Nupur Sharma and Supreme Court  Facebook
ಸುದ್ದಿಗಳು

ನೂಪುರ್ ಶರ್ಮಾ ಪ್ರಕರಣ: ಎಫ್ಐಆರ್ ಒಗ್ಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ

ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರೆಟೆಜಿಕ್ ಆಪರೇಷನ್ಸ್ (ಐಎಫ್ಎಸ್ಒ) ತನಿಖೆ ನಡೆಸಲಿದೆ.

Bar & Bench

ಪ್ರವಾದಿ ಮುಹಮ್ಮದ್‌ ಕುರಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಅರ್ಜಿದಾರೆಯ ಜೀವಕ್ಕೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆ ಇರುವುದನ್ನು ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ತನಿಖೆಗಾಗಿ ಒಗ್ಗೂಡಿಸಿ ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ನಿರ್ದೇಶನ ನೀಡುತ್ತಿರುವುದಾಗಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ದಾಖಲಾದ ಮೊದಲ ಎಫ್‌ಐಆರ್‌ ಜೊತೆ ದೇಶದ ವಿವಿಧೆಡೆಗಳಲ್ಲಿ ದಾಖಲಾಗಿರುವ ಉಳಿದ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್‌ಎಸ್‌ಒ) ತನಿಖೆ ನಡೆಸಲಿದೆ.

ಇದೇ ವೇಳೆ ನೂಪುರ್‌ ಶರ್ಮಾಗೆ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆ ವಿಸ್ತರಿಸಲಾಗುವುದು. ಈಗಿನ ಮತ್ತು ಉಳಿದ ಎಫ್‌ಐಆರ್‌ ರದ್ದುಗೊಳಿಸಲು ದೆಹಲಿ ಹೈಕೋರ್ಟ್‌ ಸಂಪರ್ಕಿಸಿ ತಮ್ಮ ಹಕ್ಕು ಮತ್ತು ಪರಿಹಾರ ಪಡೆಯಲು ನೂಪುರ್‌ ಶರ್ಮಾ ಸ್ವತಂತ್ರರು. ಯಾವುದೇ ಸ್ಪಷ್ಟೀಕರಣಕ್ಕಾಗಿ ಪಕ್ಷಕಾರರು ದೆಹಲಿ ಹೈಕೋರ್ಟ್‌ ಸಂಪರ್ಕಿಸಬೇಕು ಎಂದು ಪೀಠ ಸ್ಪಷ್ಟಪಡಿಸಿತು.

ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ತನಿಖೆ ನಡೆಸುವಂತೆ ನೂಪುರ್‌ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಶರ್ಮಾ ಪರ ಹಿರಿಯ ವಕೀಲರಾದ ಮಣಿಂದರ್‌ ಸಿಂಗ್‌ ವಾದ ಮಂಡಿಸಿದರು.

ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಲು ಅವಕಾಶ ಮಾಡಿಕೊಟ್ಟದ್ದನ್ನು ಪಶ್ಚಿಮ ಬಂಗಾಳ ಪರ ಹಿರಿಯ ವಕೀಲರಾದ ಮೇನಕಾ ಗುರುಸ್ವಾಮಿ ತೀವ್ರವಾಗಿ ಆಕ್ಷೇಪಿಸಿದರು. ನೂಪುರ್‌ ವಿರುದ್ಧದ ಮೊದಲ ಎಫ್‌ಐಆರ್ ದೆಹಲಿಯಲ್ಲಿ ದಾಖಲಾಗಿಲ್ಲ. ಪ್ರಕರಣದ ನ್ಯಾಯವ್ಯಾಪ್ತಿ ಆಯ್ದುಕೊಳ್ಳಲು ಆರೋಪಿಗೆ ಹೇಗೆ ಅವಕಾಶ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರತಿಕ್ರಿಯೆಯಾಗಿ ನ್ಯಾಯಾಲಯ ಮೊದಲ ಎಫ್‌ಐಆರ್‌ ತತ್ವದಿಂದ ಆಚೆಗುಳಿಯುವುದನ್ನು ಕಾನೂನಾಗಿ ಹೇಳುತ್ತಿಲ್ಲ. ತನ್ನ ಆದೇಶವನ್ನು ಈ ರೀತಿ ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿತು.

ಆಗ ಮೇನಕಾ ಅವರು “ಅರ್ಜಿದಾರರ ಪ್ರಾರ್ಥನೆಯನ್ನು ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಅದು ದುರದೃಷ್ಟವಶಾತ್‌ ದೇಶದೆಲ್ಲೆಡೆ ಕಿಡಿ ಹೊತ್ತಿಸಿತು. ಹೇಳಿಕೆಯನ್ನು ಬೆಂಬಲಿಸುವ ಎರಡೂ ಕಡೆಯ ರಾಜಕಾರಣಿಗಳು ಇದ್ದಾರೆ. ನಾನು ಜಂಟಿ ಎಸ್‌ಐಟಿ ತನಿಖೆ ಪ್ರಸ್ತಾಪಿಸಿದೆ. ಅದು ನಡೆಯಲಿಲ್ಲ. ಪಶ್ಚಿಮ ಬಂಗಾಳ ಸರ್ಕಾರ ಆಕೆಗೆ ಭದ್ರತೆ ಒದಗಿಸಲಿದೆ. ಆದರೆ ಅವರು ತಮ್ಮ ಪರ ತೀರ್ಪು ಬರಬೇಕೆಂದು ಯತ್ನಿಸುತ್ತಿದ್ದಾರೆ" ಎಂದರು.

ಆದರೆ ಮತ್ತೆ ಎಸ್‌ಐಟಿಯನ್ನು ಒಂದು ತನಿಖಾ ಸಂಸ್ಥೆಯಿಂದಲೇ ಮಾಡಬೇಕಿದ್ದು ದೆಹಲಿ ಪೊಲೀಸರಲ್ಲೇ ಎಸ್‌ಐಟಿ ರಚಿಸುವಂತೆ ಕೇಳಬಹುದು ಎಂದು ನ್ಯಾಯಾಲಯ ಹೇಳಿತು. ವಿಶೇಷ ತನಿಖಾ ತಂಡದ ಮೇಲ್ವಿಚಾರಣೆ ನ್ಯಾಯಾಲಯದ ನೇತೃತ್ವದಲ್ಲಿ ನಡೆಯಬೇಕು ಎಂದು ಮೇನಕಾ ಕೋರಿದಾಗ ನ್ಯಾಯಾಲಯ “ಇದು ತನಿಖಾ ಸಂಸ್ಥೆ ಮೇಲೆ ಅನಪೇಕ್ಷಿತ ಒತ್ತಡ ಉಂಟುಮಾಡುತ್ತದೆ. ತನಿಖಾ ಸಂಸ್ಥೆ ನಿರ್ಲಿಪ್ತ ವಾತಾವರಣದಲ್ಲಿರಬೇಕು” ಎಂದಿತು.

ನೂಪುರ್‌ ಹೇಳಿಕೆಗಳು ಕಾನೂನು ಮತ್ತು ಅಂತಹ ವಾತಾವರಣವನ್ನು ಕಲುಷಿತಗೊಳಿಸಿವೆ ಎಂದು ಮೇನಕಾ ವಾದಿಸಿದರೂ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲು ಕೋರ್ಟ್ ನಿರ್ದೇಶಿಸಿತು. ಈ ವಿಚಾರವನ್ನು ಬಾಕಿ ಇರಿಸುವಂತೆ ಮೇನಕಾ ಅವರು ಕೋರಿದರೂ ನ್ಯಾಯಾಲಯ ಅದನ್ನು ಮನ್ನಿಸಲಿಲ್ಲ. “ಇದಕ್ಕೆ ಯಾವುದೇ ಉದ್ದೇಶವಿಲ್ಲ. ಯಾವುದೇ ಸ್ಪಷ್ಟೀಕರಣಕ್ಕಾಗಿ ದೆಹಲಿ ಹೈಕೋರ್ಟನ್ನು ಸಂಪರ್ಕಿಸಬಹುದು” ಎಂದು ಪೀಠ ಹೇಳಿತು.

ಆಕೆಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು ಕೋಲ್ಕತ್ತಾ ಪೊಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿರುವುದರಿಂದ, ತಕ್ಷಣದ ಬಂಧನಕ್ಕೆ ಕಾರಣವಾಗಲಿದೆ ಎಂದು ಕೋರ್ಟ್ ಹೇಳಿದೆ. ಈ ನಿದರ್ಶನಗಳ ಬೆಳಕಿನಲ್ಲಿ, ನೂಪುರ್‌ ಹೇಗೆ ಪರ್ಯಾಯ ಪರಿಹಾರ ಪಡೆಯಲು ಅವಕಾಶ ಮಾಡಿಕೊಡಬಹುದು ಎಂಬುದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ.

ಆದ್ದರಿಂದ ನೂಪುರ್‌ ಅವರು ಒಂದೇ ಹೈಕೋರ್ಟ್‌ ಸಂಪರ್ಕಿಸಲು ಅನುವಾಗುವಂತಹ ಆಯ್ಕೆ ಅನ್ವೇಷಿಸಬೇಕೆಂದು ತಿಳಿಸಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಿತು.