ವಕೀಲ ಪ್ರೀತಮ್‌ ಪ್ರಕರಣ: ನಾಲ್ವರು ವಕೀಲರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ವಕೀಲರಾದ ಡಿ ಬಿ ಸುಜೇಂದ್ರ, ಎ ಕೆ ಭುವನೇಶ್‌, ಕೆ ಬಿ ನಂದೀಶ್‌ ಮತ್ತು ಎಚ್‌ ಎಂ ಸುಧಾಕರ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 353, 504, 506 ಜೊತೆಗೆ 149ರ ಅಡಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
Lawyers
Lawyers

ಚಿಕ್ಕಮಗಳೂರಿನ ಪೊಲೀಸ್‌ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಮತ್ತು ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಚಿಕ್ಕಮಗಳೂರಿನ ನಾಲ್ವರು ವಕೀಲರ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಿಕ್ಕಮಗಳೂರು ಟೌನ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ವಕೀಲರಾದ ಡಿ ಬಿ ಸುಜೇಂದ್ರ, ಎ ಕೆ ಭುವನೇಶ್‌, ಕೆ ಬಿ ನಂದೀಶ್‌ ಮತ್ತು ಎಚ್‌ ಎಂ ಸುಧಾಕರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಚಿಕ್ಕಮಗಳೂರಿನಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿರುವ ವಕೀಲ ಎನ್‌ ಟಿ ಪ್ರೀತಮ್‌ ಅವರ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಈ ಪ್ರತಿ ದೂರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಟೌನ್‌ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿರುವ ಹೈಕೋರ್ಟ್‌, ಎಫ್‌ಐಆರ್‌ಗೆ ತಡೆ ನೀಡಿದೆ.

ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ವಕೀಲ ಪ್ರೀತಮ್‌ ಅವರ ಮೇಲೆ ಹಲ್ಲೆಯಾದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠವು ಸ್ವಯಂಪ್ರೇರಿತವಾಗಿ ಪರಿಗಣಿಸಿ, ವಿಚಾರಣೆ ನಡೆಸಿದೆ. ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಬಳಿಕ ಪೊಲೀಸರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ ಪೊಲೀಸರು ಡಿಸೆಂಬರ್‌ 3ರಂದು ತಡರಾತ್ರಿ 1.45 ಪ್ರತ್ಯೇಕವಾಗಿ ಅರ್ಜಿದಾರರು ಸೇರಿ ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳ ವಿರುದ್ಧ ಪ್ರತ್ಯೇಕವಾಗಿ ಮೂರು ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರೀತಮ್‌ ಪ್ರಕರಣಕ್ಕೆ ಪ್ರತಿಯಾಗಿ ದುರುದ್ದೇಶದಿಂದ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಿಗೆ ತಡೆ ನೀಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎ ಬೆಳ್ಳಿಯಪ್ಪ ಅವರು “ನಾವು ದುರುದ್ದೇಶಪೂರಿತ ಕ್ರಮಕೈಗೊಳ್ಳುವುದಿಲ್ಲ” ಎಂದರು.

ಚಿಕ್ಕಮಗಳೂರು ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2023ರ ನವೆಂಬರ್‌ 30ರಂದು ಸಂಜೆ 6.30ಕ್ಕೆ ವಕೀಲ ಎನ್‌ ಟಿ ಪ್ರೀತಮ್‌ ಅವರು ಬೈಕ್‌ ನಿಲುಗಡೆ ಮಾಡಿದ್ದರು. ಆಗ ಬೈಕ್‌ ಕೀ ಎತ್ತಿಕೊಂಡಿದ್ದ ಪೊಲೀಸ್‌ ಅಧಿಕಾರಿಯು ನೀವು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದೀರಿ ಎಂದು ತಿಳಿಸಿದ್ದರು. ಅದಕ್ಕೆ ವಕೀಲ ಪ್ರೀತಮ್‌ ದಂಡ ಪಾವತಿಸುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪದ ಪೊಲೀಸರು ಪ್ರೀತಮ್‌ ಅವರನ್ನು ಠಾಣೆಗೆ ಕರೆದೊಯ್ದು ಹಾಕಿ ಹಾಗೂ ಕ್ರಿಕೆಟ್‌ ಬ್ಯಾಟಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರೂ ಪ್ರೀತಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ವಕೀಲರು ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿ, ಪೊಲೀಸರ ದುಂಡಾವರ್ತನೆ ಖಂಡಿಸಿದ್ದಾರೆ. ಗಾಯಗೊಂಡ ಪ್ರೀತಮ್‌ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದಾಗ್ಯೂ, ಅರ್ಜಿದಾರ ವಕೀಲರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರೀತಮ್‌ ಅವರ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದ ಪೊಲೀಸ್‌ ಅಧಿಕಾರಿ ಎ ಎಂ ಸತೀಶ್‌ ಅವರ ಮೊಬೈಲ್‌ ಕಿತ್ತುಕೊಂಡು, ಹಲ್ಲೆ ನಡೆಸಲು ಯತ್ನಿಸಿದ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ, ಜೀವ ಬೆದರಿಕೆವೊಡ್ಡಿದ ಮತ್ತು ಸಾರ್ವಜನಿಕ ಶಾಂತಿಭಂಗ ಉಂಟು ಮಾಡಿದ ಆರೋಪ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರ ವಕೀಲರ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ. ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ದುರುದ್ದೇಶದಿಂದ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ ದಾಖಲಿಸಲಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳನ್ನೂ ಆರೋಪಿಗಳನ್ನಾಗಿಸಲಾಗಿದೆ. ಪೊಲೀಸ್‌ ಅಧಿಕಾರಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಂಡಿದ್ದಾರೆ. ಆದ್ದರಿಂದ ಎಫ್ಐಆರ್‌ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಕೀಲರಾದ ಡಿ ಬಿ ಸುಜೇಂದ್ರ, ಎ ಕೆ ಭುವನೇಶ್‌, ಕೆ ಬಿ ನಂದೀಶ್‌ ಮತ್ತು ಎಚ್‌ ಎಂ ಸುಧಾಕರ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 353, 504, 506 ಜೊತೆಗೆ 149 ಅಡಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com