cafe coffee day 
ಸುದ್ದಿಗಳು

ಇಂಡಸ್ಇಂಡ್ ಬ್ಯಾಂಕ್‌ನೊಂದಿಗೆ ಪ್ರಕರಣ ಇತ್ಯರ್ಥ: ಕೆಫೆ ಕಾಫಿ ಡೇ ವಿರುದ್ಧದ ಆದೇಶ ಬದಿಗೆ ಸರಿಸಿದ ಎನ್‌ಸಿಎಲ್‌ಎಟಿ

ಕೆಫಿ ಕಾಫಿ ಡೇ ವಿರುದ್ಧ ಈ ಹಿಂದೆ ಹೂಡಲಾಗಿದ್ದ ದಿವಾಳಿತನದ ಮೊಕದ್ದಮೆಯ ವಿಚಾರಣೆ ಕೊನೆಗೊಳಿಸುವಂತೆ ಎನ್‌ಸಿಎಲ್‌ಎಟಿಗೆ ಬ್ಯಾಂಕ್ ಹಾಗೂ ಕಾಫಿ ಡೇ ಕೋರಿದವು.

Bar & Bench

ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇಯ ಮಾತೃ ಸಂಸ್ಥೆ ಕಾಫಿ ಡೇ ಗ್ಲೋಬಲ್‌ ವಿರುದ್ಧ ದಿವಾಳಿತನದ ಅರ್ಜಿಯನ್ನು ಸ್ವೀಕರಿಸಿದ್ದ ಬೆಂಗಳೂರಿನ  ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಆದೇಶವನ್ನು ಚೆನ್ನೈನ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ರದ್ದುಗೊಳಿಸಿದೆ [ಮಾಳವಿಕಾ ಹೆಗ್ಡೆ, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ನ ಅಮಾನತುಗೊಂಡ ನಿರ್ದೇಶಕಿ ಮತ್ತು ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್ ನಡುವಣ ಪ್ರಕರಣ].

ಇಂಡಸ್‌ ಬ್ಯಾಂಕ್‌ನೊಂದಿಗೆ ಕೆಫೆ ಕಾಫಿ ಡೇ ಪ್ರಕರಣದ ಸಂಬಂಧ ಒಂದು ಇತ್ಯರ್ಥಕ್ಕೆ ಬಂದಿರುವುದಾಗಿ ತಿಳಿಸಿದ ಬಳಿಕ ಎನ್‌ಸಿಎಲ್‌ಎಟಿಯ ನ್ಯಾಯಿಕ ಸದಸ್ಯರಾದ ನಿವೃತ್ತ ನ್ಯಾಯಮೂರ್ತಿ ಎಂ ವೇಣುಗೋಪಾಲ್‌ ಮತ್ತು ತಾಂತ್ರಿಕ ಸದಸ್ಯರಾರದ ಶ್ರೀಶಾ ಮೇರ್ಲಾ ಅವರು ಬುಧವಾರ ಆದೇಶ ಹೊರಡಿಸಿದರು.

ಸೆಪ್ಟೆಂಬರ್ 7 ರಂದು ಎನ್‌ಸಿಎಲ್‌ಎಟಿ ರಿಜಿಸ್ಟ್ರಿಗೆ ಜಂಟಿ ಜ್ಞಾಪನಾ ಪತ್ರ ಸಲ್ಲಿಸಿ ಬ್ಯಾಂಕ್‌ಗೆ ನೀಡಬೇಕಾದ ಸಾಲವನ್ನು ಅಸೆಟ್‌ ರೀಕನ್‌ಸ್ಟ್ರಕ್ಷನ್‌ ಕಂಪನಿಯಾದ ಎಎಸ್‌ಆರ್‌ಇಸಿಗೆ (ಇಂಡಿಯಾ ಲಿಮಿಟೆಡ್) ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ವಿರುದ್ಧ ಆರಂಭಿಸಲಾಗಿದ್ದ ಕಾರ್ಪೊರೇಟ್‌ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಕೊನೆಗೊಳಿಸುವಂತೆ ಬ್ಯಾಂಕ್‌ ಮತ್ತು ಕೆಫೆ ಕಾಫಿ ಡೇ ಕೋರಿದವು.

ಪ್ರಕರಣ ಇತ್ಯರ್ಥಗೊಂಡಿರುವುದನ್ನು ದಾಖಲೆಯಲ್ಲಿ ಪರಿಗಣಿಸಿದ ಎನ್‌ಸಿಎಲ್‌ಎಟಿ, ಕೆಫೆ ಕಾಫಿ ಡೇ ಮಾಜಿ ನಿರ್ದೇಶಕಿ ಮತ್ತು ಸಂಸ್ಥೆಯ ಸಂಸ್ಥಾಪಕರಾಗಿದ್ದ ದಿವಂಗತ ವಿ ಜಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿತು.

ಕೆಫೆ ಕಾಫಿ ಡೇ ವಿರುದ್ಧ ದಿವಾಳಿತನ ಅರ್ಜಿ ಸ್ವೀಕರಿಸಿದ್ದ ಎನ್‌ಸಿಎಲ್‌ಟಿ ಆದೇಶವನ್ನು ಈ ಹಿಂದೆ ಮಾಳವಿಕಾ ಹೆಗ್ಡೆ ಅವರು ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಿದ್ದರು.  

ಮಾಳವಿಕಾ ಅವರ ಪರವಾಗಿ ಹಿರಿಯ ವಕೀಲ ಅರವಿಂದ್ ಪಾಂಡಿಯನ್, ವಕೀಲರಾದ ಪವನ್ ಜಬಾಖ್, ಅಭಿಷೇಕ್ ರಾಮನ್ ಮತ್ತು ಜೆರಿನ್ ಆಶರ್ ಸೋಜನ್ ವಾದ ಮಂಡಿಸಿದರು. ಇಂಡಸ್‌ಇಂಡ್ ಬ್ಯಾಂಕನ್ನು ವಕೀಲೆ ಚಿತ್ರಾ ನಿರ್ಮಲಾ ಪ್ರತಿನಿಧಿಸಿದ್ದರು.