ಭಾರತದಲ್ಲಿ ನ್ಯಾಯಾಂಗವು ಅಗಾಧ ಸ್ವಾತಂತ್ರ್ಯ ಹೊಂದಿದ್ದು ಬಜೆಟ್ ಮತ್ತು ನ್ಯಾಯಾಲಯಗಳ ಮೂಲಸೌಕರ್ಯ ವಿಚಾರದಲ್ಲಿ ಮಾತ್ರ ಅದು ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಮುಂಬೈನ ತಾಜ್ ಲ್ಯಾಂಡ್ ಎಂಡ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬಾಂಬೆ ಹೈಕೋರ್ಟ್ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರಿಗೆ ಆಧುನಿಕ ಮೂಲ ಸೌಕರ್ಯ ಒದಗಿಸುವ ಹಿತಾಸಕ್ತಿಯ ವಿಚಾರದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ಸಹಯೋಗ ಇರುತ್ತದೆ ಎಂದು ಅವರು ಒತ್ತಿ ಹೇಳಿದರು.
"ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ಅಗಾಧ ಸ್ವಾತಂತ್ರ್ಯದ ಮನೋಭಾವದೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಬಜೆಟ್ ಮತ್ತು ಮೂಲ ಸೌಕರ್ಯದ ವಿಚಾರದಲ್ಲಿ ನಾವು ಸರ್ಕಾರದ ಜೊತೆ ಇರಲಿದ್ದು ಇವು ನ್ಯಾಯಾಧೀಶರ ಪಾಲಿನ ಖಾಸಗಿ ಯೋಜನೆಗಳಲ್ಲ" ಎಂದು ಅವರು ಹೇಳಿದರು.
ಈಚೆಗೆ ಸಿಜೆಐ ಅವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಪೂಜೆಯಲ್ಲಿ ಪಾಲ್ಗೊಂಡ ವಿಚಾರ ವ್ಯಾಪಕ ಚರ್ಚೆ, ಟೀಕೆಗೆ ಗ್ರಾಸವಾದ ಬೆನ್ನಿಗೇ ಸಿಜೆಐ ಅವರು ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಹೈಕೋರ್ಟ್ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೂ ಈಗ ಅದು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡ ನ್ಯಾಯಾಂಗದಲ್ಲೇ ಉಳಿಯಬೇಕು ಎಂದು ಆಶಿಸಿದರು.
ಹೊಸ ಕಟ್ಟಡದ ಕಾಮಗಾರಿ ಆರಂಭಿಸುವಲ್ಲಿ 20 ವರ್ಷಗಳಷ್ಟು ವಿಳಂಬವಾಗಿದೆ ಎಂದು ಕೂಡ ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಉಜ್ಜಲ್ ಭುಯಾನ್, ದೀಪಂಕರ್ ದತ್ತಾ, ಪ್ರಸನ್ನ ಬಿ ವರಾಳೆ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ಅಜಿತ್ ಪವಾರ್ , ದೇವೇಂದ್ರ ಫಡ್ನವಿಸ್ ಹಾಗೂ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.