BookMyShow, CCI
BookMyShow, CCI 
ಸುದ್ದಿಗಳು

ಚಿತ್ರಮಂದಿರಗಳ ಜೊತೆ ವಿಶೇಷ ಒಪ್ಪಂದದಿಂದ ಸ್ಪರ್ಧೆ ಕ್ಷೀಣಿಸಬಹುದು: ʼಬುಕ್ ಮೈ ಶೋʼ ವಿರುದ್ಧ ತನಿಖೆಗೆ ಸಿಸಿಐ ಕರೆ

Bar & Bench

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ ಜೊತೆಗಿನ ತನ್ನ ವಿಶೇಷ ಒಪ್ಪಂದದಿಂದಾಗಿ ಮಾರುಕಟ್ಟೆಯಲ್ಲಿನ ಸ್ಪರ್ಧೆ ಸಂಭಾವ್ಯ ರೀತಿಯಲ್ಲಿ ಕಡಿಮೆಯಾಗಬಹುದು ಎಂದಿರುವ ಭಾರತೀಯ ಸ್ಪರ್ಧಾ ಆಯೋಗ, ಆನ್‌ಲೈನ್‌ ಮನರಂಜನಾ ಟಿಕೆಟ್‌ ಬುಕ್‌ ಮಾಡುವ ತಾಣವಾದ ಬುಕ್‌ ಮೈ ಶೋ ವಿರುದ್ಧ ತನಿಖೆಗೆ ಕರೆ ನೀಡಿದೆ.

ಸ್ಪರ್ಧಾ ಕಾಯಿದೆ 2002ರ ಸೆಕ್ಷನ್ 3 ಮತ್ತು 4ಕ್ಕೆ ವಿರುದ್ಧವಾಗಿ ಬುಕ್‌ ಮೈ ಶೋ ಜಾಲತಾಣದೊಂದಿಗೆ ಸಿನಿಪೊಲಿಸ್‌, ಪಿವಿಆರ್‌ ಮತ್ತಿತರ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ ಎಂಬ ಅಹವಾಲಿನ ಕುರಿತು ವಿಚಾರಣೆ ನಡೆಸುವ ಸಂದರ್ಭದಲ್ಲಿ ದೇಶದ ಮುಖ್ಯ ಸ್ಪರ್ಧಾ ನಿಯಂತ್ರಕ ಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಏಕತೆರೆ ಚಿತ್ರಮಂದಿರಗಳ ಜೊತೆಗಿನ ವಿಶೇಷ ಒಪ್ಪಂದಗಳಿಂದಾಗಿ ಬುಕ್‌ ಮೈ ಶೋಗೆ ಸರಿಸಾಟಿಯಾದ ಸೇವೆ ಒದಗಿಸಲು ಅಥವಾ ಯಾವುದೇ ಆನ್‌ಲೈನ್‌ ಮಾಧ್ಯಮದ ಮೂಲಕ ಟಿಕೆಟ್‌ ಬುಕಿಂಗ್‌/ ಮಾರಾಟ ನಡೆಸುವ ಯಾವುದೇ ಘಟಕವನ್ನು ನೇರವಾಗಿ/ ಪರೋಕ್ಷವಾಗಿ ತೊಡಗಿಸಿಕೊಳ್ಳಲು ಈ ಸಿನಿಮಾ ಮಂದಿರಗಳಿಗೆ ಅವಕಾಶ ದೊರೆಯುತ್ತಿಲ್ಲ ಎಂದು ಆಯೋಗ ಗಮನಿಸಿದೆ. ಒಪ್ಪಂದಗಳು ಸಂಬಂಧಪಟ್ಟ ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಕಬಳಿಸುವ ಇಲ್ಲವೇ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ” ಎಂದು ಆದೇಶ ಹೇಳಿದೆ.

ಬುಕ್‌ ಮೈ ಶೋ ವಿರುದ್ಧ ಮಹಾ ನಿರ್ದೇಶಕರ (ಡಿ ಜಿ) ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಕರೆ ನೀಡಿದ ಸಿಸಿಐ, ಪ್ರಕರಣದಲ್ಲಿ ಪಕ್ಷಕಾರರಾಗಿರುವ ಸಿನಿಮಾ ಥಿಯೇಟರ್‌ಗಳ ಪಾತ್ರ ಈ ಹಂತದ ತನಿಖೆಯಲ್ಲಿ ಬರುವುದಿಲ್ಲ ಎಂದು ಹೇಳಿದೆ.

ಬುಕ್‌ ಮೈ ಶೋ ಹೆಚ್ಚು ಸೌಲಭ್ಯ ಶುಲ್ಕಗಳನ್ನು ವಿಧಿಸಿ ಅದರಲ್ಲಿ ಶೇ 50ರಷ್ಟನ್ನು ಕಮಿಷನ್‌ ರೂಪದಲ್ಲಿ ಚಿತ್ರಮಂದಿರಗಳೊಂದಿಗೆ ಹಂಚಿಕೊಳ್ಳುತ್ತದೆ. ಇದರಿಂದ ಹೊಸಬರಿಗೆ ಕಡಿಮೆ ಬೆಲೆಯಲ್ಲಿ ಸೇವೆ ಒದಗಿಸಲು ಕಷ್ಟವಾಗುತ್ತದೆ ಎಂದು ಸಿನಿಮಾ ಟಿಕೆಟಿಂಗ್‌ ಜಾಲತಾಣ ಶೋಟೈಮ್‌ (Showtyme) ಮಾಲೀಕರು ಸಿಸಿಐಗೆ ದೂರು ಸಲ್ಲಿಸಿದ್ದರು.