

ಮಕ್ಕಳ ರಕ್ಷಣೆಯ ಆಶಯ ಹೊಂದಿರುವ ಕಾಯಿದೆಗಳನ್ನು ಹದಿಹರೆಯದವರ ಪರಸ್ಪರ ಸಮ್ಮತಿಯ ಪ್ರೇಮ ಸಂಬಂಧವನ್ನು ಶಿಕ್ಷಿಸಲು ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು ಅಂತಹ ಜೋಡಿಗಳನ್ನು ಕಠಿಣ ಕ್ರಿಮಿನಲ್ ಕ್ರಮಗಳಿಂದ ರಕ್ಷಿಸುವುದಕ್ಕಾಗಿ ʼರೋಮಿಯೋ ಜ್ಯೂಲಿಯೆಟ್ ಅನುಚ್ಛೇದʼ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಸಲಹೆ ನೀಡಿದೆ [ಉತ್ತರಪ್ರದೇಶ ಸರ್ಕಾರ ಮತ್ತು ಅನಿರುದ್ಧ ಇನ್ನಿತರರ ನಡುವಣ ಪ್ರಕರಣ].
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ- 2012ರ (ಪೋಕ್ಸೊ ಕಾಯಿದೆ) ಕುರಿತಾದ ಜಾಮೀನು ಪ್ರಕರಣದಲ್ಲಿ ಅಲಾಹಾಬಾದ್ ಹೈಕೋರ್ಟ್ ಹೊರಡಿಸಿದ್ದ ವಿವಿಧ ನಿರ್ದೇಶನಗಳನ್ನು ಬದಿಗೆ ಸರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಪೋಕ್ಸೊ ಪ್ರಕರಣಗಳಲ್ಲಿ ತನಿಖೆಯ ಆರಂಭದಲ್ಲೇ ಸಂತ್ರಸ್ತರ ವಯಸ್ಸನ್ನು ನಿರ್ಧರಿಸಲು ಪೊಲೀಸರು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಜಾಮೀನು ಅರ್ಜಿಗಳನ್ನು ಆಲಿಸುವ ನ್ಯಾಯಾಲಯಗಳು ಶಾಲಾ ದಾಖಲಾತಿ ಅಥವಾ ಜನನ ಪ್ರಮಾಣಪತ್ರ ಸಂಶಯಾಸ್ಪದವೆಂದು ಕಂಡರೆ ಅವುಗಳನ್ನು ಪರಿಶೀಲಿಸಿ ತಿರಸ್ಕರಿಸಬಹುದೆಂದು ಹೈಕೋರ್ಟ್ ನಿರ್ದೇಶಿಸಿತ್ತು.
ಆದರೆ ಜಾಮೀನು ಅರ್ಜಿಯನ್ನು ವಿಚಾರಿಸುವ ಸಂದರ್ಭದಲ್ಲೇ ಇಂತಹ ನಿರ್ದೇಶನಗಳನ್ನು ನೀಡುವ ಮೂಲಕ ಹೈಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಜಾಮೀನು ನ್ಯಾಯಾಲಯಗಳು ಪರ್ಯಾಯ ವಿಚಾರಣೆ (ಮಿನಿ ಟ್ರಯಲ್) ನಡೆಸಲು ಸಾಧ್ಯವಿಲ್ಲ, ವಯಸ್ಸು ಮುಂತಾದ ವಿವಾದಿತ ವಾಸ್ತವಾಂಶಗಳನ್ನು ಅಂತಿಮವಾಗಿ ನಿರ್ಧರಿಸಲು ಸಾಧ್ಯವಿಲ್ಲ ಹಾಗೂ ವಯಸ್ಸು ನಿರ್ಧಾರಕ್ಕೆ ಸಂಸತ್ತು ನಿಗದಿಪಡಿಸಿರುವ ಕ್ರಮ ಮೀರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.
ಆದರೆ ಇದೇ ವೇಳೆ, ಪರಸ್ಪರ ಸಮ್ಮತಿ ಇರುವ ಹದಿಹರೆಯದವರ ನಡುವಿನ ಪ್ರೇಮ ಸಂಬಂಧ ಪ್ರಕರಣಗಳಲ್ಲಿ ಪೋಕ್ಸೊ ಕಾಯಿದೆಯ ದುರುಪಯೋಗ ಎಂಬ ವ್ಯಾಪಕ ಹಾಗೂ ವೃದ್ಧಿಸುತ್ತಿರುವ ಸಮಸ್ಯೆ ಕುರಿತು ಸುಪ್ರೀಂ ಕೋರ್ಟ್ ವಿವರವಾಗಿ ಚರ್ಚಿಸಿತು.
ದೇಶದ ನ್ಯಾಯಾಲಯಗಳು ಅನೇಕ ಬಾರಿ ಗಮನಿಸಿರುವಂತೆ, ಪರಸ್ಪರ ಒಪ್ಪಿಗೆಯೊಂದಿಗೆ ಮತ್ತು ಸಮೀಪ ವಯಸ್ಸಿನ ಹದಿಹರೆಯದವರ ನಡುವಿನ ಸಂಬಂಧಗಳಿದ್ದರೂ, ಬಾಲಕನನ್ನು ಪೋಕ್ಸೊ ಕಾಯಿದೆಯ ಕಠಿಣ ವಿಧಿಗಳ ವ್ಯಾಪ್ತಿಗೆ ತರುವ ಉದ್ದೇಶದಿಂದ ಬಾಲಕಿಯ ವಯಸ್ಸನ್ನು ಸುಳ್ಳೇ 18ಕ್ಕಿಂತ ಕಡಿಮೆ ಎಂದು ತೋರಿಸಲಾಗುತ್ತಿದೆ ಎಂದು ಪೀಠ ಹೇಳಿದೆ. ಯುವಕರ ನಡುವಿನ ಸಂಬಂಧಗಳನ್ನು ವಿರೋಧಿಸುವ ಕುಟುಂಬಗಳು ಈ ಕಾಯಿದೆಯನ್ನು ಪ್ರತೀಕಾರ ಅಥವಾ ಒತ್ತಡದ ಸಾಧನವಾಗಿ ಬಳಸುತ್ತಿರುವುದು ಗಂಭೀರ ಅನ್ಯಾಯಕ್ಕೆ ಕಾರಣವಾಗುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ನಿಜವಾಗಿಯೂ ರಕ್ಷಣೆ ಅಗತ್ಯವಿರುವ ಮಕ್ಕಳು ಬಡತನ, ಭಯ ಅಥವಾ ಸಾಮಾಜಿಕ ಮುದ್ರೆಯ ಕಾರಣದಿಂದ ನ್ಯಾಯ ವ್ಯವಸ್ಥೆಯನ್ನು ತಲುಪಲಾಗದೆ ಉಳಿಯುತ್ತಿರುವಾಗ, ಅಧಿಕಾರ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕ ಬಲ ಹೊಂದಿರುವವರು ಕಾನೂನನ್ನು ತಮ್ಮ ಲಾಭಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವ ಸಮಾಜದ ಅಸಮಾನತೆಯನ್ನು ಪೀಠ ತೀವ್ರವಾಗಿ ಟೀಕಿಸಿದೆ.
ಈ ಹಿನ್ನೆಲೆಯಲ್ಲಿ, ತನ್ನ ತೀರ್ಪಿನ ಪ್ರತಿಯನ್ನು ಕೇಂದ್ರ ಸರ್ಕಾರದ ಕಾನೂನು ಕಾರ್ಯದರ್ಶಿಗೆ ಕಳುಹಿಸಲು ನಿರ್ದೇಶಿಸಿದ ಅದು ಪೋಕ್ಸೊ ಕಾಯಿದೆಯ ದುರುಪಯೋಗ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ. ಹದಿ ಹರೆಯದವರ ನೈಜ ಸಂಬಂಧಗಳನ್ನು ಅಪರಾಧ ವ್ಯವಸ್ಥೆಯೊಳಗೆ ತರದಂತೆ ʼರೋಮಿಯೋ–ಜುಲಿಯಟ್ ಅನುಚ್ಛೇದʼ ಪ್ರಮುಖ ಪರಿಹಾರವಾಗಬಹುದು ಎಂದು ಪೀಠ ಸಲಹೆ ನೀಡಿದೆ.
ಇದಲ್ಲದೆ, ಇಂತಹ ಪ್ರಕರಣಗಳಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿರುವ ಅದು . ಪ್ರತೀಕಾರದ ಉದ್ದೇಶ ಸ್ಪಷ್ಟವಾಗಿರುವ ಸಂದರ್ಭಗಳಲ್ಲಿ ಅಂಧವಾಗಿ ಪ್ರಕರಣಗಳನ್ನು ದಾಖಲಿಸದೆ, ವಕೀಲ ವರ್ಗ ಜರಡಿಯಂತೆ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ್ದ ನಿರ್ದೇಶನಗಳ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್, ಜಾಮೀನು ವಿಚಾರಣೆಯ ವ್ಯಾಪ್ತಿಯಲ್ಲಿ ನ್ಯಾಯಾಲಯದ ಅಧಿಕಾರ ಸೀಮಿತವಾಗಿದ್ದು, ಸಾಮಾನ್ಯ ತನಿಖಾ ಕ್ರಮಗಳನ್ನು ಬದಲಿಸುವ ಅಥವಾ ಪೊಲೀಸರಿಗೆ ವ್ಯಾಪಕ ಆದೇಶಗಳನ್ನು ನೀಡುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿತು. ವಯಸ್ಸು ನಿರ್ಧಾರಕ್ಕೆ ಸಂಬಂಧಿಸಿದಂತೆ, ಬಾಲ ನ್ಯಾಯ ಕಾಯಿದೆಯಲ್ಲಿ ನಿಗದಿಪಡಿಸಿರುವ ಕ್ರಮವನ್ನು ಪಾಲಿಸಬೇಕು. ವೈದ್ಯಕೀಯ ಪರೀಕ್ಷೆಗಳು ಕೊನೆಯ ಆಯ್ಕೆಯಾಗಿದ್ದು, ಪ್ರತಿಯೊಂದು ಪ್ರಕರಣದಲ್ಲೂ ಅದನ್ನು ಕಡ್ಡಾಯವಾಗಿ ಮಾಡಬಾರದು ಎಂದು ತಿಳಿಸಿದೆ.
ಪೋಕ್ಸೊ ಹಾಗೂ ಐಪಿಸಿ ಸೆಕ್ಷನ್ 498ಎ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಗಳ ದುರುಪಯೋಗ ಕೇವಲ ಕಾನೂನು ಸಮಸ್ಯೆಯಲ್ಲ, ಅದು ನೈತಿಕ ಮತ್ತು ಸಾಮಾಜಿಕ ಸಮಸ್ಯೆಯೂ ಹೌದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಮಾಜ, ವಕೀಲರು ಮತ್ತು ಸಂಸ್ಥೆಗಳು ಹೊಣೆಗಾರಿಕೆಯಿಂದ ನಡೆದುಕೊಳ್ಳದಿದ್ದರೆ, ಕೇವಲ ನ್ಯಾಯಾಲಯದ ಆದೇಶಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಅದು ಎಚ್ಚರಿಕೆ ನೀಡಿದೆ.