Justice DY Chandrachud 
ಸುದ್ದಿಗಳು

ಜಾತಿ ಅಸಮಾನತೆ ತಡೆಗೆ ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದು ಸಂವಿಧಾನಶಿಲ್ಪಿಗಳಿಗೆ ಗೊತ್ತಿತ್ತು: ನ್ಯಾ. ಚಂದ್ರಚೂಡ್‌

ʼಸಾಂವಿಧಾನಿಕ ಹಕ್ಕು ಮೊಟಕುಗೊಂಡಾಗ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕೆಂಬ ನಿಯಮವಿದೆʼ ಎಂದು ನ್ಯಾ. ಚಂದ್ರಚೂಡ್‌ ಇದೇ ಸಂದರ್ಭದಲ್ಲಿ ವಿವರಿಸಿದರು.

Bar & Bench

ʼಜಾತಿ ಆಧಾರಿತ ಅಸಮಾನತೆಯನ್ನು ಬೇರುಸಹಿತ ಕಿತ್ತುಹಾಕುವ ಸಲುವಾಗಿ, ದೃಢ ಹೆಜ್ಜೆ ಇಡಲು ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದನ್ನು ಸಂವಿಧಾನ ನಿರ್ಮಾತೃಗಳು ಅರಿತಿದ್ದರುʼ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ದಿನದ ಅಂಗವಾಗಿ ಒ ಪಿ ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿಯ ಜಿಂದಾಲ್‌ ಜಾಗತಿಕ ಕಾನೂನು ಶಾಲೆ ಆಯೋಜಿಸಿದ್ದ ವರ್ಚುವಲ್‌ ಸಮಾರಂಭದಲ್ಲಿ ʼಸಾಂವಿಧಾನಿಕತೆ, ಉದಾರ ಪ್ರಜಾಪ್ರಭುತ್ವ ಮತ್ತು ಪ್ರಬುದ್ಧ ನಾಗರಿಕತೆʼ ವಿಷಯವಾಗಿ ಅವರು ಮಾತನಾಡಿದರು.

ಸಂವಿಧಾನ ಕೇವಲ ಗಣ್ಯರ ದಾಖಲೆಯಾಗಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿದ ಅವರು “ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ವಿಚಾರಗಳನ್ನು ಒಳಗೊಂಡಿದ್ದು ಅದರ ಯಶಸ್ಸು ಸಾಮಾನ್ಯ ಜನರು ಅದನ್ನು ಹೇಗೆ ದುಡಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ ಎಂಬುದು ಡಾ. ಅಂಬೇಡ್ಕರ್‌ ಅವರಿಗೆ ತಿಳಿದಿತ್ತು” ಎಂದರು.

“ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ವಿಚಾರಗಳನ್ನು ಒಳಗೊಂಡಿದ್ದು ಅದರ ಯಶಸ್ಸು ಸಾಮಾನ್ಯ ಜನರು ಅದನ್ನು ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಡಾ.ಅಂಬೇಡ್ಕರ್ ಅವರು ತಿಳಿದಿದ್ದರು. ಸಂವಿಧಾನ ಕಣ್ಣುಬಿಡುವ ಮೊದಲೇ ಭಾರತೀಯ ರಾಷ್ಟ್ರೀಯತೆಯ ಆಂದೋಲನ ಸ್ವಯಂ ಪ್ರಜ್ಞಾಪೂರ್ವಕವಾಗಿ ಸಾಂವಿಧಾನಿಕ ಹೋರಾಟವಾಗಿತ್ತು. ರಾಜಕೀಯ ಗುರಿ ಸಾಧಿಸಲು ಅದು ಹಿಂಸಾತ್ಮಕ ಹಾದಿ ತುಳಿಯದಿದ್ದುದು ಇದಕ್ಕೆ ಸಾಕ್ಷಿ” ಎಂದು ಅವರು ಹೇಳಿದರು. ಅಲ್ಲದೆ “ಹಿಂಸಾತ್ಮಕ ದಂಗೆಗಳು ಏಳದಂತೆ ನೋಡಿಕೊಳ್ಳಲು, ಸಾಂವಿಧಾನಿಕ ವಿಧಾನಗಳ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಾನತೆಯ ಸಾಧನೆಗೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ರಾಜ್ಯ ಬದ್ಧವಾಗಿರಬೇಕು” ಎಂದು ಪ್ರತಿಪಾದಿಸಿದರು.

ಸಂವಿಧಾನದ ದೀರ್ಘಕಾಲ ಬಾಳಲು ಮತ್ತು ಉದಾರವಾದಿ ಪ್ರಜಾಪ್ರಭುತ್ವದ ಉಳಿಯಲು ಸಂವಿಧಾನ ನಿರ್ಮಾತೃಗಳು ಶ್ರಮಿಸಿದ್ದಾರೆ. ಹೀಗಾಗಿ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಮುತುವರ್ಜಿ ವಹಿಸುವ ಮೂಲಕ ಸರ್ಕಾರ ತನ್ನ ಕರ್ತವ್ಯವನ್ನು ಪೂರೈಸಬೇಕು. ಪ್ರಜಾಪ್ರಭುತ್ವದಲ್ಲಿ ಜನ ಸಕ್ರಿಯವಾಗಿ ಪಾಲ್ಗೊಳ್ಳಲು ಅಡ್ಡಿಯಾಗುವ ಯಾವುದೇ ಸಾಂಸ್ಥಿಕ ಹಾಗೂ ಸಾಮಾಜಿಕ ಅಡೆತಡೆಗಳನ್ನು ತೊಡೆದುಹಾಕಬೇಕು ಎಂದರು.

ಮತ್ತೊಂದೆಡೆ ಅವರು “ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕುಗಳು ಮೊಟಕುಗೊಂಡ ಪ್ರಕರಣ ಅಥವಾ ವಿವಾದಗಳ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ಕೇವಲ ಅಧಿಕಾರವನ್ನು ಮಾತ್ರವೇ ಹೊಂದಿರದೇ ಮಧ್ರಪ್ರವೇಶಿಸುವ ಆದೇಶವನ್ನೂ ಹೊಂದಿದೆ” ಎಂದು ತಿಳಿಸಿದರು.

“ನಮ್ಮ ಸಂವಿಧಾನ ಸಾಮಾಜಿಕ ಚಳವಳಿಗಳನ್ನು ಸಜ್ಜುಗೊಳಿಸುವ ಸಾಧನವಾಗಿದೆ. ನಮ್ಮ ವೈವಿಧ್ಯತೆ ಮತ್ತು ಬಹುತ್ವ ಸಂಸ್ಕೃತಿಯನ್ನು ಗುರುತಿಸಲು, ಅಂಗೀಕರಿಸಲು ಮತ್ತು ಗೌರವಿಸಲು ಬೇಕಾದ ಒಗ್ಗಟ್ಟಿನ ಶಕ್ತಿಯನ್ನು ಇದು ಒದಗಿಸುತ್ತದೆ. ಇದೊಂದು ಪ್ರಬಲ ನೈತಿಕ ದಾಖಲೆಯಾಗಿದೆ. ನಾಗರಿಕರ ಆಂದೋಲನಕ್ಕೆ ಪ್ರೇರಣೆ ನೀಡುವ ಸಂವಿಧಾನದ ಸಾಮರ್ಥ್ಯ ಅನನ್ಯವಾಗಿದೆ” ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ “ಸಂವಿಧಾನ ಕೇವಲ ವಕೀಲರು ಮತ್ತು ನ್ಯಾಯಾಧೀಶರಿಗೆ ಸೇರಿಲ್ಲ” ಎಂದ ಅವರು” ಸಂವಿಧಾನದ ಪ್ರಸ್ತಾವನೆಗೆ ಕಾನೂನಿನ ಚೌಕಟ್ಟುಗಳಿಲ್ಲದಿದ್ದರೂ ಅದು ಎಲ್ಲಕ್ಕಿಂತ ಮುಖ್ಯವಾದ ಉದ್ದೇಶಗಳನ್ನು ನಿಭಾಯಿಸುತ್ತದೆ. ಅವುಗಳೆಂದರೆ ನಮ್ಮ ಸಾಂವಿಧಾನಿಕ ಪ್ರಜ್ಞೆಯಲ್ಲಿ ಅಡಕವಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ. ನಾವು ಸಂವಿಧಾನದ ಪ್ರಸ್ತಾವನೆಯ ಅಂಶಗಳನ್ನು (ಪ್ರಿಯಾಂಬಲ್) ದಾರಿ ತೋರುವ ಬೆಳಕಾಗಿ ನೋಡಿದಾಗ, ಹಾಗೆಯೇ ಅದರ ಭರವಸೆಗಳನ್ನು ಜೀವಂತವಾಗಿರಿಸಿಕೊಂಡಾಗ ನಮ್ಮ ದೇಶ ಸಾಂವಿಧಾನಿಕ, ಉದಾರವಾದಿ ಹಾಗೂ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಯುತ್ತದೆ” ಎಂದರು.

ಪ್ರಸಿದ್ಧ ಕಾನೂನು ವಿದ್ವಾಂಸ, ಪ್ರಾಧ್ಯಾಫಕ ಡಾ. ಉಪೇಂದ್ರ ಬಕ್ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿಯ ಸಂಸ್ಥಾಪಕ ಉಪಕುಲಪತಿ ಸಿ ರಾಜಕುಮಾರ್‌, ಹಿರಿಯ ಹೆಚ್ಚುವರಿ ರೆಜಿಸ್ಟ್ರಾರ್‌ ಡಾ ಉಪಾಸನಾ ಮಹಾಂತ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.