ಹಲ್ಲೆ ಪ್ರಕರಣ: 'ವಕೀಲರಿಗೆ ಹೀಗಾದರೆ ಸಾಮಾನ್ಯರ ಗತಿಯೇನು?' ಪೊಲೀಸರ ನಡೆ ಕಾನೂನಿಗೆ ಬೆದರಿಕೆ ಎಂದ ಹೈಕೋರ್ಟ್‌

ಕೆಲವು ದೇಶಗಳಲ್ಲಿ ವಕೀಲರ ಮೇಲಿನ ದಾಳಿಯನ್ನು ಹೀನ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಪೊಲೀಸ್‌ ಮತ್ತು ಜಿಲ್ಲಾ ಅಧಿಕಾರಿಗಳು ಕಾನೂನು ವೃತ್ತಿಯನ್ನು ಶ್ರೇಷ್ಠ ಎಂದು ಗೌರವಿಸಬೇಕು ಎಂದ ನ್ಯಾ. ದೀಕ್ಷಿತ್‌.
Police Brutality
Police Brutality

ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಮೇಲೆ ಪೊಲೀಸರಿಂದ ನಡೆದಿರುವ ಹಲ್ಲೆ ಪ್ರಕರಣ ಈ ಹಿಂದೆ ಉಗಾಂಡದಲ್ಲಿ ನಡೆಯುತ್ತಿದ್ದಂತಹ ಸಂಗತಿಗಳನ್ನು ನೆನಪಿಸಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಕಳವಳ ವ್ಯಕ್ತಪಡಿಸಿತು.

ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಾಲಯವು, "ವಕೀಲರಿಗೆ ಹೀಗಾದರೆ ಸಾಮಾನ್ಯರ ಗತಿಯೇನು? ಇದೊಂದು ರೀತಿಯಲ್ಲಿ ಕಾನೂನಿಗೆ (ರೂಲ್‌ ಆಫ್‌ ಲಾ) ಬೆದರಿಕೆಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿತು.

ನ್ಯಾಯಾಲಯದ ಸೂಚನೆಯಂತೆ ವಿಚಾರಣೆಗೆ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಇನ್ನೂ ಬಂಧನವಾಗಿಲ್ಲ. ಆರು ಪೊಲೀಸರನ್ನು ಅಮಾನತು ಮಾಡಲಾಗಿರುವ ಆದೇಶ ಸಲ್ಲಿಸಿದ್ದೇವೆ. ಐಪಿಸಿ ಸೆಕ್ಷನ್‌ 307 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದುವರಿದು, “ಹಿಂದೊಮ್ಮೆ ಸಿಟಿ ಸಿವಿಲ್‌ ಕೋರ್ಟ್‌ನಲ್ಲೂ ಘಟನೆಯೊಂದು ನಡೆದಿತ್ತು. ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ವೈಯಕ್ತಿಕವಾಗಿ ಈ ಪ್ರಕರಣದ ಮೇಲೆ ನಿಗಾ ಇಟ್ಟಿದ್ದಾರೆ. ನ್ಯಾಯದಾನ ಮಾಡಲಾಗುವುದು” ಎಂದು ಪೀಠಕ್ಕೆ ಭರವಸೆ ನೀಡಿದರು.

ಮುಖ್ಯ ನ್ಯಾಯಮೂರ್ತಿ ವರಾಳೆ ಅವರು “ವಕೀಲರ ಕೋರಿಕೆಯಂತೆ ಆರೋಪಿಗಳ ಬಂಧನ ಆದೇಶ ಮಾಡಲಾಗದು. ಸಹೋದ್ಯೋಗಿಯ ಮೇಲೆ ಹಲ್ಲೆಯಾದಾಗ ವಕೀಲರು ಬೆಂಬಲ ಸೂಚಿಸಬಹುದು. ಆದರೆ, ಕರ್ತವ್ಯಕ್ಕೆ ಗೈರಾಗಲಾಗದು. ತಪ್ಪಿತಸ್ಥರನ್ನು ಬಂಧಿಸಲಾಗುವುದು. ಇದಕ್ಕಿಂತ ಇನ್ನೇನು ಬೇಕು? ವಕೀಲ ಪ್ರೀತಂ ದಂಡ ಪಾವತಿಸಲು ಸಿದ್ಧವಾಗಿದ್ದಾಗ ಪೊಲೀಸರು ಏಕೆ ಹಲ್ಲೆ ನಡೆಸಬೇಕಿತ್ತು? ಎಂದು ಪ್ರಶ್ನಿಸಿದರು.

Attack on lawyer by Police
Attack on lawyer by Police

“ಎಜಿ ತಾವು ಸಹ ಈ ಘಟನೆಯಿಂದ ನೊಂದಿರುವುದಾಗಿ ಹೇಳಿದ್ದಾರೆ. ಕಲಾಪಕ್ಕೆ ಗೈರಾಗುವುದು ಪರಿಹಾರವಲ್ಲ. ಕಲಾಪಕ್ಕೆ ಹಾಜರಾಗುವಂತೆ ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸಿ ಹೇಳಿ” ಎಂದು ಚಿಕ್ಕಮಗಳೂರಿನಿಂದ ಪ್ರತಿಭಟನಾನಿರತ ವಕೀಲರ ಸಮೂಹದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ವಿವೇಕ್‌ ಸುಬ್ಬಾರೆಡ್ಡಿಗೆ ಹೇಳಿದರು.

“ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಜಿ ಖಾತರಿ ನೀಡಿದ್ದಾರೆ. ಡಿವೈಎಸ್‌ಪಿಗೆ ತನಿಖೆ ಹೊಣೆ ನೀಡಲಾಗಿದೆ. ಎಡಿಜಿಪಿ ನ್ಯಾಯಾಲಯದಲ್ಲಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಜಿ ಅವರ ಪ್ರತಿಕ್ರಿಯೆಯಿಂದ ಗಂಭೀರತೆ ಗೋಚರಿಸುತ್ತಿದೆ. ಬಂಧನ ಅಗತ್ಯವಾದರೆ ಅದನ್ನೂ ಮಾಡಲಿದ್ದಾರೆ” ಎಂದರು.

ಈ ಮಧ್ಯೆ, “ರೆಡ್ಡಿ ಅವರೇ ವಕೀಲರ ರಕ್ಷಣಾ ಕಾಯಿದೆ ಏನಾಯಿತು? ನಾವು ಪ್ರಕರಣದ ಮೇಲೆ ನಿಗಾ ಇಡುವುದರ ಜೊತೆಗೆ ಏನು ಕ್ರಮಕೈಗೊಳ್ಳಲಾಗಿದೆ ಎಂಬುದರ ವರದಿ ತರಿಸಿಕೊಳ್ಳುತ್ತೇವೆ. ನಾವು ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿಲ್ಲ. ಎಲ್ಲವನ್ನೂ ಪರಿಗಣಿಸಲಾಗುವುದು. ಆದರೆ, ವಕೀಲರ ಸ್ಥಳ ಬೀದಿಯಲ್ಲ. ಅವರು ನ್ಯಾಯಾಲಯದಲ್ಲಿ ನಿಲ್ಲಬೇಕು. ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಅವರಿಗೆ ಬೆಂಬಲ ನೀಡುವುದನ್ನು ಒಪ್ಪುತ್ತೇವೆ” ಎಂದರು.  

ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಐಪಿಸಿ ಸೆಕ್ಷನ್‌ 307 ಅಡಿ ಪ್ರಕರಣ ದಾಖಲಿಸಿರುವುದನ್ನು ಬಿಟ್ಟು ಏನನ್ನೂ ಮಾಡಲಾಗಿಲ್ಲ. ಸಿಸಿಟಿವಿ ಇಲ್ಲದ ಕಂಪ್ಯೂಟರ್‌ ಕೊಠಡಿಗೆ ಕರೆದೊಯ್ದು ವಕೀಲ ಪ್ರೀತಂ ಅವರನ್ನು ಹಾಕಿ ಕಡ್ಡಿಯಿಂದ ಬಡಿದಿದ್ದಾರೆ. ಪ್ರತಿದಿನ ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ. ಆದರೆ, ನಮಗೆ ನ್ಯಾಯವಿಲ್ಲವಾಗಿದೆ ಎಂದು ವಕೀಲರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗದಿದ್ದ ಮೇಲೆ ಬೇರೆಯವರಿಗೆ ನ್ಯಾಯ ದೊರಕಿಸಿಕೊಟ್ಟು ಏನು ಫಲ ಎಂದು ಕೇಳುತ್ತಿದ್ದಾರೆ. ಮಧ್ಯರಾತ್ರಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಒಂದೇ ಒಂದು ಹೆಜ್ಜೆ ಇಟ್ಟಿಲ್ಲ. ಪೊಲೀಸರಿಗೆ ಬೇರೆ ಕಾನೂನು, ಬೇರೆಯವರಿಗೆ ಇನ್ನೊಂದು ಕಾನೂನು ಇದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

ನ್ಯಾ. ದೀಕ್ಷಿತ್‌ ಅವರು “ವಕೀಲರ ಮೇಲಿನ ಹಲ್ಲೆ ಒಳ್ಳೆಯ ವಿಚಾರವಲ್ಲ. ಹಲ್ಲೆಯು ಒಳ್ಳೆಯ ಸಂದೇಶ ನೀಡುವುದಿಲ್ಲ. ಈ ಘಟನೆಯಿಂದ ಸಿಜೆಗೆ ಬೇಸರವಾಗಿದೆ. ಇಂಥ ಘಟನೆಗಳು ಉಗಾಂಡದಲ್ಲಿ ನಡೆಯುತ್ತಿದ್ದವು. ವಕೀಲರಿಗೆ ಹೀಗಾದರೆ ಸಾಮಾನ್ಯರ ಗತಿಯೇನು? ಈ ಘಟನೆಗಳು ಬೇರೆ ರಾಜ್ಯದಲ್ಲಿ ನಡೆಯುತ್ತಿದ್ದವು. ಅವುಗಳ ಹೆಸರನ್ನು ನಾನು ಹೇಳುವುದಿಲ್ಲ. ಇದು ಕಾನೂನಿಗೆ ಬೆದರಿಕೆಯಾಗಿದೆ? ಎಲ್ಲಾ ವಕೀಲರು ಶುದ್ಧ ಎಂದು ನಾವು ಹೇಳುತ್ತಿಲ್ಲ. ಸಾಮಾನ್ಯವಾಗಿ ವಕೀಲರು ಕಾನೂನು ಪಾಲಕರು ಎಂಬ ಭಾವನೆ ಇದೆ. ಇದು ಟ್ರಾಫಿಕ್‌ ಉಲ್ಲಂಘನೆ ಘಟನೆ. ಹೀನ ಕೃತ್ಯವಾಗಿದ್ದರೆ ಅದನ್ನು ಹೇಗೋ ಅರ್ಥ ಮಾಡಿಕೊಳ್ಳಬಹುದಿತ್ತು” ಎಂದರು.

ಪ್ರತಿಭಟನಾನಿರತ ವಕೀಲರನ್ನು ಕುರಿತು ನ್ಯಾ. ದೀಕ್ಷಿತ್‌ ಅವರು “ಇದೊಂದು ರೀತಿಯಲ್ಲಿ ಟ್ರೇಡ್‌ ಯೂನಿಯನ್‌ ಚಟುವಟಿಕೆಯಂತಾಗಬಾರದು. ನಾವೆಲ್ಲರೂ ಗೌರವಾನ್ವಿತ ಹುದ್ದೆಯಲ್ಲಿರುವವರು. ವಕೀಲರ ಅಹವಾಲು ನ್ಯಾಯಾಮೂರ್ತಿಗಳ ವಿರುದ್ಧವಲ್ಲ. ಹೀಗಾಗಿ, ನ್ಯಾಯಾಧೀಶರನ್ನೇಕೆ ಅವಾಯ್ಡ್‌ ಮಾಡುತ್ತೀರಿ? ನಿಮಗೆ ನ್ಯಾಯಮೂರ್ತಿಗಳ ಬಗ್ಗೆ ಯಾವುದೇ ಆಕ್ಷೇಪವಿಲ್ಲದಿರುವಾಗ ಅವರನ್ನು ನೀವು ಮುಟ್ಟಿಸಿಕೊಳ್ಳದವರ ರೀತಿ ಏಕೆ ನೋಡುತ್ತೀರಿ?” ಎಂದರು.

Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

ಪೊಲೀಸರ ಕೃತ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ದೀಕ್ಷಿತ್‌ ಅವರು “ಹೆಲ್ಮೆಟ್‌ ಧರಿಸುವುದು ತಲೆಗೆ ಏನೂ ಆಗಬಾರದು ಎಂಬ ಉದ್ದೇಶದಿಂದ. ಈಗ ಪೊಲೀಸರು ಜನರ ತಲೆ ಹೊಡೆಯುತ್ತಿರುವುದರಿಂದ ಹೆಲ್ಮೆಟ್‌ ಧರಿಸಬೇಕಾದ ಅಗತ್ಯವಿಲ್ಲ” ಎಂದು ಕುಟುಕಿದರು.

ಎಜಿ ಅವರ ವಾದದ ಕುರಿತು ನ್ಯಾ. ದೀಕ್ಷಿತ್‌ ಅವರು “ಬೀದಿ ಬದಿ ವ್ಯಾಪಾರಿಯ ಮೇಲಲ್ಲ, ಬಾರ್‌ನ ಸದಸ್ಯರ ಮೇಲೆ ದಾಳಿ ನಡೆದಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆಯೇ ಎಂಬ ಪ್ರಶ್ನೆಯನ್ನು ಸಾಮಾನ್ಯ ಜನರಲ್ಲಿ ಮೂಡಿಸಬಹುದು. ಹೀಗಾಗಿ, ಧರಣಿ ಮಾಡುತ್ತಿರುವವರಲ್ಲಿ ನಾವು ದೋಷ ಹುಡುಕಲಾಗದು” ಎಂದರು.

“ಪೊಲೀಸರು- ವಕೀಲರ ನಡುವೆ ಸಂಘರ್ಷ ನಡೆದಿದೆ. ಈ ಸಂಬಂಧ ಎರಡು ಮೂರು ವರದಿಗಳಿವೆ. ಮೊದಲನೆಯದು ಪಟವರ್ಧನ್‌ ಆಯೋಗದ್ದಾಗಿದೆ. ಇದು ಏಕೆ ನಡೆಯುತ್ತಿದೆ. ಇದೊಂದು ರೀತಿಯಲ್ಲಿ ಪ್ರಾಣಿ-ಮನುಷ್ಯನ ಸಂಘರ್ಷವಿದ್ದಂತೆ. ಇಲ್ಲಿ ಯಾರು ಪ್ರಾಣಿ, ಯಾರು ಮನುಷ್ಯರು ಎಂದು ನಾನು ಹೇಳುವುದಿಲ್ಲ. ಅದು ಎಲ್ಲರಿಗೂ ಅರ್ಥವಾಗುತ್ತದೆ. ಇದಕ್ಕೆ ಮಿತಿ ಇರಬೇಕು. ಕೆಲವು ದೇಶಗಳಲ್ಲಿ ವಕೀಲರ ಮೇಲಿನ ದಾಳಿಯನ್ನು ಹೀನ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಪೊಲೀಸ್‌ ಮತ್ತು ಜಿಲ್ಲಾ ಅಧಿಕಾರಿಗಳು ಕಾನೂನು ವೃತ್ತಿಯನ್ನು ಶ್ರೇಷ್ಠ ಎಂದು ಗೌರವಿಸಬೇಕು. ಸಂವಿಧಾನದಲ್ಲಿ ಉಲ್ಲೇಖವಾಗಿರುವ ಏಕೈಕ ವೃತ್ತಿ ಇದೊಂದೇ ಈ ವೃತ್ತಿಯನ್ನು ಈ ರೀತಿ ಪರಿಗಣಿಸುವುದು ನಿಜಕ್ಕೂ ದುಃಖ ಉಂಟು ಮಾಡುತ್ತದೆ” ಎಂದು ಖೇದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎಸ್‌ ಬಸವರಾಜ “ವಿಶಾಖ ವರ್ಸಸ್‌ ರಾಜಸ್ಥಾನ ರಾಜ್ಯ ಪ್ರಕರಣದಲ್ಲಿ ಶಾಸಕಾಂಗ ಕಾನೂನು ತರುವವರಿಗೆ ಮಾರ್ಗಸೂಚಿ ರೂಪಿಸಬಹುದು ಎಂದು ಹೇಳಲಾಗಿದೆ. ವಕೀಲರ ರಕ್ಷಣಾ ಮಸೂದೆಯು ವಿಧಾನಸಭೆಯಲ್ಲಿ ಬಾಕಿ ಇದೆ. ಒಂದೊಮ್ಮೆ ವಕೀಲರೊಬ್ಬರನ್ನು ಬಂಧಿಸಿದಾಗ ಪೊಲೀಸರು ಸಮೀಪದ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು ಎಂಬುದು ನಮ್ಮ ಕೋರಿಕೆ. ಇದನ್ನು ನ್ಯಾಯಾಲಯ ಮಾಡಬಹುದು. ಕೆಎಸ್‌ಬಿಸಿಯು ಈಚೆಗೆ ರಾಜ್ಯಮಟ್ಟದ ಕಾರ್ಯಕ್ರಮ ನಡೆಸಿದ್ದು, ಅದರಲ್ಲಿ ಮುಖ್ಯಮಂತ್ರಿಗಳು ನಾವು ಆರನೇ ಭಾಗ್ಯ ನೀಡುತ್ತಿದ್ದೇವೆ ಅದು ವಕೀಲರ ರಕ್ಷಣಾ ಮಸೂದೆಯ ರೂಪದಲ್ಲಿರಲಿದೆ. ಇದನ್ನು ಎರಡು ತಿಂಗಳ ಒಳಗೆ ಮಾಡಲಾಗುವುದು ಎಂದು ನಾಲ್ಕು ತಿಂಗಳ ಹಿಂದೆ ಹೇಳಿದ್ದಾರೆ” ಎಂದರು.

ಮುಂದುವರಿದು, “ಪೊಲೀಸರು-ವಕೀಲರ ನಡುವೆ ಇಷ್ಟು ದ್ವೇಷ ಏಕೆ ಎಂದು ನೀವು (ಪೀಠ) ಕೇಳಿದ್ದೀರಿ. ಏಕೆಂದರೆ ಖಾಪ್‌ ಪಂಚಾಯಿತಿ ಕಾರಣದಿಂದಾಗಿ. ಆರು ಗಂಟೆಯ ನಂತರ ರಾತ್ರಿ 11 ಗಂಟೆಯವರೆಗೆ ಖಾಪ್‌ ಪಂಚಾಯಿತಿ ನಡೆಸಲಾಗುತ್ತದೆ. ಇಲ್ಲಿ ಪೊಲೀಸರು ವಕೀಲರನ್ನು ಸ್ಪರ್ಧಿಗಳು ಎಂದು ಪರಿಗಣಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಇಡೀ ವ್ಯವಸ್ಥೆಯನ್ನು ಹಾಳು ಮಾಡಿದೆ. ಈ ವಿಚಾರದ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ” ಎಂದರು.

ವಕೀಲರ ರಕ್ಷಣಾ ಮಸೂದೆ ಶಾಸಕಾಂಗದಲ್ಲಿ ಬಾಕಿ ಉಳಿದಿದೆ. ನನಗಿರುವ ಮಾಹಿತಿಯ ಪ್ರಕಾರ ಅಧಿಕಾರವನ್ನು ಯಾವುದೇ ಶಾಸಕ ಅಥವಾ ಮಂತ್ರಿ ನೀಡಲು ಸಿದ್ಧರಿಲ್ಲ. ಇಲ್ಲಿನ ಎಲ್ಲಾ ಒಳ ಹೊರಗು ನನಗೆ ಗೊತ್ತಿದೆ. ಇದು ನ್ಯಾಯಾಂಗ ಶಾಸನ (ಜುಡಿಷಿಯಲ್‌ ಲೆಜಿಸ್ಲೇಷನ್) ರೂಪದಲ್ಲಿ ನಿಮ್ಮಿಂದ ಮಾತ್ರ ಬರಬೇಕು. ವಿಶಾಖ ಪ್ರಕರಣದ ರೀತಿಯಲ್ಲಿ. ಹೀಗೆ ಮಾಡುವುದರಿಂದ ಪೊಲೀಸರ ಮೃಗೀಯ ವರ್ತನೆಗೆ ಕಡಿವಾಣ ಹಾಕಬಹುದು. ನಿಮ್ಮಿಂದ ಕನಿಷ್ಠ ಸಹಾನುಭೂತಿ ಬಯಸುತ್ತಿದ್ದೇವೆ. 1.2 ಲಕ್ಷ ವಕೀಲರ ಸಮುದಾಯದ ದೃಷ್ಟಿಯಿಂದ ಇದನ್ನು ಮಾಡಬೇಕು” ಎಂದು ಕೋರಿದರು.

Vivek Subbareddy and other lawyer appeared through VC for hearing
Vivek Subbareddy and other lawyer appeared through VC for hearing

ಇದಕ್ಕೆ ಸಿಜೆ “ಇದೊಂದು ಸಕಾರಾತ್ಮಕ ಸಲಹೆಯಾಗಿದೆ. ಇದನ್ನು ಪರಿಗಣಿಸಬಹುದು” ಎಂದರು.

ಆಗ ಎಜಿ ಅವರು “ಈ ಮಸೂದೆಯ ಕುರಿತು ನಿನ್ನೆಯಷ್ಟೇ ಸುದೀರ್ಘವಾಗಿ ಚರ್ಚಿಸಿದ್ದೇವೆ. ಪ್ರತಿ ನಿಬಂಧನೆಯ ಕುರಿತು ವಿವೇಕ್‌ ಸುಬ್ಬಾರೆಡ್ಡಿ ಅವರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದೇನೆ” ಎಂದರು.

ಆಗ ವಿವೇಕ್‌ ಸುಬ್ಬಾರೆಡ್ಡಿ ಅವರು “ಎಜಿ ಮುಂದಡಿ ಇಟ್ಟು ಮಸೂದೆ ಕಾನೂನಾಗಲು ಪ್ರಯತ್ನಿಸಬೇಕು” ಎಂದರು.

ಇದೆಲ್ಲವನ್ನೂ ಆಲಿಸಿದ ನ್ಯಾ. ದೀಕ್ಷಿತ್‌ ಅವರು “ಇಲ್ಲಿ ಭಾಷಣ ಮಾಡಬೇಡಿ. ಲಿಖಿತ ವಾದವನ್ನು ತೆಗೆದುಕೊಂಡು ಬನ್ನಿ, ಪರಿಗಣಿಸುತ್ತೇವೆ. ಒಬ್ಬೊಬ್ಬರು ಒಂದು ಭಾಷಣ ಮಾಡಿದರೆ ಆಗದು. ಇದು ಭಾಷಣ ಮಾಡುವ ಸ್ಥಳವಲ್ಲ, ನಮಗೆ ಆತಂಕಗಳಿವೆ, ನಮಗೆ ನಮ್ಮದೇ ಆದ ಮಿತಿಗಳಿವೆ. ಶಕ್ತಿಯುತವಾದ ಬರವಣಿಗೆ ನೀಡಿ. ನಾವು ಪರಿಗಣಿಸುತ್ತೇವೆ. ಮಸೂದೆ ಮಂಡಿಸಬೇಕೆ ಬೇಡವೇ ಎಂಬುದು ಶಾಸಕಾಂಗದ ನಿರ್ಧಾರ. ಘಟನೆಗಳು ನಡೆಯುತ್ತಿರುವ ಬಗ್ಗೆ ನಮಗೆ ಸಮಾಧಾನವಿಲ್ಲ. ಕಾನೂನು ಮಾಡಬೇಕೆ, ಬೇಡವೇ ಎಂಬುದು ಶಾಸಕಾಂಗದ ನಿಲುವು” ಎಂದರು.

ಮುಂದುವರಿದು, “ವಿಶಾಖ ಪ್ರಕರಣದ ಕುರಿತು ಬಸವರಾಜು ಅವರು ನಮ್ಮ ಗಮನಸೆಳೆದಿದ್ದಾರೆ. ನಾವು ಅದನ್ನು ಮಾಡಿದರೆ ನ್ಯಾಯಾಂಗ ಕಾನೂನು ರೂಪಿಸುತ್ತಿದೆ ಎನ್ನುತ್ತಾರೆ, ನೀವು (ಶಾಸಕಾಂಗ- ಎಜಿ ಕುರಿತು) ಕಾನೂನು ರೂಪಿಸಿದರೆ ನಾವು ಕಾನೂನು ರೂಪಿಸುವುದು ಎಲ್ಲಿರುತ್ತದೆ. ಮಸೂದೆಯನ್ನು ಹೊಂದುವುದರಿಂದ ಏನು ಪ್ರಯೋಜನ. ಅದನ್ನು ಪಾನಿಪುರಿಗೆ (ಕಟ್ಟಲು) ಮಾತ್ರ ಬಳಕೆ ಮಾಡಲಾಗುತ್ತದೆ. ಅದನ್ನು ನಿರ್ದಿಷ್ಟ ಸ್ಥಳದಲ್ಲಿಟ್ಟು ಅನುಮೋದನೆ ನೀಡದಿದ್ದರೆ ಅದು ಮುದ್ರಿತ ಹಾಳೆಯಾಗಿರಲಿದೆ. 1964ರಿಂದ ನಿಮಗೆ ಎಷ್ಟು ವರ್ಷಬೇಕು. 1964ರಿಂದಲೂ ವಕೀಲರ ರಕ್ಷಣಾ ಮಸೂದೆ ತರಬೇಕು ಎನ್ನಲಾಗುತ್ತಿದೆ” ಎಂದರು.

ಆಗ ಎಜಿ ಅವರು “ರಾಜಸ್ಥಾನ ಮಾತ್ರ ವಕೀಲರ ರಕ್ಷಣಾ ಕಾಯಿದೆ ತಂದಿದೆ” ಎಂದರು.

ಇದಕ್ಕೆ ಅಸಮಾಧಾನಗೊಂಡ ನ್ಯಾ. ದೀಕ್ಷಿತ್ ಅವರು “ನಮ್ಮಿಂದ ಉತ್ತರ ತುಂಬಾ ದೂರದಲ್ಲಿದೆ. ಈ ದೇಶದಲ್ಲಿ ಎಲ್ಲವೂ ದಕ್ಷಿಣದಿಂದ ನಡೆದಿದೆ. ಆದಿ ಭಗವತೇಶ್ವರ, ಬಾಬಾ ಸಾಹೇಬ್‌ ಎಲ್ಲರೂ ದಕ್ಷಿಣದಿಂದ ಬಂದಿದ್ದಾರೆ. ದಕ್ಷಿಣದಿಂದ ಎಲ್ಲವೂ ನಡೆಯಬೇಕು. ಅದು ಉಲ್ಟಾ ಆಗಬಾರದು” ಎಂದರು.

ಈ ನಡುವೆ, ವಿವೇಕ್‌ ಸುಬ್ಬಾರೆಡ್ಡಿ ಅವರು “ಕಳೆದ ಬಾರಿ ವಿಧಾನಸಭೆ ಅಂತ್ಯವಾಗುವ ಒಂದು ದಿನ ಮುಂಚೆ ವಕೀಲರ ರಕ್ಷಣಾ ಮಸೂದೆ ಮಂಡಿಸಲಾಯಿತು. ವಿಧಾನಸಭೆ ಅಂತ್ಯವಾಯಿತು” ಎಂದರು.

ಅಂತಿಮವಾಗಿ ಪೀಠವು ತುರ್ತು ಮತ್ತು ಸೂಕ್ತ ಕ್ರಮಕೈಗೊಳ್ಳುವ ಮೂಲಕ ಅರ್ಜಿಯನ್ನು ಅಮಾನ್ಯವಾಗುವಂತೆ ಮಾಡಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿತು.

Related Stories

No stories found.
Kannada Bar & Bench
kannada.barandbench.com