ಸುದ್ದಿಗಳು

ಮರಣದಂಡನೆ ವಿಧಿಸುವುದಕ್ಕಾಗಿ ಮಹಾಭಾರತದ ಮೇಲೆ ಅವಲಂಬನೆ: ವಿಚಾರಣಾ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ

ಮರಣದಂಡನೆಗಾಗಿ ವಿಚಾರಣಾ ನ್ಯಾಯಾಲಯ ಮಾಡಿರುವ ತರ್ಕ ತುಂಬಾ ವಿಚಿತ್ರವಾಗಿದೆ. ಅದು ಮಹಾಭಾರತದ ಶ್ಲೋಕವನ್ನು ಉಲ್ಲೇಖಿಸಿದ್ದು ಇದು ಅನಗತ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

Bar & Bench

ನಾಲ್ವರನ್ನು ಹತ್ಯೆ ಮಾಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯ ತನ್ನ ತೀರ್ಪಿಗೆ ಅಗತ್ಯವಿಲ್ಲದ ವಿಚಿತ್ರ ಕಾರಣಗಳನ್ನು ನೀಡಿರುವುದನ್ನು ಬಾಂಬೆ ಹೈಕೋರ್ಟ್‌ ಈಚೆಗೆ ಖಂಡಿಸಿದೆ

ಪ್ರಕರಣದ ನಿರ್ದಿಷ್ಟ ಸಂಗತಿಗಳಿಗೆ ಒತ್ತು ನೀಡುವ ಬದಲು ಮರಣ ದಂಡನೆ ನೀಡುವುದಕ್ಕಾಗಿ ಕೊಲೆಗಳ ಅಂಕಿಅಂಶಗಳಷ್ಟನ್ನೇ  ಅವಲಂಬಿಸಿದೆ ಎಂದು ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ಅಭಯ್ ಮಂತ್ರಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರತಿ ಕ್ರಿಮಿನಲ್ ವಿಚಾರಣೆಗೆ ತನ್ನದೇ ಆದ ಗುಣಲಕ್ಷಣಗಳು ಮತ್ತು ವ್ಯತ್ಯಾಸಗಳಿರುವ ಪ್ರತ್ಯೇಕ ಮೌಲ್ಯಮಾಪನದ ಅಗತ್ಯವಿರುತ್ತದೆ ಎಂದು ಹೈಕೋರ್ಟ್‌ ಒತ್ತಿಹೇಳಿತು.

"ಮರಣದಂಡನೆಗಾಗಿ ವಿಚಾರಣಾ ನ್ಯಾಯಾಲಯ ಮಾಡಿರುವ ತರ್ಕ ತುಂಬಾ ವಿಚಿತ್ರವಾಗಿದೆ. ಅದು ಮಹಾಭಾರತದ ಶ್ಲೋಕವನ್ನು ಉಲ್ಲೇಖಿಸಿದ್ದು ಇದು ಅನಗತ್ಯ ಕಸರತ್ತು ಎಂದು ನಾವು ಭಾವಿಸುತ್ತೇವೆ. ಆಸಕ್ತಿಕರ ವಿಚಾರ ಎಂದರೆ ತೀರ್ಪಿನ ಪ್ಯಾರಾ ಸಂಖ್ಯೆ 344 ರಲ್ಲಿ, ವಿಚಾರಣಾ ನ್ಯಾಯಾಲಯ ಕಳೆದ 10 ವರ್ಷಗಳ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ ಕೆಲವು ಅಪರಾಧ ದತ್ತಾಂಶಗಳನ್ನು ನೀಡಿದೆ... ಆ ಅಂಕಿಅಂಶಗಳ ಆಧಾರದ ಮೇಲೆ, ಒಂದೇ ಘಟನೆಯಲ್ಲಿ 4 ಕೊಲೆ ಸಂಭವಿಸಿರುವ ಈ ಘಟನೆ ವಿರಳವಾಗಿದ್ದು ಈ ಹಿನ್ನೆಲೆಯಲ್ಲಿ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬ ವರ್ಗಕ್ಕೆ ಸೇರುತ್ತದೆ ಎಂದಿದೆ. ನಮ್ಮ ಪ್ರಕಾರ, ವಿಚಾರಣಾ ನ್ಯಾಯಾಲಯದ ವಿಧಾನ ದೋಷಯುಕ್ತವಾಗಿದ್ದು, ಕೆಲವು ಅಂಕಿಅಂಶಗಳನ್ನು ಆಧರಿಸಿ, ಪ್ರಕರಣದ ವಾಸ್ತವಾಂಶ ಗ್ರಹಿಸದೆ ತೀರ್ಪು ನೀಡಲಾಗದು. ವಿಚಾರಣಾ ನ್ಯಾಯಾಲಯದ ನಡೆ ಸಂಪೂರ್ಣ ದೋಷಯುಕ್ತವಾಗಿದೆ” ಎಂದು ನವೆಂಬರ್ 13ರ ತೀರ್ಪು ಹೇಳಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ತಾಯಿಯ ಕುಟುಂಬದ ನಾಲ್ವರನ್ನು ಕೊಂದ ಆರೋಪ ಕುರಿತಾಗಿ ಕುಟುಂಬ ಪೋಷಕರು ಹಾಗೂ ಅವರ ಮಗ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಆರೋಪಿಗಳಾದ ಹರಿಭಾವು ತೆಲ್ಗೋಟೆ (66), ಅವರ ಪತ್ನಿ ದ್ವಾರಕಾಬಾಯಿ ತೆಲ್ಗೋಟೆ (55), ಮತ್ತು ಅವರ ಮಗ ಶ್ಯಾಮ್ ತೆಲ್ಗೋಟೆ (35) ಧನರಾಜ್ ಚಾರ್ಹಟೆ, ಅವರ ಮಕ್ಕಳಾದ ಶುಭಂ ಮತ್ತು ಗೌರವ್ ಮತ್ತು ಅವರು ನಡೆಸಿದ ಪೂರ್ವ ನಿಯೋಜಿತ ಕೃತ್ಯಕ್ಕಾಗಿ ಸೆಷನ್ಸ್ ನ್ಯಾಯಾಲಯ ಮೇ 2024 ರಲ್ಲಿ ದೋಷಿಗಳೆಂದು ತೀರ್ಪು ನೀಡಿತ್ತು. ಆರೋಪಿಗಳು ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರಿಂದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಹೇಳಿದ್ದರು. ಆದರೆ ತಮಗೆ ವಿಧಿಸಿರುವ ಮರಣದಂಡನೆ ಅಸಮಂಜಸ ಎಂದು ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್‌, ಅಪರಾಧದ ಕ್ರೌರ್ಯ ಕಂಡುಕೇಳರಿಯದಂತಿದ್ದರೆ ಹಾಗೂ ಅಪರಾಧಿ ಸುಧಾರಣೆಯಾಗುವ ಸಾಧ್ಯತೆಯೇ ಇಲ್ಲ ಎಂದಾಗ ಮಾತ್ರ ಮರಣದಂಡನೆ ವಿಧಿಸಬೇಕು ಎಂದಿರುವುದನ್ನು ಪ್ರಸ್ತಾಪಿಸಿತು.