'ಹೆಚ್ಚುತ್ತಿರುವ ಡೀಪ್‌ಫೇಕ್‌ ಸಮಸ್ಯೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು?' ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ

ಡೀಪ್‌ಫೇಕ್‌ ದೃಶ್ಯ ರೂಪಿಸಲು ಬಳಸುವ ಕೃತಕ ಬುದ್ಧಿಮತ್ತೆಯ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂದು ನ್ಯಾಯಾಲಯ ಕೇಂದ್ರ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.
Deepfake and Delhi High Court
Deepfake and Delhi High Court
Published on

ವಿನಾಶಕಾರಿ ಡೀಪ್‌ಫೇಕ್‌ ಸಮಸ್ಯೆ ನಿಗ್ರಾಹಿಸಲು ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ [ರಜತ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಡೀಪ್‌ಫೇಕ್‌ಗಳನ್ನು (ನೈಜ ವ್ಯಕ್ತಿಗಳಂತೆಯೇ ಬಿಂಬಿಸಿ ಡಿಜಿಟಲ್‌ ವಿಧಾನದಲ್ಲಿ ತಿರುಚಿದ ವಿಡಿಯೋಗಳು) ಸುಳ್ಳು ಮಾಹಿತಿ ಹರಡಲು ಬಳಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿಗಳಾದ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಆತಂಕ ವ್ಯಕ್ತಪಡಿಸಿತು.

Also Read
ಈಗ ನಾವು ಕಂಡು- ಕೇಳುವುದನ್ನೇ ನಂಬಲಾಗುತ್ತಿಲ್ಲ: ಡೀಪ್‌ಫೇಕ್‌ ನಿಯಂತ್ರಣಕ್ಕೆ ದೆಹಲಿ ಹೈಕೋರ್ಟ್ ಒತ್ತು

ಡೀಪ್‌ಫೇಕ್‌ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದ ನ್ಯಾಯಾಲಯ, ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಪರಿಶೀಲಿಸಲು ಸರ್ಕಾರ ಆಂತರಿಕ ಕಾರ್ಯವಿಧಾನ ಅಥವಾ ಸಮಿತಿ ಸ್ಥಾಪಿಸಿದೆಯೇ? ಇಲ್ಲದಿದ್ದರೆ, ನಾವು ಅದನ್ನು ಪರಿಶೀಲಿಸುವ ಸಮಿತಿ ರಚಿಸುತ್ತೇವೆ ಎಂದು ಎಎಸ್‌ಜಿ ಚೇತನ್‌ ಶರ್ಮಾ ಅವರನ್ನು ಉದ್ದೇಶಿಸಿ ಹೇಳಿತು.

ಸರ್ಕಾರ ರಚಿಸಿರುವ ಸಮಿತಿಯ ಸದಸ್ಯರಿಗೆ ಸಮಸ್ಯೆ ಪರಿಶೀಲಿಸುವ ಸಾಮರ್ಥ್ಯವಿದೆಯೇ ಮತ್ತು ಸಮಿತಿಯ ಕಾರ್ಯಗಳಲ್ಲಿ ಏನು ಪ್ರಗತಿ ಆಗಿದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಅದು ನುಡಿಯಿತು.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಈ ವಿಚಾರವಾಗಿ ಪರಿಶೀಲನೆ ನಡೆಸುತ್ತಿದ್ದು ಸೂಕ್ತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಾಗದಿರಬಹುದು ಎಂದು ಎಎಸ್‌ಜಿ ಹೇಳಿದರು.

ಸಮಿತಿಯ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಆದರೆ ಕ್ರಮ ತೆಗೆದುಕೊಳ್ಳುತ್ತಿದೆಯೇ ಎಂಬ ಮಾಹಿತಿಯನ್ನಷ್ಟೇ ತಾನು ಕೇಳುತ್ತಿರುವುದಾಗಿ  ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿದರು.

Also Read
ಇದು ಡೀಪ್‌ಫೇಕ್‌ ಯುಗ, ಸಂಗಾತಿಯ ವ್ಯಭಿಚಾರದ ಫೋಟೊಗಳು ಸಹ ವಿಚಾರಣೆಯಲ್ಲಿ ಸಾಬೀತಾಗಬೇಕು: ದೆಹಲಿ ಹೈಕೋರ್ಟ್

ಮೂರು ವಾರಗಳಲ್ಲಿ ಈ ಸಂಬಂಧ ಸ್ಥಿತಿಗತಿ ವರದಿ ಸಲ್ಲಿಸುವಂತೆ ಎಎಸ್‌ಜಿಗೆ ನ್ಯಾಯಾಲಯ ಸೂಚಿಸಿದೆ.

ಡೀಪ್‌ಫೇಕ್‌ಗಳ ನಿಯಂತ್ರಣಕ್ಕೆ ಕೋರಿ ಪತ್ರಕರ್ತ ರಜತ್ ಶರ್ಮಾ ಮತ್ತು ವಕೀಲರಾದ ಚೈತನ್ಯ ರೋಹಿಲ್ಲಾ ಅವರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಇಂದು ಆಲಿಸಲಾಯಿತು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 21ರಂದು ನಡೆಯಲಿದೆ.

Kannada Bar & Bench
kannada.barandbench.com