Lawyers 
ಸುದ್ದಿಗಳು

ಸಿಐಡಿಗೆ ವಕೀಲ ಪ್ರೀತಮ್‌ ಹಲ್ಲೆ ಪ್ರಕರಣದ ತನಿಖೆ ಹೊಣೆ; ಡಿ.9ಕ್ಕೆ ಎಜಿ ಕಚೇರಿಯಲ್ಲಿ ಸಭೆ ನಡೆಸಲು ಹೈಕೋರ್ಟ್‌ ಆದೇಶ

ಪ್ರಕರಣದ ತನಿಖೆಯನ್ನು ಡಿಜಿಪಿ ಮಟ್ಟದ ಅಧಿಕಾರಿ ನಡೆಸಬೇಕು. ಡಿಐಜಿ ಮಟ್ಟದ ಅಧಿಕಾರಿಯು ನಿಗಾವಹಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯ.

Bar & Bench

ಚಿಕ್ಕಮಗಳೂರಿನ ವಕೀಲ ಪ್ರೀತಮ್‌ ಅವರ ಮೇಲಿನ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ವಕೀಲರ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ ಮತ್ತು ಡಿ ಆರ್‌ ರವಿಶಂಕರ್‌ ಅವರು ಪ್ರೀತಮ್‌ ಘಟನೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಇತರೆ ವಕೀಲರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಪೊಲೀಸರೂ ಪ್ರತಿಭಟನೆ ನಡೆಸಿದ್ದಾರೆ ಎಂದರು.

ಆಗ ಪೀಠವು “ಚಿಕ್ಕಮಗಳೂರು ವಕೀಲರು ನಿರಂತರವಾಗಿ ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲಾಗದು. ಇದನ್ನು ಒಪ್ಪಲಾಗದು” ಎಂದಿತು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು” ಎಂದರು.

ಪ್ರತಿಭಟನೆಯಲ್ಲಿ ನಿರತವಾಗಿದ್ದ ಪೊಲೀಸರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಪೀಠವು ಎಜಿಗೆ ಪ್ರಶ್ನಿಸಿತು. ಆಗ ಎಜಿ ಅವರು ತಪ್ಪತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು. ಎಜಿ ಅವರ ಹೇಳಿಕೆಯನ್ನು ಪೀಠವು ದಾಖಲಿಸಿಕೊಂಡಿತು. ಮುಂದುವರೆದು ಪೀಠವು ಪ್ರಕರಣದ ತನಿಖೆಯನ್ನು ಡಿಜಿಪಿ ಮಟ್ಟದ ಅಧಿಕಾರಿ ನಡೆಸಬೇಕು. ಡಿಐಜಿ ಮಟ್ಟದ ಅಧಿಕಾರಿಯು ನಿಗಾವಹಿಸಬೇಕು ಎಂದಿತು.

ಕಲಾಪ ಬಹಿಷ್ಕರಿಸುವುದಿಲ್ಲ ಮತ್ತು ಪ್ರತಿಭಟನೆ ಮುಂದುವರಿಸುವುದಿಲ್ಲ ಎಂದು ಫಣೀಂದ್ರ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ನೀಡಿದ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.

ಸಮಸ್ಯೆಗಳನ್ನು ಪರಿಹರಿಸುವ ಮತ್ತು ವಕೀಲರ ಬೇಡಿಕೆಗಳನ್ನು ಆಲಿಸಲು ಡಿಸೆಂಬರ್‌ 9ರಂದು ಅಡ್ವೊಕೇಟ್‌ ಜನರಲ್‌ ಅವರ ಕಚೇರಿಯಲ್ಲಿ ಸಭೆ ನಡೆಸಬೇಕು. ಇಲ್ಲಿ ರಾಜ್ಯ ವಕೀಲರ ಪರಿಷತ್‌ ಮತ್ತು ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರೂ ಸೇರಿ ವಕೀಲರ ಸಂಘದ ಆರು ಪ್ರತಿನಿಧಿಗಳು, ಹಿರಿಯ ವಕೀಲರಾದ ಉದಯ್‌ ಹೊಳ್ಳ, ಜಯಕುಮಾರ್‌ ಪಾಟೀಲ್‌, ವಿ ಲಕ್ಷ್ಮಿನಾರಾಯಣ, ಕೆ ಎನ್‌ ಫಣೀಂದ್ರ, ಡಿ ಆರ್‌ ರವಿಶಂಕರ್ ಮತ್ತು ವಿವೇಕ್‌ ಸುಬ್ಬಾರೆಡ್ಡಿ ಅವರು ಸಭೆಯಲ್ಲಿ ಭಾಗವಹಿಸಬಹುದು. ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಡಿಐಜಿ ಸಭೆಯಲ್ಲಿ ಭಾಗವಹಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಡಿಸೆಂಬರ್‌ 12ಕ್ಕೆ ಮುಂದೂಡಿದೆ.