ಹೌರಾದ ತನ್ನ ಉದ್ದೇಶಿತ ಮಾರ್ಗದಲ್ಲಿ ರಾಮನವಮಿ ಮೆರವಣಿಗೆ ನಡೆಸಲು ಹಿಂದೂ ಸಂಘಟನೆ ಅಂಜನಿ ಪುತ್ರ ಸೇನಾಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಏಪ್ರಿಲ್ 6 ರಂದು ಜಿ ಟಿ ರಸ್ತೆಯ ನರಸಿಂಹ ದೇವಸ್ಥಾನದಿಂದ ಹೌರಾ ಮೈದಾನದವರೆಗೆ ಅಂಜನಿ ಪುತ್ರ ಸೇನಾ ಸಂಘಟನೆಯು 'ಶ್ರೀ ರಾಮ ನವಮಿ ಶೋಭಾ ಯಾತ್ರೆʼ ಹಮ್ಮಿಕೊಂಡಿದೆ.
ನ್ಯಾಯಾಲಯದ ಆದೇಶಗಳ ಉಲ್ಲಂಘನೆ ಮತ್ತು ಭದ್ರತಾ ಆತಂಕ ಪ್ರಸ್ತಾಪಿಸಿ ಪೊಲೀಸರು ಪ್ರಸ್ತಾವಿತ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ್ದರು. ಎರಡು ಪರ್ಯಾಯ ಮಾರ್ಗಗಳಲ್ಲಿ ಮೆರವಣಿಗೆಗೆ ಅವರು ಅವಕಾಶವಿತ್ತಿದ್ದರು.
ಈ ಹಿನ್ನೆಲೆಯಲ್ಲಿ ಸಂಘಟನೆಯು ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿತ್ತು., ಮೆರವಣಿಗೆಯಲ್ಲಿ ಭಾಗವಹಿಸುವ 500 ಜನರ ಮತದಾರರ ಕಾರ್ಡ್, ಆಧಾರ್, ಪ್ಯಾನ್ ರೀತಿಯ ಗುರುತಿನ ಚೀಟಿಯನ್ನು ಪೊಲೀಸರಿಗೆ ಮುಂಚಿತವಾಗಿ ಸಲ್ಲಿಸಬೇಕು ಎಂಬುದೂ ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿ ಯೋಜಿತ ಮಾರ್ಗದಲ್ಲಿಯೇ ಮೆರವಣಿಗೆ ನಡೆಸಲು ನ್ಯಾಯಮೂರ್ತಿ ತೀರ್ಥಂಕರ ಘೋಷ್ ಅವರು ಅನುಮತಿ ನೀಡಿದರು.
ತನ್ನ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಏಪ್ರಿಲ್ 9 ರಂದು ಮತ್ತೆ ಪ್ರಕರಣ ಆಲಿಸುವುದಾಗಿ ನ್ಯಾಯಾಲಯ ತಿಳಿಸಿದೆ.
2022 ಮತ್ತು 2023ರಲ್ಲಿ ಇದೇ ರೀತಿಯ ಮೆರವಣಿಗೆಗಳಲ್ಲಿ ಶಾಂತಿಗೆ ಭಂಗ ಉಂಟಾಗಿದ್ದನ್ನು ಉಲ್ಲೇಖಿಸಿದ ರಾಜ್ಯ ಸರ್ಕಾರ ಅರ್ಜಿಗೆ ವಿರೋಧ ವ್ಯಕ್ತಪಡಿಸಿತು. ಆದರೆ ಆ ಮೆರವಣಿಗೆಗಳಿಗೂ ಅದೇ ಮಾರ್ಗವನ್ನು ಬಳಸಲಾಗಿದೆ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿತು.