ಸಾಮಾಜಿಕ ಜಾಲತಾಣ ಇಲ್ಲವೇ ಆನ್‌ಲೈನ್ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಹರಡಲಾಗುವ ಸುಳ್ಳು ಅಥವಾ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಫ್ಯಾಕ್ಟ್ ಚೆಕ್ (ಸತ್ಯ ಪರಿಶೀಲನಾ ಘಟಕ) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿಗೆ ಮಾಡಿದ್ದ ತಿದ್ದುಪಡಿಗಳನ್ನು ಬಾಂಬೆ ಹೈಕೋರ್ಟ್ 2:1 ಬಹುಮತದ ತೀರ್ಪಿನೊಂದಿಗೆ ಗುರುವಾರ ವಿಧ್ಯುಕ್ತವಾಗಿ ರದ್ದುಗೊಳಿಸಿತು [ಕುನಾಲ್ ಕಮ್ರಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ಅರ್ಜಿಗಳು].
ಹಾಸ್ಯಕಲಾವಿದ ಕುನಾಲ್ ಕಮ್ರಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಈ ತೀರ್ಪು ನೀಡಿದೆ.
"ಬಹುಮತದ ಅಭಿಪ್ರಾಯದ ನೆಲೆಯಲ್ಲಿ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರ ನಿಯಮ 3(1)(b)(v) ಅನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಲಾಗಿದೆ. ಅದರಂತೆ ಅರ್ಜಿಗಳನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ತಿಳಿಸಿತು.
ಪ್ರಕರಣದ ಸಂಬಂಧ ವಿಭಾಗೀಯ ಪೀಠ ಕಳೆದ ಜನವರಿಯಲ್ಲಿ ಭಿನ್ನ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ನೇಮಕವಾಗಿದ್ದ ಮೂರನೇ ನ್ಯಾಯಮೂರ್ತಿ (ಟೈಬ್ರೇಕರ್ ಜಜ್) ಎ ಎಸ್ ಚಂದೂರ್‌ಕರ್ ಅವರು ಕಳೆದ ವಾರ ತಿದ್ದುಪಡಿಗಳ ವಿರುದ್ಧ ತೀರ್ಪು ನೀಡಿದ್ದರು.
ಜನವರಿಯಲ್ಲಿ ತೀರ್ಪು ನೀಡುವ ವೇಳೆ ನ್ಯಾಯಮೂರ್ತಿ ಪಟೇಲ್ ಅವರು ತಿದ್ದುಪಡಿಗಳನ್ನು ವಿರೋಧಿಸಿದ್ದರೆ, ನ್ಯಾಯಮೂರ್ತಿ ನೀಲಾ ಅವರು ತಿದ್ದುಪಡಿಗಳನ್ನು ಎತ್ತಿ ಹಿಡಿದಿದ್ದರು. ಹೀಗಾಗಿ ಪ್ರಕರಣ ಮೂರನೇ ನ್ಯಾಯಮೂರ್ತಿಯವರ ಅಂಗಳ ತಲುಪಿತ್ತು.
ನ್ಯಾ. ಚಂದೂರ್‌ಕರ್ ಅವರ ತೀರ್ಪಿನ ಬಳಿಕ, ನ್ಯಾಯಮೂರ್ತಿ ಪಟೇಲ್ ಕಳೆದ ಏಪ್ರಿಲ್‌ನಲ್ಲಿ ನಿವೃತ್ತರಾದ ಕಾರಣ ಔಪಚಾರಿಕ ಹೇಳಿಕೆಗಾಗಿ ನ್ಯಾಯಮೂರ್ತಿ ಗಡ್ಕರಿ ನೇತೃತ್ವದ ಪೀಠದೆದುರು ಪ್ರಕರಣ ಇರಿಸಲಾಗಿತ್ತು.
ಸುಳ್ಳು ಆನ್‌ಲೈನ್ ಸುದ್ದಿ ಪತ್ತೆಹಚ್ಚುವುದಕ್ಕಾಗಿ ಸತ್ಯ ಪರಿಶೀಲನಾ ಘಟಕ ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ 3ನೇ ನಿಯಮ ಪ್ರಶ್ನಿಸಿ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರೂ ಸೇರಿದಂತೆ ವಿವಿಧ ಅರ್ಜಿದಾರರು ಮನವಿ ಸಲ್ಲಿಸಿದ್ದರು.
ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ಮತ್ತು 19 (1) (ಎ) (ಜಿ) ವಿಧಿಯನ್ನು (ಯಾವುದೇ ಉದ್ಯೋಗ ಇಲ್ಲವೇ ವ್ಯಾಪಾರದಲ್ಲಿ ತೊಡಗುವ ಸ್ವಾತಂತ್ರ್ಯ ಒದಗಿಸುವ) ಉಲ್ಲಂಘಿಸುತ್ತವೆ ಎಂದು ದೂರಲಾಗಿತ್ತು.