ಸುದ್ದಿಗಳು

ಮಕ್ಕಳ ಪಾಲನೆ ಕಾಯಿದೆಯು ಪಿತೃಪ್ರಧಾನತೆಯಿಂದ ಬಿಡಿಸಿಕೊಳ್ಳಬೇಕು, ಲಿಂಗ ತಟಸ್ಥವಾಗಬೇಕು: ಅಲಾಹಾಬಾದ್ ಹೈಕೋರ್ಟ್

ಸ್ಥಿರ ಮತ್ತು ಲಿಂಗ-ತಟಸ್ಥ ವಿಧಾನ ಇರುವ ಮಾನದಂಡಗಳನ್ನು ಶಾಸಕಾಂಗವೇ ರೂಪಿಸಬೇಕು ಎಂಬುದನ್ನು ನೈಜ ಪ್ರಗತಿಜಪರತೆ ಬಯಸುತ್ತದೆ ಎಂದ ನ್ಯಾಯಾಲಯ.

Bar & Bench

ಮಕ್ಕಳ ಪಾಲನೆ ವಿಚಾರದಲ್ಲಿ ಲಿಂಗ-ತಟಸ್ಥ ವಿಧಾನ ಮತ್ತು ವಿಕಸನಗೊಳ್ಳುತ್ತಿರುವ ಮಾನದಂಡಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಗತಕಾಲದ ಪಾಲಕತ್ವ ಕಾಯಿದೆಗಳನ್ನು ತಿದ್ದುಪಡಿ ಮಾಡಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಹೇಳಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ತಾಯಿಗಿಂತಲೂ ಮಿಗಿಲಾಗಿ ತಂದೆಯೇ ಅಪ್ರಾಪ್ತ ವಯಸ್ಕ ಬಾಲಕನ ಅಥವಾ ಅವಿವಾಹಿತ ಬಾಲಕಿಯ ಸ್ವಾಭಾವಿಕ ಪೋಷಕ ಎನ್ನುವ 1956ರ ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲನಾ ಕಾಯಿದೆಯ ಸೆಕ್ಷನ್ 6ರ ಬಗ್ಗೆ ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರು ಪ್ರತಿಕ್ರಿಯಿಸಿದರು.

ಪಿತೃಪ್ರಧಾನ ಆಲೋಚನೆಗಳು ಸಮಾಜದಲ್ಲಿ ವ್ಯಾಪಕವಾಗಿದ್ದ ಹಾಗೂ ಸಾಮಾಜಿಕ ಮತ್ತು ಕಾನೂನಾತ್ಮಕ ಚಿಂತನೆಯ ಮೇಲೆ ಪ್ರಭಾವ ಬೀರುತ್ತಿದ್ದ ಸಮಯದಲ್ಲಿ ಈ ಕಾಯಿದೆ ರೂಪುಗೊಂಡಿದ್ದು 21ನೇ ಶತಮಾನದ ಭಾರತದ ಪ್ರಗತಿಪರ ವಾಸ್ತವದಲ್ಲಿ ಅದು ಅಪ್ರಚಲಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಸಾಮಾಜಿಕ ಬದಲಾವಣೆಗಳು ವಿಶೇಷವಾಗಿ ತಾಯಿಗೆ, ಅದರಲ್ಲಿಯೂ ಹೆಣ್ಣು ಮಗುವನ್ನು ಒಳಗೊಂಡ ಪ್ರಕರಣಗಳಲ್ಲಿ ತಾಯಿಗೆ ಆದ್ಯತೆಯ ಪಾಲನೆಯ ಹಕ್ಕುನೀಡುತ್ತ ಬಂದಿದ್ದು ಸಂಹಿತಾ ಕಾನೂನುಗಳಲ್ಲಿ ಕೂಡ ಅಂತಹ ಪ್ರಗತಿಪರ ದೃಷ್ಟಿಕೋನ ಮೂಡಬೇಕು ಎಂದು ಪೀಠ ನುಡಿದಿದೆ.

ಹೆಣ್ಣುಮಕ್ಕಳ ತಾಯಂದಿರು ಆದ್ಯತೆ ಮೇರೆಗೆ ಪಾಲನೆ ಹಕ್ಕು ಪಡೆಯುವುದನ್ನು ಮಾನ್ಯ ಮಾಡುವುದರಲ್ಲಿ ಶಾಸನಗಳಲ್ಲಿ ಇದ್ದ ಶೂನ್ಯವನ್ನು ನ್ಯಾಯಾಂಗದ ವ್ಯಾಖ್ಯಾನ ತುಂಬಿದೆ. ಆದರೂ ಶಾಸಕಾಂಗವೇ  ಸ್ಥಿರ ಮತ್ತು ಲಿಂಗ-ತಟಸ್ಥ ವಿಧಾನ ಇರುವ ಮಾನದಂಡ ರೂಪಿಸಬೇಕು ಎಂಬುದನ್ನು ನಿಜವಾದ ಪ್ರಗತಿಪರತೆ ಬಯಸುತ್ತದೆ ಎಂದು ಮೇ 30ರಂದು ಹೊರಡಿಸಿದ ತೀರ್ಪಿನಲ್ಲಿ ಅದು ಹೇಳಿದೆ.

ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಮಗಳನ್ನು ತನ್ನ ಸುಪರ್ದಿಗೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮಗುವಿನ ಮಧ್ಯಂತರ ಸುಪರ್ದಿಗೆ ಒಪ್ಪದ ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಆಕೆ ಪ್ರಶ್ನಿಸಿದ್ದರು.

ಮಧ್ಯಂತರ ಸುಪರ್ದಿ ಕೋರಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಸುಳ್ಳು ಮತ್ತು ದಾರಿತಪ್ಪಿಸುವ ಸಂಗತಿಗಳ ಆಧಾರದ ಮೇಲೆ ತಂದೆ ವಿರೋಧಿಸಿದ್ದಾರೆ ಎಂದು ಕಂಡುಕೊಂಡ ಹೈಕೋರ್ಟ್‌ ಅಂತಿಮವಾಗಿ ತಾಯಿಯ ಪರವಾಗಿ ತೀರ್ಪು ನೀಡಿತು.