧ ರಾಮದೇವ್‌ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ಬೈಡನ್‌ ಅವರಿಗೆ ಸೋಂಕು ತಗುಲಿರುವುದು 200 ವರ್ಷಗಳನ್ನೂ ಮೀರದ ಇತಿಹಾಸ ಹೊಂದಿರುವ ಹಾಗೂ ಕಳೆದ 50 ವರ್ಷಗಳಿಂದ ಇಡೀ ಜಗತ್ತನ್ನು ನಾಶಪಡಿಸುತ್ತಿರುವ ವೈದ್ಯಕೀಯ ವಿಜ್ಞಾನದ (ಅಲೋಪತಿ) ವೈಫಲ್ಯವನ್ನು ತೋರಿಸುತ್ತದೆ ಎಂದು ವಿಡಿಯೋದಲ್ಲಿ ರಾಮದೇವ್‌ ಹೇಳಿದ್ದಾರೆ. “ ಅವರು (ಅಲೋಪತಿ ಪ್ರಾಕ್ಟೀಸ್‌ ಮಾಡುವವರು) ಇನ್ನೂ ಶೈಶವಾವಸ್ಥೆಯಲ್ಲಿದ್ದಾರೆ. ನಾನು ಎಳೆಯರನ್ನು ಟೀಕಿಸಲು ಬಯಸುವುದಿಲ್ಲ. ವೈದ್ಯಕೀಯ ವಿಜ್ಞಾನ 200 ವರ್ಷದಷ್ಟೂ ಹಳತಲ್ಲ. ಕಳೆದ 50 ವರ್ಷಗಳಿಂದ ಅವರು ಜಗತ್ತನ್ನು ನಾಶಪಡಿಸುತ್ತಿದ್ದಾರೆ, ”ಎಂದು ರಾಮ್‌ದೇವ್ ವ್ಯಂಗ್ಯವಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Also Read
ನಿಮ್ಮ ಬೆನ್ನು ನೀವೇ ತಟ್ಟಿಕೊಂಡಂತಿದೆ: ಕೊರೊನಿಲ್‌ ಕುರಿತ ರಾಮ್‌ದೇವ್‌ ಸ್ಪಷ್ಟೀಕರಣದ ಬಗ್ಗೆ ನ್ಯಾಯಾಲಯದ ಅಸಮಾಧಾನ

ಕೋವಿಡ್‌ ಗುಣಪಡಿಸುವ ಔಷಧ ಎಂಬುದಾಗಿ ಬಾಬಾ ರಾಮ್‌ ದೇವ್‌ ಅವರು ಕೊರೊನಿಲ್‌ ಕುರಿತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೊರೊನಿಲ್ ಕೋವಿಡ್‌ಗೆ ಔಷಧವಲ್ಲ ಎನ್ನಲು ಉತ್ತಮ ಸ್ಪಷ್ಟೀಕರಣ ನೀಡುವಂತೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎರಡೂ ಕಡೆಯವರು ಸಮಸ್ಯೆ ಬಗೆಹರಿಸಿಕೊಳ್ಳಲು ಈ ಹಿಂದಿನ ವಿಚಾರಣೆ ವೇಳೆ ನ್ಯಾಯಮೂರ್ತಿ ಭಂಭಾನಿ ಅವರು ತಿಳಿಸಿದ್ದರು.

ಫಿರ್ಯಾದುದಾರರಾದ ವೈದ್ಯರ ಎಲ್ಲಾ ಆತಂಕಗಳನ್ನು ನಿವಾರಿಸುವ ಉದ್ದೇಶಿತ ಕರಡನ್ನು ಸಿದ್ಧಪಡಿಸಿರುವುದಾಗಿ ಇಂದು ರಾಮ್‌ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿವಿ ಕಪೂರ್, ತಿಳಿಸಿದರು. ಆದರೆ ಹೊಸ ಸ್ಪಷ್ಟೀಕರಣ ಕೂಡ ತಪ್ಪು ದಾರಿಗೆಳೆಯುವಂತಿದೆ ಎಂದು ವೈದ್ಯರ ಪರ ವಕಾಲತ್ತು ಮಾಡಿದ ಸಿಬಲ್‌ ತಿಳಿಸಿದರು.

ಕೊರೊನಿಲ್‌ ಯಾವುದೇ ರೀತಿಯಲ್ಲಿಯೂ ಪರ್ಯಾಯ ಔಷಧವಲ್ಲ. ಅದು ಕೇವಲ ಪೂರಕ ಕ್ರಮವಷ್ಟೇ ಆಗಿದೆ. ಅದಕ್ಕೆ ನೀಡಿರುವ ಪರವಾನಗಿಯಲ್ಲಿಯೂ ರೋಗಲಕ್ಷಣಗಳಿಲ್ಲದ (ಅಸಿಂಪ್ಟಮ್ಯಾಟಿಕ್) ಕಡಿಮೆ ಸೋಂಕಿನ ಪ್ರಕರಣಗಳಲ್ಲಿ ಮಾತ್ರವೇ ಪೂರಕ ಕ್ರಮವಾಗಿ ಬಳಸಬಹುದು ಎನ್ನಲಾಗಿದೆ. ಹಾಗಾಗಿ ಇದು ಪರ್ಯಾಯ ಕ್ರಮವಲ್ಲ. ಆದ್ದರಿಂದ ಕೊರೊನಿಲ್‌ಅನ್ನು ಪೂರಕವಾಗಿ ಮಾತ್ರವೇ ನೀವು ತೆಗೆದುಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸಿಬಲ್‌ ಪಟ್ಟು ಹಿಡಿದರು. ಇಂದಿಗೂ ಪತಂಜಲಿ ಕೊರೊನಿಲ್‌ ಬಗ್ಗೆ ತಪ್ಪು ಮಾಹಿತಿಯನ್ನೇ ತನ್ನ ವೆಬ್‌ತಾಣದಲ್ಲಿ ಪ್ರಚುರ ಪಡಿಸುತ್ತಿರುವ ಬಗ್ಗೆಯೂ ಗಮನಸೆಳೆದರು.

ಸಿಬಲ್‌ ಅವರ ವಾದ ಇಂದಿಗೆ ಮುಕ್ತಾಯಗೊಂಡಿದ್ದು ಮಂಗಳವಾರದಿಂದ ಕಪೂರ್‌ ಅವರ ವಾದ ಸರಣಿ ಆರಂಭವಾಗಲಿದೆ. ಅಗತ್ಯಬಿದ್ದರೆ ಪ್ರಕರಣವನ್ನು ದೈನಂದಿನ ಆಧಾರದಲ್ಲಿ ಆಲಿಸಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com