North and South Block 
ಸುದ್ದಿಗಳು

ಶಿಕ್ಷೆಗೊಳಗಾದ ರಾಜಕಾರಣಿಗಳ ಸ್ಪರ್ಧೆಗೆ ಆಜೀವ ನಿಷೇಧ: ಕೇಂದ್ರದಿಂದ ವಿರೋಧ

ಜನಪ್ರತಿನಿಧಿ ಕಾಯಿದೆ ಸೆಕ್ಷನ್ 8 (3) ರ ಅಡಿಯಲ್ಲಿರುವ ಆರು ವರ್ಷಗಳ ಶಿಕ್ಷೆ ಬದಲಿಗೆ ಆಜೀವ ನಿಷೇಧ ಹೇರುವಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಅಪರಾಧ ಪ್ರಕರಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾಗಿರುವ ಹಾಲಿ ಶಾಸಕರು ಸಂಸದರು ಸೇರಿದಂತೆ ಎಲ್ಲಾ ರಾಜಕಾರಣಿಗಳಿಗೆ ಈಗಿರುವ ಆರು ವರ್ಷಗಳ ನಿಷೇಧದ ಬದಲಿಗೆ ಆಜೀವ ನಿಷೇಧ ಹೇರುವಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರಿ ಸೇವಕ ಮತ್ತು ಚುನಾಯಿತ ಪ್ರತಿನಿಧಿಯ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿತು. ಅಲ್ಲದೆ ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಸೇವಾ ನಿಯಮಾವಳಿಗಳಿಲ್ಲ ಎಂದು ಕೂಡ ಹೇಳಿದೆ.

"ಚುನಾಯಿತ ಪ್ರತಿನಿಧಿಗಳು ಸಾಮಾನ್ಯವಾಗಿ ತಮ್ಮ ಕ್ಷೇತ್ರದ ನಾಗರಿಕರಿಗೆ ನಿರ್ದಿಷ್ಟವಾಗಿ ಮತ್ತು ಸಾಮಾನ್ಯವಾಗಿ ದೇಶಕ್ಕೆ ಸೇವೆ ಸಲ್ಲಿಸಲು ತೆಗೆದುಕೊಂಡ ಪ್ರಮಾಣವಚನಕ್ಕೆ ಬದ್ಧರಾಗಿರುತ್ತಾರೆ. ಶಿಷ್ಟಾಚಾರ ಮತ್ತು ಉತ್ತಮ ಆತ್ಮಸಾಕ್ಷಿಗೆ ಅವರ ನಡವಳಿಕೆ ಒಳಪಟ್ಟಿರುತ್ತದೆ. ಚುನಾಯಿತ ಪ್ರತಿನಿಧಿಗಳು ಕಾನೂನಿಗೆ ಮೀರಿದವರಲ್ಲ ಹಾಗೆಯೇ ನಿಬಂಧನೆಗಳಿಗೆ ಬದ್ಧರಾಗಿರುತ್ತಾರೆ. ಆದ್ದರಿಂದ ಸಾರ್ವಜನಿಕ ಸೇವಕರು ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ" ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಪಬ್ಲಿಕ್‌ ಇಂಟರೆಸ್ಟ್‌ ಫೌಂಡೇಷನ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಈ ವಿಷಯವನ್ನು ಈಗಾಗಲೇ ಸ್ವಲ್ಪ ಮಟ್ಟಿಗೆ ಬಗೆಹರಿಸಲಾಗಿದೆ ಮತ್ತು ಅಂತಹ ಚುನಾಯಿತ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಇರುವ ಕಾರಣವನ್ನು ಶಾಸಕಾಂಗ ಸ್ಪಷ್ಟವಾಗಿ ವಿವರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯ ಕಾಂತ್ ಹಾಗೂ ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರದಿಂದ ಉತ್ತರ ಬಯಸಿತ್ತು.

ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8 (3) ರ ಅಡಿಯಲ್ಲಿರುವ ಆರು ವರ್ಷಗಳ ಶಿಕ್ಷೆ ಬದಲಿಗೆ ಆಜೀವ ನಿಷೇಧ ಹೇರುವಂತೆ ಉಪಾಧ್ಯಾಯ ಕೋರಿದ್ದಾರೆ. ಅಲ್ಲದೆ ಶಿಕ್ಷೆ ಅನುಭವಿಸಿದ ರಾಜಕಾರಣಿಗಳು ರಾಜಕೀಯ ಪಕ್ಷ ಸ್ಥಾಪಿಸುವುದನ್ನು ಅಥವಾ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಾಗುವುದನ್ನು ನಿಷೇಧಿಸುವಂತೆ ಕೋರಿದ್ದಾರೆ.

1951ರ ಜನಪ್ರತಿನಿಧಿ ಕಾಯಿದೆಯ 8 (3)ನೇ ಸೆಕ್ಷನ್‌ ಹೀಗಿದೆ: “ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಮತ್ತು ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ಅನುಭವಿಸಿರುವ ವ್ಯಕ್ತಿಯು ಶಿಕ್ಷೆಗೊಳಗಾದ ದಿನಂದಿಂದ ಅನರ್ಹಗೊಳ್ಳಲಿದ್ದು, ಆತ ಜೈಲಿನಿಂದ ಬಿಡುಗಡೆಯಾದ ನಂತರ ಆರು ವರ್ಷಗಳ ಅವಧಿಯವರೆಗೆ ಅನರ್ಹತೆ ಮುಂದುವರೆಯುತ್ತದೆ.”

ಉಪಾಧ್ಯಾಯ ಅವರು ಸಲ್ಲಿಸಿದ ಮೂಲ ಅರ್ಜಿಯಲ್ಲಿ ಈ ಮನವಿಗಳು ಇರಲಿಲ್ಲ. ನಂತರ ಅವರು ಕೇಂದ್ರವು ಅಫಿಡವಿಟ್‌ನಲ್ಲಿ ವಿರೋಧಿಸಿರುವ ಅಂಶಗಳನ್ನು ಸೇರಿಸಲು ಅನುಮತಿ ಕೋರಿ ತಿದ್ದುಪಡಿ ಅರ್ಜಿ ಸಲ್ಲಿಸಿದರು. ಶಿಕ್ಷೆಗೊಳಗಾದ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಆಜೀವ ಪರ್ಯಂತ ನಿಷೇಧಿಸುವ ಅರ್ಜಿಗೆ ಈಗಾಗಲೇ ಚುನಾವಣಾ ಆಯೋಗ ಬೆಂಬಲ ನೀಡಿದೆ.