Sameer Wankhede  Image source: X
ಸುದ್ದಿಗಳು

ಸಮೀರ್ ವಾಂಖೆಡೆ ವಿರುದ್ಧದ ಶಿಸ್ತು ಕ್ರಮ ಆದೇಶ ರದ್ದುಗೊಳಿಸಿದ ಸಿಎಟಿ; ಸಿಬಿಐಸಿಗೆ ತರಾಟೆ

ಸಿಬಿಐಸಿ ವರ್ತನೆಯನ್ನು ನ್ಯಾಯಮಂಡಳಿ ತೀವ್ರವಾಗಿ ಟೀಕಿಸಿದ್ದು, ವಾಂಖೆಡೆ ಅವರ ಬಡ್ತಿ ತಡೆಯಲೆಂದೇ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

Bar & Bench

ಭಾರತೀಯ ಆದಾಯ ಸೇವೆ (ಐಆರ್‌ಎಸ್‌) ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಮಂಡಳಿ (ಸಿಬಿಐಸಿ) ನೀಡಿದ್ದ ಶಿಸ್ತು ಕ್ರಮದ ಆದೇಶವನ್ನು ಸೋಮವಾರ ರದ್ದುಗೊಳಿಸಿರುವ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಆರೋಪ ಆಧರಿಸಿ ಯಾವುದೇ ಕ್ರಮಕ್ಕೆ ಮುಂದಾಗದಂತೆ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿದೆ [ಸಮೀರ್‌ ವಾಂಖೆಡೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

2025ರ ಆಗಸ್ಟ್ 18ರಂದು ಜಾರಿಗೊಂಡ ಆರೋಪ ಪತ್ರ ಸಂಖ್ಯೆ 30/2025 ಅನ್ನು ಪ್ರಶ್ನಿಸಿ ವಾಂಖೆಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಂಜಿತ್ ಮೋರೆ ಮತ್ತು ಆಡಳಿತ ವಿಭಾಗದ ಸದಸ್ಯ ರಾಜಿಂದರ್ ಕಶ್ಯಪ್ ಅವರನ್ನು ಒಳಗೊಂಡ ಪೀಠ ಪುರಸ್ಕರಿಸಿತು. ಅಂತೆಯೇ ಅವರ ವಿರುದ್ಧದ ಶಿಸ್ತು ಕ್ರಮದ ಆದೇಶ ರದ್ದುಗೊಳಿಸಿದ ಅದು ವಾಂಖೆಡೆ ಅವರಿಗೆ ಕಾನೂನು ಹಾಗೂ ನಿಯಮಗಳ ಪ್ರಕಾರ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ ಸಿಬಿಐಸಿ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ನ್ಯಾಯಮಂಡಳಿ, ವಾಂಖೆಡೆ ವಿರುದ್ಧದ ಕ್ರಮಗಳು ಪಕ್ಷಪಾತ ಮತ್ತು ದುರುದ್ದೇಶದಿಂದ ಕೂಡಿವೆ ಎಂದಿತು. ಆರೋಪ ನಿಜವಾಗಿಯೂ ವಾಂಖೆಡೆ ಅವರ ಬಡ್ತಿ ತಡೆಯುವ ಮತ್ತು ಪ್ರತಿಕಾರದ ಉದ್ದೇಶದಿಂದ ಕೂಡಿದೆ ಎಂದು ನ್ಯಾಯಮಂಡಳಿ ಹೇಳಿತು. ಇಂತಹ ಕ್ರಮಗಳು ಕಾನೂನಿನ ದುರುಪಯೋಗ ಹಾಗೂ ವೈಯಕ್ತಿಕ ಪ್ರತೀಕಾರವನ್ನು ಹೇಳುತ್ತವೆ ಎಂದು ಸಿಎಟಿ ಅಸಮಾಧಾನ ವ್ಯಕ್ತಪಡಿಸಿತು.

ವಾಂಖೆಡೆ ಅವರು 2008 ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ಆಗಿದ್ದು, 2020ರಿಂದ 2022ರ ಜನವರಿವರೆಗೆ ಮುಂಬೈ ವಲಯದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ, ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ ಒಳಗೊಂಡ ಕಾರ್ಡೇಲಿಯಾ ಕ್ರೂಸ್ ಮಾದಕವಸ್ತು ಪ್ರಕರಣ ದಾಖಲಾಗಿತ್ತು. ಬಳಿಕ ಇಡೀ ಪ್ರಕರಣದ ತನಿಖೆಯಲ್ಲಿ ಪ್ರಕ್ರಿಯಾತ್ಮಕ ದೋಷಗಳು ಕಂಡು ಬಂದಿವೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಸಿಬಿ ವಿಶೇಷ ವಿಚಾರಣಾ ತಂಡ (ಎಸ್‌ಇಟಿ) ರಚಿಸಿತ್ತು.

ಎಸ್‌ಇಟಿ ವರದಿಯನ್ನು ವಾಂಖೆಡೆ ಸಿಎಟಿ ಮುಂದೆ ಪ್ರಶ್ನಿಸಿದ್ದರು. ತನಿಖೆಗೆ ಮೇಲ್ವಿಚಾರಣೆ ನಡೆಸಿದ್ದ ಅಧಿಕಾರಿಯೇ ಎಸ್‌ಐಟಿ ನೇತೃತ್ವ ವಹಿಸಿದ್ದರಿಂದ ವರದಿ ಅಮಾನ್ಯವೆಂದು ಸಿಎಟಿ 2023ರಲ್ಲಿ ತೀರ್ಮಾನಿಸಿತ್ತು. ಎಸ್‌ಇಟಿ ವರದಿ ಕೇವಲ ಪ್ರಾಥಮಿಕ ತನಿಖೆಯಾಗಿದ್ದು, ಅದನ್ನು ಶಿಸ್ತು ಕ್ರಮಕ್ಕೆ ಬಳಸಲಾಗುವುದಿಲ್ಲ ಎಂಬ ನಿಲುವನ್ನು ನ್ಯಾಯಮಂಡಳಿ ವ್ಯಕ್ತಪಡಿಸಿತ್ತು, ಇದನ್ನು ದೆಹಲಿ ಹೈಕೋರ್ಟ್ ಕೂಡ  ಎತ್ತಿಹಿಡಿದಿತ್ತು.

ಇದಾದ ಬಳಿಕ, 2023ರಲ್ಲಿ ಸಿಬಿಐ ವಾಂಖೆಡೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಬಾಂಬೆ ಹೈಕೋರ್ಟ್ ಮಧ್ಯಂತರ ರಕ್ಷಣೆಯನ್ನು ನೀಡಿದೆ. ಕ್ರಿಮಿನಲ್ ವಿಚಾರಣೆ ಇನ್ನೂ ಬಾಕಿಯಿರುವ ನಡುವೆಯೇ, ಸಿಬಿಐಸಿ ಮತ್ತೆ 2025ರಲ್ಲಿ ಆರೋಪ ಪತ್ರ ಜಾರಿಗೊಳಿಸಿದ್ದನ್ನು ಸಿಎಟಿ ಗಂಭೀರವಾಗಿ ಪರಿಗಣಿಸಿದೆ.

ಈಗಾಗಲೇ ನ್ಯಾಯಾಲಯಗಳು ಬಳಸಲಾಗುವುದಿಲ್ಲವೆಂದು ಹೇಳಿರುವ ಅದೇ ದಾಖಲೆಗಳ ಆಧಾರದಲ್ಲಿ ವಾಂಖೆಡೆ ವಿರುದ್ಧ ಕ್ರಮ ಮುಂದುವರಿಸಲು ಅಧಿಕಾರಿಗಳು ಯತ್ನಿಸಿರುವುದು ಸರಿಯಲ್ಲ ಎಂದುಹೇಳಿದ ಸಿಎಟಿ ಶಿಸ್ತುಕ್ರಮವನ್ನು ಸಂಪೂರ್ಣ ರದ್ದುಗೊಳಿಸಿತು. ಸಿಬಿಐಸಿಗೆ ದಂಡ ವಿಧಿಸಲು ಅವಕಾಶ ಇದ್ದರೂ ಇದ್ದರೂ, ಸಂಸ್ಥೆ ತನ್ನ ನಡೆ ಸರಿಪಡಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯೊಂದಿಗೆ ದಂಡ ವಿಧಿಸುವ ನಿರ್ಧಾರ ಕೈಬಿಟ್ಟಿರುವುದಾಗಿ ಅದು ತಿಳಿಸಿತು.

[ತೀರ್ಪಿನ ಪ್ರತಿ]

Sameer_Wankhede_Vs_Union_of_India.pdf
Preview