Armed Forces Tribunal
Armed Forces Tribunal 
ಸುದ್ದಿಗಳು

ಸಶಸ್ತ್ರ ಪಡೆಗಳ ನ್ಯಾಯಮಂಡಳಿ: ಆರು ನ್ಯಾಯಾಂಗ ಸದಸ್ಯರ ನೇಮಕಕ್ಕೆ ಕೇಂದ್ರದ ಅನುಮೋದನೆ

Bar & Bench

ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ (ಎಎಫ್ ಟಿ) ಆರು ನ್ಯಾಯಾಂಗ ಸದಸ್ಯರ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನೇಮಕಗೊಂಡ ಆರು ಸದಸ್ಯರ ವಿವರ ಹೀಗಿದೆ:

1. ನ್ಯಾ. ಬಾಲಕೃಷ್ಣ ನಾರಾಯಣ;

2. ನ್ಯಾ. ಶಶಿಕಾಂತ್ ಗುಪ್ತಾ;

3. ನ್ಯಾ. ರಾಜೀವ್ ನರೇನ್ ರೈನಾ

4. ನ್ಯಾ. ಕೆ ಹರಿಲಾಲ್;

5. ನ್ಯಾ. ಧರಮ್ ಚಂದ್ ಚೌಧರಿ;

6. ನ್ಯಾ. ಅಂಜನಾ ಮಿಶ್ರಾ

ನ್ಯಾಯಾಧಿಕರಣ ಸುಧಾರಣಾ ಕಾಯಿದೆ, 2021ರ ಪ್ರಕಾರ, ಈ ನೇಮಕಾತಿಯ ಅವಧಿ ನಾಲ್ಕು ವರ್ಷಗಳು ಇಲ್ಲವೇ ಸದಸ್ಯರ ವಯೋಮಿತಿ 67 ವರ್ಷ ವಯೋಮಿತಿ ಮೀರಬಾರದು ಎಂದು ಇದೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್‌ ಕೇಂದ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಈ ನೇಮಕಾತಿ ನಡೆದಿದೆ. ನ್ಯಾಯಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಮತ್ತು ತನ್ನ ತೀರ್ಪು ಉಲ್ಲಂಘಿಸಿ 2021ರ ನ್ಯಾಯಾಧಿಕರಣ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಸಿಜೆಐ ಎನ್‌ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕೇಂದ್ರ ಸರ್ಕಾರದ ವಿರುದ್ಧ ಸೆಪ್ಟೆಂಬರ್ 6ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ವರದಿಗಳ ಪ್ರಕಾರ, ಮೂರು ನಗರಗಳಲ್ಲಿ ಕೇವಲ ನಾಲ್ಕು ಪೀಠಗಳು ಅಂದರೆ ದೆಹಲಿಯಲ್ಲಿ ಎರಡು ಮತ್ತು ಚಂಡೀಗಢ ಹಾಗೂ ಲಖನೌನಲ್ಲಿ ತಲಾ ಒಂದು ಪೀಠದೊಂದಿಗೆ ಎಎಫ್‌ಟಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೂಡ ಅಧಿಕ ಇದ್ದು 19,000 ಪ್ರಕರಣಗಳು ಅಂತಿಮ ತೀರ್ಪಿಗಾಗಿ ಕಾಯುತ್ತಿವೆ.

ಎಎಫ್‌ಟಿ ಕೆಲಸ ಕಾರ್ಯಗಳನ್ನು ಸಶಸ್ತ್ರ ಪಡೆಗಳ ಕಾಯಿದೆ ನಿಯಂತ್ರಿಸುತ್ತದೆ. ಎಎಫ್‌ಟಿ ಪೀಠವೊಂದರಲ್ಲಿ ತಲಾ ಒಬ್ಬ ನ್ಯಾಯಾಂಗ ಮತ್ತು ಆಡಳಿತ ಅಥವಾ ತಜ್ಞ ಸದಸ್ಯರು ಇರುತ್ತಾರೆ. ಇಬ್ಬರು ಸದಸ್ಯರ ಕೋರಂ ಪೂರ್ಣಗೊಂಡಾಗ ಮಾತ್ರ ಪೀಠ ಕಾರ್ಯನಿರ್ವಹಿಸುತ್ತದೆ.