Supreme Court of India 
ಸುದ್ದಿಗಳು

ವಿದೇಶಿಯರಿಗೆ ಪೌರತ್ವ ನೀಡಲೆಂದು ಪೌರತ್ವ ಕಾಯಿದೆಯನ್ನು ಉದಾರವಾಗಿ ಅರ್ಥೈಸಲಾಗದು: ಸುಪ್ರೀಂ ಕೋರ್ಟ್

ಈ ಹಿಂದೆ ಭಾರತೀಯರಾಗಿದ್ದ ಪೋಷಕರು ನಂತರ ತಮ್ಮ ಭಾರತೀಯ ಪೌರತ್ವ ತೊರೆದಿದ್ದರೂ ಅವರಿಗೆ ಹುಟ್ಟಲಿರುವ ಮಗು ಭಾರತೀಯ ಪೌರತ್ವ ಪಡೆಯಬಹುದು ಎಂದಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪೀಠ ಬದಿಗೆ ಸರಿಸಿದೆ.

Bar & Bench

ವಿದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವವನ್ನು ನೀಡುವಾಗ 1955ರ ಪೌರತ್ವ ಕಾಯಿದೆಯನ್ನು ಉದಾರವಾಗಿ ವ್ಯಾಖ್ಯಾನಿಸಲು ಯಾವುದೇ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಭಾರತದ ಒಕ್ಕೂಟ ಮತ್ತು ಪ್ರಣವ್ ಶ್ರೀನಿವಾಸನ್ ನಡುವಣ ಪ್ರಕರಣ] .

ಪೌರತ್ವವನ್ನು ಬಯಸುವ ವ್ಯಕ್ತಿಗಳಿಗೆ ಸಮಾನ ಪರಿಗಣನೆಗೆ ಅವಕಾಶ ಕಲ್ಪಿಸಲೆಂದು ಕಾನೂನಿಗೆ ಧಕ್ಕೆ ತರಲಾಗದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿದೆ.

"1955 ರ ಕಾಯಿದೆಯ ನಿಬಂಧನೆಗಳಲ್ಲಿ ಬಳಸಲಾದ ಭಾಷೆ ನೇರವೂ, ಸರಳವೂ ಆಗಿದೆ. ಆದ್ದರಿಂದ, ಅದೇ ಸಾಮಾನ್ಯ ಮತ್ತು ಸ್ವಾಭಾವಿಕ ಅರ್ಥ ನೀಡಬೇಕು. ಮೇಲಾಗಿ, ನಾವು ವಿದೇಶಿ ಪ್ರಜೆಗಳಿಗೆ ಭಾರತದ ಪೌರತ್ವವನ್ನು ಒದಗಿಸುವ ಕಾನೂನಿನೊಂದಿಗೆ ವ್ಯವಹರಿಸುತ್ತಿದ್ದು. ಅಂತಹ ಕಾಯಿದೆ ಅರ್ಥೈಸುವಾಗ ಸಮಾನವಾದ ಪರಿಗಣನೆಗೆ ಯಾವುದೇ ಅವಕಾಶ ಇಲ್ಲ" ಎಂದು ಅದು ಹೇಳಿದೆ.

ಕಾಯಿದೆಯ ಸೆಕ್ಷನ್ 5, 8 ಮತ್ತು 9ರ ಭಾಷೆ ನೇರವೂ, ಸರಳವೂ ಇದ್ದು, ಉದಾರವಾದ ವ್ಯಾಖ್ಯಾನಕ್ಕೆ ಯಾವುದೇ ಅವಕಾಶವಿಲ್ಲ. ಕಾಯಿದೆಯ ಸರಳ ಭಾಷೆಗೆ ಧಕ್ಕೆ ತರುವ ಮೂಲಕ ವಿದೇಶಿ ನಾಗರಿಕರಿಗೆ ಭಾರತದ ಪೌರತ್ವವನ್ನು ನೀಡಲಾಗುವುದಿಲ್ಲ ಎಂದು ಅದು ಹೇಳಿದೆ.

ಈ ಹಿಂದೆ ಭಾರತೀಯರಾಗಿದ್ದ ಪೋಷಕರು ನಂತರ ತಮ್ಮ ಭಾರತೀಯ ಪೌರತ್ವ ತೊರೆದಿದ್ದರೂ ಅವರಿಗೆ ಹುಟ್ಟಲಿರುವ ಮಗು ಭಾರತೀಯ ಪೌರತ್ವ ಪಡೆಯಬಹುದು ಎಂದಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ಬದಿಗೆ ಸರಿಸಿದ ಪೀಠ ಈ ಆದೇಶ ನೀಡಿತು.

ಭಾರತೀಯ ಪೌರತ್ವ ಕೋರಿ ಪ್ರಣವ್ ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ಪುರಸ್ಕರಿಸಿದ್ದರು. ತಮ್ಮ ಮನವಿಯನ್ನು ತಿರಸ್ಕರಿಸಿದ 2019 ರ ಕೇಂದ್ರ ಗೃಹ ಸಚಿವಾಲಯದ ಆದೇಶ ರದ್ದತಿ ಕೋರಿ ಶ್ರೀನಿವಾಸನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾರತೀಯ ನಾಗರಿಕರಾಗಿದ್ದ ಶ್ರೀನಿವಾಸನ್‌ ಅವರ ಪೋಷಕರು ಡಿಸೆಂಬರ್ 1998ರಲ್ಲಿ ತಮ್ಮ ಪೌರತ್ವ ತ್ಯಜಿಸಿ ಸಿಂಗಪೋರ್‌ ಪ್ರಜೆಗಳಾದರು. ಅಲ್ಲಿಯೇ ಜನಿಸಿದ ಪ್ರಣವ್‌ ಹುಟ್ಟಿನಿಂದ ಸಿಂಗಪೋರ್‌ ಪ್ರಜೆಯಾದರು. ಪ್ರೌಢಾವಸ್ಥೆಗೆ ಬಂದ ಬಳಿಕ ಅವರು ಪೌರತ್ವ ಕಾಯಿದೆಯ ಸೆಕ್ಷನ್ 8(2) ರ ಅಡಿಯಲ್ಲಿ ತಮಗೆ ಭಾರತೀಯ ಪೌರತ್ವ ನೀಡಬೇಕೆಂದು ಕೋರಿದರು.

1955 ರ ಕಾಯಿದೆಯ ಸೆಕ್ಷನ್ 8 (2) ರ ಅಡಿಯಲ್ಲಿ ಪ್ರಣವ್ ಪೌರತ್ವವನ್ನು ಪುನರಾರಂಭಿಸಲು ಅರ್ಹರಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿತ್ತು. ಕಾಯಿದೆಯ ಸೆಕ್ಷನ್ 5 ರ ಉಪ-ವಿಭಾಗ (1) ರ ಷರತ್ತು (ಎಫ್) ಅಥವಾ ಷರತ್ತು (ಜಿ) ಅಡಿಯಲ್ಲಿ ಪುನಃ ಅರ್ಜಿ ಸಲ್ಲಿಸಲು ಪ್ರಣವ್‌ಗೆ ಸಲಹೆ ನೀಡಲಾಯಿತು.

ಈ ಆದೇಶವನ್ನು ಪ್ರಶ್ನಿಸಿ ಪ್ರಣವ್ ಅವರು ಮದ್ರಾಸ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿತು. ಮತ್ತು ಕಾಯಿದೆಯ ಸೆಕ್ಷನ್ 8 (2) ರ ಅಡಿಯಲ್ಲಿ ಪ್ರಣವ್ ತನ್ನ ಭಾರತೀಯ ಪೌರತ್ವ ಪಡೆಯಲು ಅರ್ಹರು ಎಂದು ಹೇಳಿತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಸಂವಿಧಾನದ 8ನೇ ವಿಧಿಯನ್ನು (ಭಾರತದ ಹೊರಗೆ ವಾಸಿಸುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ಪೌರತ್ವದ ಹಕ್ಕುಗಳು) ಅರ್ಜಿದಾರರು ಅವಲಂಬಿಸುವಂತಿಲ್ಲ ಎಂದು ಹೇಳಿದೆ. ಹೈಕೋರ್ಟ್‌ನ ತರ್ಕ ಸರಿಯಲ್ಲ ಎಂದಿದೆ.

ಆದರೂ, ಅರ್ಜಿದಾರರು ಕಾಯಿದೆಯ ಉಪ ಸೆಕ್ಷನ್‌ (1) ರ ಷರತ್ತು (ಎಫ್) ಅಡಿಯಲ್ಲಿ ಸಡಿಲಿಕೆ ಮಾಡುವಂತೆ ಕೋರಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.