CJI BR Gavai 
ಸುದ್ದಿಗಳು

ಮಹಾಭಿಯೋಗಕ್ಕೆ ಇರುವ ಕಠಿಣ ನಿರ್ಬಂಧ ಸಮರ್ಥಿಸಿಕೊಂಡ ಸಿಜೆಐ ಬಿ ಆರ್ ಗವಾಯಿ

ನ್ಯಾಯಾಂಗ ಸ್ವಾತಂತ್ರ್ಯ ರಕ್ಷಿಸಲು ಇಂತಹ ಸುರಕ್ಷತಾ ಕ್ರಮಗಳು ಅಗತ್ಯ ಎಂದು ಅವರು ಹೇಳಿದರು.

Bar & Bench

ಭಾರತದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ (ವಾಗ್ದಂಡನೆ) ಇರುವ ಕಠಿಣ ನಿರ್ಬಂಧವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮಂಗಳವಾರ ಸಮರ್ಥಿಸಿಕೊಂಡರು. ನ್ಯಾಯಾಂಗ ಸ್ವಾತಂತ್ರ್ಯ ರಕ್ಷಿಸಲು ಇಂತಹ ಸುರಕ್ಷತಾ ಕ್ರಮಗಳು ಅಗತ್ಯ ಎಂದು ಅವರು ಹೇಳಿದರು.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಒಂದೆಡೆ ರಾಜಕೀಯ ಹಸ್ತಕ್ಷೇಪ ವಿರೋಧಿಸುತ್ತೇವೆ. ಮತ್ತೊಂದೆಡೆ ನ್ಯಾಯಮೂರ್ತಿಗಳನ್ನು ತೆಗೆದುಹಾಕಲು ಸುಲಭವಾದ ಮಾರ್ಗ ಹಾಕಿಕೊಟ್ಟರೆ ಕಾನೂನಾತ್ಮಕ ಆಡಳಿತದ ಬುನಾದಿಯಾದ ನ್ಯಾಯಾಂಗ ಸ್ವಾತಂತ್ಯ ನೇಪಥ್ಯಕ್ಕೆ ಸರಿಯಬಹುದು. ನ್ಯಾಯಾಧೀಶರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವ ರಕ್ಷಣೆ ಇದು” ಎಂದು ಸಮರ್ಥಿಸಿಕೊಂಡರು.

ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ಶರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ಮನೆಯಲ್ಲಿ ನಗದು ರಾಶಿ ಪತ್ತೆಯಾದ ಪ್ರಕರಣ ಉಲ್ಲೇಖಿಸಿದ ವಿದ್ಯಾರ್ಥಿಯೊಬ್ಬರು ಹಿಂದಿನ ಸಿಜೆಐ ಸಂಜೀವ್‌ ಖನ್ನಾ ಅವರಿಗಿಂತಲೂ ಭಿನ್ನವಾಗಿ ತನಿಖೆ ನಡೆಸುತ್ತಿರುವಿರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಆ ವಿದ್ಯಾರ್ಥಿ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸದಂತೆ ಇರುವ ಮಹಾ ನಿರ್ಬಂಧ ನ್ಯಾಯಯುತ ಎನಿಸುತ್ತಿದೆಯೇ ಎಂದು ಪ್ರಶ್ನಿಸಿದರು.

ಆಗ ಪ್ರಕರಣದ ಕುರಿತು ಮಾತನಾಡುವುದಿಲ್ಲ ಎಂದ ಸಿಜೆಐ ಗವಾಯಿ ಅವರು ಎರಡನೇ ಅಂಶದ ಕುರಿತು ಹೆಚ್ಚಿನ ನಿರ್ಬಂಧ ಅಗತ್ಯ ಎಂದರು.

ವರದಿಗಳ ಪ್ರಕಾರ , ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ವರ್ಮಾ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ  ಪ್ರಾರಂಭಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.