ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರ ಬಿಡುಗಡೆ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬುಧವಾರ ತಿರಸ್ಕರಿಸಿದೆ .
ಕಾನೂನು ಪ್ರಕ್ರಿಯೆಗೆ ಅನುಸಾರವಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) 55 ದೃಶ್ಯಾವಳಿಗಳ ಕತ್ತರಿ ಪ್ರಯೋಗಕ್ಕೆ ಆದೇಶಿಸಿತ್ತು. ಬಳಿಕ ಚಿತ್ರಕ್ಕೆ ಪ್ರಮಾಣಪತ್ರ ನೀಡಲಾಗಿದೆ. ನಿರ್ಮಾಪಕರು ಹೆಚ್ಚುವರಿಯಾಗಿ ದೃಶ್ಯಗಳನ್ನು ತೆಗೆದುಹಾಕಿದ್ದಾರೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದಲ್ಲದೆ ಇದಕ್ಕಿಂತಲೂ ಹೆಚ್ಚಿನ ಕ್ರಮ ಏಕೆ ಕೈಗೊಳ್ಳಬೇಕು ಎಂದು ವಿವರಿಸಲು ಚಿತ್ರ ಬಿಡುಗಡೆ ವಿರೋಧಿಸುತ್ತಿರುವವರು ವಿಫಲರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
"ಆದ್ದರಿಂದ, ಮೇಲೆ ತಿಳಿಸಲಾದ ಸಂದರ್ಭ ಸನ್ನಿವೇಶಗಳನ್ನು ಪರಿಗಣಿಸಿ ಮತ್ತು 01.08.2025 ರಂದು ದೆಹಲಿಯ ಗೌರವಾನ್ವಿತ ಹೈಕೋರ್ಟ್‌ನ ಆದೇಶದಲ್ಲಿರುವ ನಿರ್ದೇಶನಗಳ ಅನುಸಾರವಾಗಿ, 1952ರ ಸಿನಿಮಾಟೋಗ್ರಾಫ್ ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ಮರುಪರಿಶೀಲನಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕಾಯಿದೆಯಸೆಕ್ಷನ್ 6ರ ಉಪ ಸೆಕ್ಷನ್ (2)ರ ಅಡಿಯಲ್ಲಿ ಅಧಿಕಾರ ಚಲಾಯಿಸಲು (ಚಿತ್ರ ವಿರೋಧಿಸುತ್ತಿರುವವರು) ಯಾವುದೇ ವಾದ ಮಂಡಿಸಿಲ್ಲ ಎಂದು ಹೇಳುತ್ತದೆ. ಅದರಂತೆ, ಮರುಪರಿಶೀಲನಾ ಅರ್ಜಿಗಳು ಅಥವಾ ಪತ್ರಗಳನ್ನು ವಜಾಗೊಳಿಸಲಾಗುತ್ತಿದೆ," ಎಂದು ಅಧೀನ ಕಾರ್ಯದರ್ಶಿ ಸಂತೋಷ್ ಕುಮಾರ್ ಮೌರ್ಯ ಆದೇಶದಲ್ಲಿ ತಿಳಿಸಿದ್ದಾರೆ.
ಚಿತ್ರವನ್ನು ಮರುಪರಿಶೀಲಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಗಸ್ಟ್ 1ರಂದು ಆದೇಶಿಸಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು , ದೃಶ್ಯಾವಳಿಗಳನ್ನು ತೆಗೆದುಹಾಕುವ ಸಂಬಂಧ ತಾನು ನೀಡಿದ್ದ ಆದೇಶವನ್ನು ಸಚಿವಾಲಯ ಹಿಂತೆಗೆದುಕೊಂಡು ಕಾನೂನಿನ ಪ್ರಕಾರ ಹೊಸ ನಿರ್ಧಾರ ಕೈಗೊಳ್ಳಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಹೇಳಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿತ್ತು.
ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡುವಂತೆ ಆದೇಶಿಸುವ ಕೇಂದ್ರ ಸರ್ಕಾರದ ಅಧಿಕಾರವನ್ನು ನ್ಯಾಯಾಲಯ ಈ ಹಿಂದೆ ಪ್ರಶ್ನಿಸಿತ್ತು. ಚಲನಚಿತ್ರ ನಿರ್ಮಾಪಕರು ಆಗಸ್ಟ್ 8ರಂದು ಚಿತ್ರವನ್ನು ಬಿಡುಗಡೆ ಮಾಡಲು ಬಯಸುತ್ತಿದ್ದಾರೆ ಎಂದು ಹೇಳಿದ್ದರಿಂದ, ಆಗಸ್ಟ್ 6ರೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.
ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮತ್ತು ಕನ್ಹಯ್ಯಾ ಲಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಜಾವೇದ್ ಚಿತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದರು.