ಆತ್ಮಹತ್ಯೆಗೆ ಯತ್ನಿಸಿದ್ದ ಸಿಆರ್‌ಪಿಎಫ್‌ ಪೇದೆಯನ್ನು ವಜಾಗೊಳಿಸಿದ್ದು ಅನ್ಯಾಯ: ಒರಿಸ್ಸಾ ಹೈಕೋರ್ಟ್

ದುರಂತಗಳನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಅಂತಹ ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕುವ ಮೂಲಕ ಶಿಕ್ಷೆ ವಿಧಿಸುವ ಬದಲು ಅವರು ಅಪಾರ ಒತ್ತಡ ಅನುಭವಿಸುತ್ತಾರೆ ಎಂದು ಒಪ್ಪಿಕೊಳ್ಳುವುದು ಮುಖ್ಯ ಎಂಬುದಾಗಿ ನ್ಯಾಯಾಲಯ ನುಡಿದಿದೆ.
Indian Soldiers, Armed Forces
Indian Soldiers, Armed ForcesImage for representative purpose
Published on

ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಪೇದೆಯನ್ನು ಮರಳಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳುವಂತೆ ಈಚೆಗೆ ಸೂಚಿಸಿರುವ ಒರಿಸ್ಸಾ ಹೈಕೋರ್ಟ್‌ ಯೋಧರು ಭಾರೀ ಒತ್ತಡದಲ್ಲಿ ಕೆಲಸ ಮಾಡುವ ಬಗ್ಗೆ ಅವಲೋಕಿಸಿದೆ.

ಪೇದೆಯನ್ನು ಸೇವೆಯಿಂದ ವಜಾಗೊಳಿಸುವ ನಿರ್ಧಾರ ಅನ್ಯಾಯಯುತವಾದದ್ದು ಎಂದು ನ್ಯಾಯಮೂರ್ತಿ ಡಾ. ಎಸ್‌ ಕೆ ಪಾಣಿಗ್ರಾಹಿ ತಿಳಿಸಿದರು.

Also Read
ನಾಪತ್ತೆಯಾದ ಯೋಧರ ಸಂಬಂಧಿಕರ ನೆರವಿಗೆ ಧಾವಿಸದೆ ಒರಟು ವರ್ತನೆ: ಸೇನೆ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಕಿಡಿ

ಪೇದೆಗಳ ಮಾನಸಿಕ ಆರೋಗ್ಯದ ಬಗ್ಗೆ ಸಿಆರ್‌ಪಿಎಫ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದಂತೆ ತೋರುತ್ತಿದ್ದು ಮಾನಸಿಕ ಒತ್ತಡದಿಂದಾಗಿ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಸಂಬಂಧಪಟ್ಟ ಅಧಿಕಾರಿಗಳು ಹೀಗೆ ಮಾಡಿರುವುದರಿಂದ ನ್ಯಾಯದಾನದ ಗರ್ಭಪಾತವಾಗಿದೆ. ಅಧಿಕಾರಿಗಳು ಪೇದೆಯನ್ನು ಸಾಮಾನ್ಯ ಅಪರಾಧಿ ಎಂಬಂತೆ ಪರಿಗಣಿಸಿದ್ದು ಈ ವಿಚಾರದಲ್ಲಿ ಕಠೋರವಾಗಿ ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಜೀವಕ್ಕೆ ಇರುವ ಬೆದರಿಕೆ, ಕುಟುಂಬದಿಂದ ದೀರ್ಘಾವಧಿ ದೂರ ಇರುವುದು, ರಾಷ್ಟ್ರೀಯ ಭದ್ರತೆಯ ಹೊಣೆಗಾರಿಕೆಯಂತಹ ತಮ್ಮ ಕರ್ತವ್ಯಗಳ ಸ್ವರೂಪದಿಂದಾಗಿ ಯೋಧರು ಭಾರೀ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ ಎಂದು ನ್ಯಾಯಾಲಯ ಇದೇ ವೇಳೆ ಅವಲೋಕನ ಮಾಡಿದೆ.

Also Read
ಮಣಿಪುರ ಹಿಂಸಾಚಾರ: ವಿಷಯ ಗಂಭೀರವಾಗಿದೆ ಎಂದ ಸುಪ್ರೀಂ; ಸೇನೆ ನಿಯೋಜನೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಕಾರ

ಸಾಕಷ್ಟು ಮಾನಸಿಕ ಒತ್ತಡಕ್ಕೆ ಕಾರಣವಾಗುವ ಅತಿ ಒತ್ತಡದ ಪರಿಸ್ಥಿತಿಯನ್ನು ಯೋಧರು ನಿಭಾಯಿಸುವಂತಾಗಲು ನಿರಂತರ ಜಾಗರೂಕತೆ ಮತ್ತು ಸಂತುಲಿತತೆ ಅಗತ್ಯವಿದೆ. ಅಂತಹ ಒತ್ತಡ ಹಣಕಾಸಿನ ತೊಂದರೆ, ವೈವಾಹಿಕ ಸಮಸ್ಯೆ ಅಥವಾ ಕುಟುಂಬದ ಆರೋಗ್ಯ ಬಿಕ್ಕಟ್ಟಿನಂತಹ ಬಾಹ್ಯ ಅಂಶಗಳಿಂದ ಕೂಡಿರಬಹುದು. ಅದರ ಹೊರೆ ಅಗಾಧವಾದುದಾಗಿದ್ದು ವ್ಯಕ್ತಿಗಳು ಮಾನಸಿಕವಾಗಿ ನಿಭಾಯಿಸುವ ಕಾರ್ಯವಿಧಾನಗಳನ್ನು ಕುಗ್ಗಿಸಬಹುದು. ಈ ಎಲ್ಲದರ ಪರಿಣಾಮವಾಗಿ ಸೂಕ್ತ ಮಾನಸಿಕ ಸ್ವಾಸ್ಥ್ಯದ ಬೆಂಬಲವಿಲ್ಲದ ಕಾರಣ ಒತ್ತಡದಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಸೇನೆಯ ಸದಸ್ಯರು ಅತಿರೇಕದ ಕ್ರಮಕ್ಕೆ ಶರಣಾಗುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಾಲಯ  ಹೇಳಿದೆ.

ಇಂತಹ ದುರಂತ ಅಂತ್ಯಗಳನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಅಂತಹ ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕುವ ಮೂಲಕ ಶಿಕ್ಷೆ ವಿಧಿಸುವ ಬದಲು ಅವರು ಅಪಾರ ಒತ್ತಡ ಅನುಭವಿಸುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದು ಅದು ನುಡಿದಿದೆ.

ಸಿಆರ್‌ಪಿಎಫ್‌ ಪೇದೆಯೊಬ್ಬರು 2000ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಎರಡು ಗ್ರನೇಡ್‌ ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಶಿಸ್ತು ಕ್ರಮವಾಗಿ ಅವರನ್ನು 2001ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಈಗ ತೆಗೆದು ಹಾಕಲಾಗಿರುವ ಐಪಿಸಿ ಸೆಕ್ಷನ್‌ 309ರ (ಆತ್ಮಹತ್ಯೆ ಮಾಡಿಕೊಳ್ಳುವುದು ಕ್ರಿಮಿನಲ್‌ ಅಪರಾಧ) ಅಡಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ನಂತರ ಅದನ್ನು ಕೈಬಿಡಲಾಗಿತ್ತು.

ತಮ್ಮನ್ನು ಪುನಃ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೋರಿ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ವಿಫಲರಾದ ಪೇದೆ 2015 ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

Also Read
ಮೆಸೆಂಜರ್ ಆಪ್ ಬಳಕೆ: ಸೇನಾಧಿಕಾರಿಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್

ವಾದಗಳನ್ನು ಆಲಿಸಿದ ನ್ಯಾಯಾಲಯ ಜೂನ್ 25ರಂದು ಅವರಿಗೆ ಪರಿಹಾರ ನೀಡಿದೆ. ಮಾನಸಿಕ ಆರೋಗ್ಯ ಕಾಯಿದೆಯ ಸೆಕ್ಷನ್ 115 ರ ಪ್ರಕಾರ ಆತ್ಮಹತ್ಯೆಗೆ ಯತ್ನಿಸುವ ಯಾವುದೇ ವ್ಯಕ್ತಿ ತೀವ್ರ ಒತ್ತಡದಲ್ಲಿದ್ದು ಅಂತಹ ವ್ಯಕ್ತಿಯನ್ನು ಕ್ರಿಮಿನಲ್‌ ಕಾನೂನಡಿ ವಿಚಾರಣೆ ಇಲ್ಲವೇ ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ಪೀಠ ಹೇಳಿದೆ.

ಆದ್ದರಿಂದ, ಮೂರು ತಿಂಗಳೊಳಗೆ ಅವರನ್ನು ಸೇವೆಗೆ ಮರುಸೇರ್ಪಡೆ ಮಾಡಿಕೊಳ್ಳಬೇಕು ಮದ್ದುಗುಂಡುಗಳನ್ನು ಒಳಗೊಂಡಿರದ ಕರ್ತವ್ಯಕ್ಕೆ ಅವರನ್ನು ನಿಯೋಜಿಸಬೇಕು. ಒಂದು ವೇಳೆ ಅವರು ನಿವೃತ್ತಿ ವಯೋಮಾನ ಮೀರಿದ್ದರೆ ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ನೀಡಬೇಕು ಎಂದು ಎಂದು ನ್ಯಾಯಾಲಯ ಸೂಚಿಸಿದೆ. 

Kannada Bar & Bench
kannada.barandbench.com