ಸುದ್ದಿಗಳು

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಊಹಾಪೋಹಗಳಿಗೆ ತೆರೆ ಎಳೆದ ಕೊಲಿಜಿಯಂ: ಶಿಫಾರಸು ಪಟ್ಟಿ ಪ್ರಕಟ

ಕೊಲಿಜಿಯಂ ಅಧಿಕೃತವಾಗಿ ಹೆಸರುಗಳನ್ನು ಪ್ರಕಟಿಸುವ ಮುನ್ನವೇ ಮಾಧ್ಯಮಗಳು ಹೆಸರು ಬಹಿರಂಗಪಡಿಸಿದ್ದಕ್ಕೆ ಸಿಜೆಐ ಎನ್ ವಿ ರಮಣ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು.

Bar & Bench

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ಶಿಫಾರಸು ಮಾಡಿದ ಒಂಬತ್ತು ಮಂದಿಯ ಹೆಸರನ್ನು ಪ್ರಕಟಿಸುವ ಮೂಲಕ ಮಂಗಳವಾರ ಬೆಳಿಗ್ಗೆಯಿಂದ ಎದ್ದಿದ್ದ ಊಹಾಪೋಹಗಳಿಗೆ ಸುಪ್ರೀಂಕೋರ್ಟ್‌ ಇತಿಶ್ರೀ ಹಾಡಿದೆ.

ನ್ಯಾಯಮೂರ್ತಿಗಳಾದ ಎಎಸ್ ಓಕಾ, ವಿಕ್ರಮ್ ನಾಥ್, ಜೆಕೆ ಮಹೇಶ್ವರಿ, ಹಿಮ ಕೊಹ್ಲಿ, ಬಿವಿ ನಾಗರತ್ನ, ಸಿಟಿ ರವಿಕುಮಾರ್, ಎಂಎಂ ಸುಂದ್ರೇಶ್, ಬೇಲಾ ತ್ರಿವೇದಿ ಮತ್ತು ಹಿರಿಯ ವಕೀಲ ಪಿ ಎಸ್ ನರಸಿಂಹ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಶಿಫಾರಸುಗೊಂಡ ನ್ಯಾಯಮೂರ್ತಿಗಳಲ್ಲಿ ಹಿಮಾ ಕೊಹ್ಲಿ, ಬಿವಿ ನಾಗರತ್ನ ಮತ್ತು ಬೇಲಾ ತ್ರಿವೇದಿ ಮಹಿಳೆಯರಾಗಿದ್ದು ಪಿ ಎಸ್‌ ನರಸಿಂಹ ವಕೀಲ ವರ್ಗದಿಂದ ಆಯ್ಕೆಯಾಗಿದ್ದಾರೆ. ನರಸಿಂಹ ಅವರ ಹೆಸರನ್ನು ಕೇಂದ್ರ ಸರ್ಕಾರ ಅನುಮೋದಿಸಿದರೆ, ಅವರು ವಕೀಲವರ್ಗದಿಂದ ಸುಪ್ರೀಂ ಕೋರ್ಟ್‌ಗೆ ನೇರವಾಗಿ ನೇಮಕಗೊಳ್ಳಲಿರುವ 9ನೇ ನ್ಯಾಯವಾದಿ ಎನಿಸಿಕೊಳ್ಳಲಿದ್ದಾರೆ.

ಕೊಲಿಜಿಯಂ ಸಭೆಯ ನಿರ್ಣಯಗಳನ್ನು ಕೊಲಿಜಿಯಂ ನ್ಯಾಯಾಧೀಶರು ಸಹಿ ಮಾಡುವ ಮೊದಲೇ ಇಂದು ಬೆಳಿಗ್ಗೆ ವಿವಿಧ ಮಾಧ್ಯಮಗಗಳು ಪ್ರಕಟಿಸಿದ್ದವು. ಆ ಮೂಲಕ ಕೊಲಿಜಿಯಂ ಶಿಫಾರಸು ಮಾಡಲು ಉದ್ದೇಶಿಸಿದ್ದ ಒಂಬತ್ತು ವ್ಯಕ್ತಿಗಳ ಹೆಸರು ಬಯಲಾಗಿತ್ತು.

ಅದಾದ ಕೆಲ ಗಂಟೆಗಳಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಶಿಫಾರಸು ಮಾಡುವ ಪ್ರಕ್ರಿಯೆ ಇನ್ನೂ ಅಂತಿಮವಾಗಿರದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಕಟಿಸಿದ ʼಊಹಾತ್ಮಕʼ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೈಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವಂತಹ ಸುದ್ದಿ ಪ್ರಕಟಿಸುವಾಗ ಸಂಯಮದಿಂದಿರಿ ಎಂದು ಅವರು ಮಾಧ್ಯಮಗಳನ್ನು ಒತ್ತಾಯಿಸಿದ್ದರು.