Delhi High Court, Deepfake 
ಸುದ್ದಿಗಳು

ಡೀಪ್‌ಫೇಕ್‌ ಕುರಿತಾದ ಸವಾಲುಗಳ ಪರಿಶೀಲನೆಗಾಗಿ ಸಮಿತಿ ರಚನೆ: ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ

ಡೀಪ್‌ಫೇಕ್‌ ತಂತ್ರಜ್ಞಾನದ ದುರುಪಯೋಗ ತಡೆಯಲು ಯಾವ ಕ್ರಮ ಕೈಗೊಳ್ಳಲಿದೆ ಎಂದು ನ್ಯಾಯಾಲಯ ಈ ಹಿಂದೆ ಕೇಂದ್ರ ಸರ್ಕಾರವನ್ನು ಕೇಳಿತ್ತು.

Bar & Bench

ಡೀಪ್‌ಫೇಕ್‌ ಕುರಿತಾದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹಾಗೂ ಆ ತಂತ್ರಜ್ಞಾನದ ದುರ್ಬಳಕೆ ತಡೆಯಲು ಸಮಿತಿಯನ್ನು ರಚಿಸಲು ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬೆಳವಣಿಗೆಯನ್ನು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠಕ್ಕೆ ಗುರುವಾರ ತಿಳಿಸಿದೆ.  ಬುಧವಾರ ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಒಂದು ವಾರದೊಳಗೆ ಸಮಿತಿಯ ಸದಸ್ಯರ ಹೆಸರು ಸೂಚಿಸುವಂತೆ ನ್ಯಾಯಾಲಯ ಇದೇ ವೇಳೆ ತಿಳಿಸಿತು. ಅಂತರ್ಜಾಲ ಮಧ್ಯಸ್ಥಗಾರರು ದೂರಸಂಪರ್ಕ ಸೇವಾ ಪೂರೈಕೆದಾರರು, ಡೀಪ್‌ಫೇಕ್‌ ಸಂತ್ರಸ್ತರು ಹಾಗೂ ಡೀಪ್‌ಫೇಕ್‌ ಬಳಸುವ ಜಾಲತಾಣಗಳು ಸೇರಿದಂತೆ ಎಲ್ಲಾ ಪಾಲುದಾರರ ಅಹವಾಲುಗಳನ್ನು ಆಲಿಸುವಂತೆ ನ್ಯಾಯಾಲಯ ಸಮಿತಿಗೆ ಸೂಚಿಸಿತು.

ಡೀಪ್‌ಫೇಕ್ ದುರುಪಯೋಗವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ನ್ಯಾಯಾಲಯಕ್ಕೆ ಅರ್ಜಿದಾರರು ನೀಡಿದ ಸಲಹೆಗಳನ್ನು ಪರಿಗಣಿಸಬೇಕು. ಈ ಪ್ರಕ್ರಿಯೆಗಳ ಬಳಿಕ ಸಂಗ್ರಹಿಸುವ ವರದಿಯನ್ನು ಆದಷ್ಟು ಬೇಗ ಅಂದರೆ ಮೂರು ತಿಂಗಳೊಳಗೆ ಸಲ್ಲಿಸಬೇಕು. ಅಲ್ಲದೆ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಡೀಪ್‌ಫೇಕ್‌ ನಿಗ್ರಹಕ್ಕೆ ತಂದಿರುವ ಕಾನೂನುಗಳನ್ನು ಸಮಿತಿ ಪರಿಗಣಿಸಬೇಕು ಎಂದು ಪೀಠ ಹೇಳಿದೆ.

ಡೀಪ್‌ಫೇಕ್‌ಗಳ ನಿಯಂತ್ರಣಕ್ಕೆ ಒತ್ತಾಯಿಸಿ ಪತ್ರಕರ್ತ ರಜತ್ ಶರ್ಮಾ ಮತ್ತು ವಕೀಲ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಡೀಪ್‌ಫೇಕ್‌ ತಂತ್ರಜ್ಞಾನದ ದುರುಪಯೋಗ ತಡೆಯಲು ಕೇಂದ್ರ ಸರ್ಕಾರ ಯಾವ ಕ್ರಮ  ಕೈಗೊಳ್ಳಲಿದೆ ಎಂದು ನ್ಯಾಯಾಲಯ ಈ ಹಿಂದೆ ಕೇಂದ್ರ ಸರ್ಕಾರವನ್ನು ಕೇಳಿತ್ತು.ಪ್ರಕರಣದ ಮುಂದಿನ ವಿಚಾರಣೆ 2025ರ ಮಾರ್ಚ್ 24ರಂದು ನಡೆಯಲಿದೆ.