ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ವಿಚಾರಣಾ ನ್ಯಾಯಾಲಯವು ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಬಾಕಿ ಇರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 389 (1)ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ಶಿಕ್ಷೆಯಲ್ಲಿ ಅಮಾನತುಗೊಳಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದೆ. 2017ರಲ್ಲಿ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸೆಂಗರ್ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿತ್ತು.
ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 20 ಜೂನ್ 2017ರಲ್ಲಿ ಉನ್ನಾವ್‌ನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಅತ್ಯಾಚಾರದ ನಂತರ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ಆದರೆ, ಆಕೆಯನ್ನು ಸಾಗಣೆ ಮಾಡುತ್ತಿದ್ದ ವೇಳೆ ಮಾಖಿ ಪೊಲೀಸ್ ಠಾಣೆಯ ಪೊಲೀಸರು ರಕ್ಷಣೆ ಮಾಡಿದ್ದರು. ಪ್ರಕರಣದಲ್ಲಿ ಸೆಂಗರ್ ತಪ್ಪಿತಸ್ಥ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ಸಹಿತ ₹25 ಲಕ್ಷ ದಂಡ ವಿಧಿಸಿತ್ತು.
ಉನ್ನಾವ್ ಅತ್ಯಾಚಾರ ಘಟನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿತ್ತು. ದಿನವಹಿ ವಿಚಾರಣೆ ನಡೆಸಿ 45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಆದೇಶಿಸಿತ್ತು.
ಡಿಸೆಂಬರ್ 2019ರಲ್ಲಿ, ಸೆಂಗರ್‌ಗೆ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತ ವಿಚಾರಣಾ ನ್ಯಾಯಾಲಯ ಇದೇ ವೇಳೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಜೀವ ಮತ್ತು ಸ್ವಾತಂತ್ರ್ಯ ರಕ್ಷಿಸುವ ಸಲುವಾಗಿ ಸುರಕ್ಷಿತ ವಾಸಸ್ಥಳ ಒದಗಿಸುವಂತೆ ಮತ್ತು ಅವರ ಗುರುತು ಬದಲಾವಣೆ ಮಾಡುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ನಿರ್ದೇಶಿಸಿತ್ತು.
ಗರಿಷ್ಠ ಶಿಕ್ಷೆ ವಿಧಿಸುವ ವೇಳೆ, ಯಾವುದೇ ಸಡಿಲಿಕೆ ನೀಡುವ ಸಂದರ್ಭಗಳು ಇಲ್ಲವೆಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೇವಕರಾಗಿ ಜನರ ನಂಬಿಕೆಯನ್ನು ಸೆಂಗರ್ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಒಂದೇ ಒಂದು ಅಮಾನವೀಯ ಕೃತ್ಯವೇ ಆ ನಂಬಿಕೆ ದ್ರೋಹಕ್ಕೆ ಸಾಕಷ್ಟಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಆ ತೀರ್ಪನ್ನು ಪ್ರಶ್ನಿಸಿರುವ ಮೇಲ್ಮನವಿ ಇನ್ನೂ ಬಾಕಿ ಇದೆ.
ಇದೇ ಪ್ರಕರಣ ಮತ್ತೊಂದು ವಿವಾದಕ್ಕೂ ಕಾರಣವಾಗಿತ್ತು. ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಕೆಲ ದಿನಗಳ ಬಳಿಕ ಸಂತ್ರಸ್ತೆಯ ಪರ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.
ಅಪಘಾತಕ್ಕೆ ಸೆಂಗರ್ ಅವರೇ ಕಾರಣಕರ್ತರು ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳು ದೊರೆಯದ ಕಾರಣ ದೆಹಲಿ ನ್ಯಾಯಾಲಯ ಅವರನ್ನು ಡಿಸೆಂಬರ್ 2021ರಲ್ಲಿ ಖುಲಾಸೆಗೊಳಿಸಿತ್ತು.