ಎಲ್ಗಾರ್ ಪರಿಷತ್ ಕಾರ್ಯಕ್ರಮ ಬಳಿಕ ನಡೆದ ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯಿಂದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಹಿಂದೆ ಸರಿದಿದ್ದಾರೆ.
ಈ ಕುರಿತಂತೆ ನ್ಯಾಯಮೂರ್ತಿ ಶಿಂಧೆ ಅವರು ಶೀಘ್ರದಲ್ಲೇ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿವೆ. ಅಧಿಕೃತ ಪ್ರಕಟಣೆ ನಂತರ ಪ್ರಕರಣದ 15 ಆರೋಪಿಗಳ ಪರ ವಾದ ಮಂಡಿಸುತ್ತಿರುವ ವಕೀಲರು ಅರ್ಜಿಗಳ ವಿಚಾರಣೆಗೆ ಹೊಸ ಪೀಠ ರಚಿಸುವಂತೆ ಆಡಳಿತಾತ್ಮಕ ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಬೇಕಾಗುತ್ತದೆ.
ನ್ಯಾ. ಶಿಂಧೆ ನೇತೃತ್ವದ ಪೀಠ 2020ರಿಂದ ಭೀಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದ ರಿಟ್ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ನ್ಯಾಯಮೂರ್ತಿ ಪಿ ಬಿ ವರಾಲೆ ಅವರು ಕೂಡ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸುವುದರಿಂದ ಹಿಂದೆ ಸರಿದಿದ್ದರು.
ಡಿಫಾಲ್ಟ್ ಜಾಮೀನು ನಿರಾಕರಿಸುವ ತಮ್ಮದೇ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿರುವ ಅರ್ಜಿ ಆಲಿಸುವುದನ್ನು ಹೊರತುಪಡಿಸಿ ನ್ಯಾಯಮೂರ್ತಿಗಳು ಉಳಿದೆಲ್ಲಾ ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ʼಬಾರ್ ಅಂಡ್ ಬೆಂಚ್ʼಗೆ ಮಾಹಿತಿ ನೀಡಿವೆ. ಪ್ರಕರಣದ ಇಬ್ಬರು ಆರೋಪಿಗಳಾದ ತೆಲಗು ಕವಿ ವರವರರಾವ್, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ಪ್ರಕಟಿಸಿದ ಎರಡು ಪ್ರಮುಖ ಆದೇಶಗಳನ್ನು ನ್ಯಾ. ಶಿಂಧೆ ನೇತೃತ್ವದ ಪೀಠ ನೀಡಿದೆ.
ನ್ಯಾಯಾಂಗ ಬಂಧನದಲ್ಲಿದ್ದಾಗ ನಿಧನರಾದ ಪ್ರಕರಣದ ಮತ್ತೊಬ್ಬ ಆರೋಪಿ ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಜಾಮೀನು ಅರ್ಜಿಯನ್ನೂ ಪೀಠ ವಿಚಾರಣೆ ನಡೆಸುತ್ತಿತ್ತು. ಸ್ವಾಮಿ ಅವರ ಸಮಾಜ ಸೇವೆಯನ್ನು ನ್ಯಾ. ಶಿಂಧೆ ಶ್ಲಾಘಿಸಿದ್ದರು. ಇದಕ್ಕೆ ಎನ್‌ಐಎ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ತಮ್ಮ ಹೇಳಿಕೆ ಹಿಂಪಡೆದಿದ್ದರು.