ನ್ಯಾಯಾಲಯದ ವಿಚಾರಣೆಯ ಹೊರತಾಗಿ ಸರ್ಕಾರಿ ಅಧಿಕಾರಿಗಳೇ ಆರೋಪಿಯ ಅಪರಾಧ ಹಿನ್ನೆಲೆಯನ್ನು ಪ್ರಸ್ತಾಪಿಸಿ ಆತನ ಕಟ್ಟಡ ಕೆಡವುವ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಅಂಕುಶ ಹಾಕಿದ್ದರೂ ಬುಲ್ಡೋಜರ್ ಬಳಸಿ ನೆಲಸಮ ಕಾರ್ಯಾಚರಣೆ ಮೂಲಕ ಶಿಕ್ಷೆ ವಿಧಿಸುವುದನ್ನು ಮುಂದುವರೆಸುತ್ತಿರುವುದಕ್ಕೆ ಉತ್ತರ ಪ್ರದೇಶ ಸರ್ಕಾರವನ್ನು ಅಲಾಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ [ಫೈಯ್ಮುದ್ದೀನ್ ಇನ್ನಿತರರು ಮತ್ತು ಉತ್ತರ ಪ್ರದೇಶ ಸರ್ಕಾರ ಮತ್ತಿತರರ ನಡುವಣ ಪ್ರಕರಣ].
ಅಪರಾಧ ನಡೆದ ತಕ್ಷಣವೇ ಆರೋಪಿ ವಾಸಸ್ಥಳ ತೆರವುಗೊಳಿಸುವುದಾಗಿ ನೋಟಿಸ್ ನೀಡಿ ಕೂಡಲೇ ಕಟ್ಟಡ ಧ್ವಂಸಗೊಳಿಸುತ್ತಿರುವ ಹಲವು ಪ್ರಕರಣಗಳು ತಮ್ಮ ಗಮನಕ್ಕೆ ಬಂದಿರುವುದಾಗಿ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸಿದ್ಧಾರ್ಥ್ ನಂದನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ಹೇಳಿರುವಂತೆ ಶಿಕ್ಷೆ ವಿಧಿಸುವ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಸೇರಿರುವುದರಿಂದ ಹೀಗೆ ದಂಡಿಸುವ ಕ್ರಮ ಅಧಿಕಾರ ವಿಭಜನೆ ತತ್ವಕ್ಕೆ ವಿರುದ್ಧವಾಗಿದೆ. ಇಂತಹ ಸ್ಪಷ್ಟ ನಿರ್ದೇಶನಗಳಿದ್ದರೂ ಈ ಧ್ವಂಸ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಜನವರಿ 21ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಉಲ್ಲಂಘನೆಯಅಗಿರುವುದರಿಂದ ಕೆಲವು ಕಾನೂನು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆಯೆಂದು ಹೈಕೋರ್ಟ್ ತಿಳಿಸಿದ್ದು ಆ ಐದು ಪ್ರಶ್ನೆಗಳು ಇಂತಿವೆ:
ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಅದರಲ್ಲಿಯೂ 85 ಮತ್ತು 86ನೇ ಪ್ಯಾರಾಗ್ರಾಫ್‌ಗಳನ್ನು ಪಾಲನೆ ಮಾಡದೆ ಇರಲು ಸಾಧ್ಯವೇ?
ಧ್ವಂಸಗೊಳಿಸುವ ಅಧಿಕಾರವಿದೆ ಎಂಬುದೇ ಕಟ್ಟಡ ಧ್ವಂಸಗೊಳಿಸುವ ಕ್ರಿಯೆಗೆ ನ್ಯಾಯಸಮ್ಮತತೆಯನ್ನು ನೀಡುತ್ತದೆಯೇ? ಅಥವಾ ಸಾರ್ವಜನಿಕ ಅವಶ್ಯಕತೆ/ಉದ್ದೇಶ ಇಲ್ಲದ ಸಂದರ್ಭದಲ್ಲಿ ವಾಸಸ್ಥಳವನ್ನು ಧ್ವಂಸಗೊಳಿಸಬಾರದೆಂಬ "ಪ್ರಭುತ್ವವೇ ಪೋಷಕ" ಎಂಬ ತತ್ವದ ಅಡಿಯಲ್ಲಿ ಪ್ರಭುತ್ವದ ಮೇಲೆ ಕರ್ತವ್ಯವಿದೆಯೇ?
ಅಪರಾಧ ಸಂಭವಿಸಿದ ತಕ್ಷಣವೇ ಕಟ್ಟಡ ಧ್ವಂಸಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳು, ಕಾರ್ಯಾಂಗ ವಿವೇಚನೆಯ ಭೇದ ಸೃಷ್ಟಿಸುತ್ತವೆಯೇ?
ಪ್ರಭುತ್ವಕ್ಕೆ ಕಟ್ಟಡ ಧ್ವಂಸಗೊಳಿಸುವ ಅಧಿಕಾರ ಮತ್ತು ಸಂವಿಧಾನದ ಕಲಂ 14 ಹಾಗೂ 21ರ ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು ಹೇಗೆ?
“ಸಮಂಜಸವಾದ ಭಯ” ಇದ್ದ ಮಾತ್ರಕ್ಕೆ ನಾಗರಿಕ ಈ ನ್ಯಾಯಾಲಯ ಸಂಪರ್ಕಿಸಲು ಕಾರಣವಾಗಬಹುದೇ? ಹೌದಾದರೆ, ಇಂತಹ “ಸಮಂಜಸವಾದ ಭಯ” ಇರುವುದನ್ನು ನ್ಯಾಯಾಲಯ ನಿರ್ಧರಿಸಲು ಕನಿಷ್ಠ ಯಾವ ಅಂಶಗಳು ಅಗತ್ಯ?
ತಮ್ಮ ಸಂಬಂಧಿಕನ ಮೇಲೆ ಪೋಕ್ಸೊ ಮತ್ತು ಅಕ್ರಮ ಧಾರ್ಮಿಕ ಮತಾಂತರ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾದ ಬಳಿಕ ತಮ್ಮ ಮನೆ ಹಾಗೂ ವ್ಯವಹಾರಗಳನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿ ಕುಟುಂಬವೊಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ಅರ್ಜಿದಾರರ ಜೀವ ಮತ್ತು ಆಸ್ತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ ಫೆಬ್ರವರಿ 9ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.