Justice Tara Vitasta Ganju 
ಸುದ್ದಿಗಳು

ನ್ಯಾ. ತಾರಾ ವಿತಾಸ್ತ ಗಂಜುರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿ ಕೇಂದ್ರದ ಅಧಿಸೂಚನೆ

ಕಳೆದ ಆಗಸ್ಟ್‌ನಲ್ಲಿ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

Bar & Bench

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸ್ಸನ್ನು ರಾಷ್ಟ್ರಪತಿಗಳು ಅನುಮೋದಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಂದು ಅಧಿಸೂಚನೆ ಪ್ರಕಟಿಸಿದೆ.

ಕಳೆದ ಆಗಸ್ಟ್‌ನಲ್ಲಿ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

ಸೆಪ್ಟೆಂಬರ್ 2ರಂದು ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನು ದೆಹಲಿಯಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಳಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸನ್ನು ಮರುಪರಿಶೀಲಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ವಕೀಲರ ಸಂಘದ ​​ಮಹಿಳಾ ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಪತ್ರ ಬರೆದಿದ್ದರು.

ಪರಿಚಯ: ತಾರಾ ಅವರು 1971ರಲ್ಲಿ ಜನಿಸಿದರು. 1995ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಕಾನೂನು ಪದವಿ ಪಡೆದರು. ನಂತರ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕಾನೂನು ಶಿಕ್ಷಣ ಮುಂದುವರೆಸಿದರು. 1999ರಲ್ಲಿ ಬ್ರಿಟಿಷ್ ಶವ್ನಿಂಗ್ ವಿದ್ಯಾರ್ಥಿ ವೇತನವನ್ನು ಪಡೆದರು.

1995ರಲ್ಲಿ ವಕೀಲಿಕೆ ಆರಂಭಿಸಿದ ತಾರಾ ಅವರು ಹೈಕೋರ್ಟ್‌ನಲ್ಲಿ ಬಹುತೇಕವಾಗಿ ಕೆಲಸ ಮಾಡಿದರು. ದೆಹಲಿ ಮತ್ತು ಅದರ ನೆರೆಯ ನ್ಯಾಯವ್ಯಾಪ್ತಿಗಳಲ್ಲಿನ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಿದ ಅವರು ಮೇಲ್ಮನವಿ ಮತ್ತು ರಿಟ್ ನ್ಯಾಯಾಲಯಗಳ ಅಡಿಯಲ್ಲಿ ಆಸ್ತಿ, ಉತ್ತರಾಧಿಕಾರ ಕಾನೂನು, ನಾಗರಿಕ ಕಾನೂನುಗಳು, ಮಧ್ಯಸ್ಥಿಕೆ, ಕಂಪನಿ, ಕ್ರಿಮಿನಲ್ ಮತ್ತು ಬೌದ್ಧಿಕ ಆಸ್ತಿ ಮೊಕದ್ದಮೆ ಸೇರಿದಂತೆ ವಿವಿಧ ಕಾನೂನು ಕ್ಷೇತ್ರಗಳಲ್ಲಿ ಸಲಹೆ ನೀಡಿದರು, ಪ್ರಕರಣಗಳನ್ನು ನಡೆಸಿದ್ದಾರೆ.

ಮೇ 18, 2022 ರಂದು ತಾರಾ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು.