J&K High Court, Jammu Bench 
ಸುದ್ದಿಗಳು

ಪಾಕಿಸ್ತಾನಿಯನ್ನು ವಿವಾಹವಾಗಿದ್ದ ಸಿಆರ್‌ಪಿಎಫ್‌ ಪೇದೆ ವಜಾ: ಕೇಂದ್ರ‌ ಸರ್ಕಾರಕ್ಕೆ ಕಾಶ್ಮೀರ ಹೈಕೋರ್ಟ್ ನೋಟಿಸ್‌

ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತಲೆದೋರಿದ್ದರ ನಡುವೆಯೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ರದ್ದುಗೊಳಿಸಿತ್ತು.

Bar & Bench

ಪಾಕಿಸ್ತಾನಿ ಪ್ರಜೆಯೊಂದಿಗೆ ವಿವಾಹವಾಗಿರುವುದನ್ನು ಮರೆಮಾಚಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ ( ಸಿಆರ್‌ಪಿಎಫ್) ಪೇದೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರ ಮತ್ತು ಸಿಆರ್‌ಪಿಎಫ್‌ಗೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ನೋಟಿಸ್‌ ನೀಡಿದೆ [ಮುನೀರ್ ಅಹ್ಮದ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವನಿ ಅವರು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ಜೂನ್ 30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದರು.

ಮದುವೆಯಾಗುವ ಉದ್ದೇಶವನ್ನು ಡಿಸೆಂಬರ್ 31, 2022 ರಲ್ಲೇ ಸಿಆರ್‌ಪಿಎಫ್‌ಗೆ ತಿಳಿಸಿದ್ದಾಗಿ ಜಮ್ಮು ನಿವಾಸಿಯಾಗಿರುವ ಪೇದೆ ಮುನೀರ್ ಅಹ್ಮದ್ ಅವರು  ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ಪೋಷಕರು ಮತ್ತು ಸ್ಥಳೀಯ ಅಧಿಕಾರಿಗಳ ಅಫಿಡವಿಟ್‌ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾಗಿ ಅವರು ವಿವರಿಸಿದ್ದಾರೆ. ಮದುವೆಗೆ ಮುನ್ನ ಏಪ್ರಿಲ್ 30, 2024 ರಂದು ಸಿಆರ್‌ಪಿಎಫ್ ಪ್ರಧಾನ ಕಚೇರಿಯಿಂದ ಔಪಚಾರಿಕ ಅನುಮೋದನೆ ಪಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಆನ್‌ಲೈನ್ ವಿವಾಹದ ನಂತರ, ಪತ್ನಿ ಮಿನಲ್‌ ಖಾನ್ ಫೆಬ್ರವರಿ 28, 2025 ರಂದು ಅಲ್ಪಾವಧಿಯ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು.  ವೀಸಾ ಮಾರ್ಚ್ 22 ರಂದು ಮುಕ್ತಾಯಗೊಂಡಿತ್ತು. ಅವರು ಮಾರ್ಚ್‌ನಲ್ಲಿ ದೀರ್ಘಾವಧಿಯ ವೀಸಾ ಗೆ ಅರ್ಜಿ ಸಲ್ಲಿಸಿದ್ದರು . ಸಂದರ್ಶನ ಸೇರಿದಂತೆ ಎಲ್ಲಾ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದರು.

ಆದರೆ ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ತಲೆದೋರಿದ್ದರ ಮಧ್ಯೆಯೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ರದ್ದುಗೊಳಿಸಿತ್ತು. ಮಿನಲ್‌ ಅವರಿಗೂ ದೇಶ ತೊರೆಯುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಪತಿ ಅಹ್ಮದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅಹ್ಮದ್‌ ಅವರು ಪಾಕಿಸ್ತಾನಿ ಪ್ರಜೆಯೊಂದಿಗಿನ ವಿವಾಹವನ್ನು ಬಹಿರಂಗಪಡಿಸಿರಲಿಲ್ಲ ಎಂಬುದು ಸಿಆರ್‌ಪಿಎಫ್‌ ವಾದವಾಗಿತ್ತು. ವೀಸಾ ಅವಧಿ ಮೀರಿದ್ದರೂ ಆಕೆಗೆ ಆಶ್ರಯ ನೀಡಿದ್ದಾರೆ. ಇದು ಸೇವಾ ನಿಯಮಗಳ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯಕರ ಎಂದು ಅದು ತಿಳಿಸಿತ್ತು.

ವೀಸಾ ಅವಧಿ ಮುಗಿದ ನಂತರವೂ ಅಹ್ಮದ್ ತನ್ನ ಪತ್ನಿ ಭಾರತದಲ್ಲಿಯೇ ಮುಂದುವರಿದಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿಲ್ಲ ಮತ್ತು ನ್ಯಾಯಾಲಯದ ವಿಚಾರಣೆಯಲ್ಲಿ ದಾರಿತಪ್ಪಿಸುವ ಹೇಳಿಕೆಗಳನ್ನು ಅಹ್ಮದ್‌ ನೀಡಿದ್ದಾರೆ ಎಂದು ಸಿಆರ್‌ಪಿಎಫ್‌ ಆಂತರಿಕ ತನಿಖೆ ಹೇಳಿತ್ತು. 

ಆದರೆ ತಾನು ಎಲ್ಲಾ ಕಾರ್ಯವಿಧಾನಗಳನ್ನು ಪಾಲಿಸಿದ್ದಾಗಿ ಅಹ್ಮದ್‌ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ತನ್ನನ್ನು ಸೇವೆಯಿಂದ ವಜಾಗೊಳಿಸಿರುವುದು ಮನಸೋ ಇಚ್ಛೆಯಿಂದ ಕೂಡಿದ್ದು ಅನ್ಯಾಯಯುತವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.