MakeMyTrip and GoFirst 
ಸುದ್ದಿಗಳು

ಥಾಯ್ಲೆಂಡ್ ಪ್ರವಾಸಕ್ಕೆ ತೊಡಕು: ಮೇಕ್ ಮೈ ಟ್ರಿಪ್ ಹಾಗೂ ಗೋ ಫಸ್ಟ್‌ಗೆ ದಂಡ ವಿಧಿಸಿದ ಗ್ರಾಹಕರ ವೇದಿಕೆ

ಗ್ರಾಹಕ ರಕ್ಷಣೆ (ಇ-ವಾಣಿಜ್ಯ) ನಿಯಮಾವಳಿ- 2020 ರ ಪ್ರಕಾರ ಮೇಕ್ ಮೈ ಟ್ರಿಪ್‌ ಇಲ್ಲವೇ ಗೋ ಫಸ್ಟ್ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ವೇದಿಕೆ ತಿಳಿಸಿತು.

Bar & Bench

ಪದೇ ಪದೇ ವಿಮಾನ ರದ್ದಾದ ಪರಿಣಾಮ ತಮ್ಮ ಯೋಜಿತ ರಜೆಯ ಭಾಗವಾಗಿ ಥಾಯ್ಲೆಂಡ್‌ಗೆ ತೆರಳುವ ಅವಕಾಶದಿಂದ ಕುಟುಂಬವೊಂದು ವಂಚಿತವಾದ ಹಿನ್ನೆಲೆಯಲ್ಲಿ ಆನ್‌ಲೈನ್‌ ಪ್ರಯಾಣ ಬುಕಿಂಗ್‌ ದೈತ್ಯ ಸಂಸ್ಥೆ  ಮೇಕ್‌ ಮೈ ಟ್ರಿಪ್‌ ಮತ್ತು ವಿಮಾನಯಾನ ಸಂಸ್ಥೆ ಗೋ ಫಸ್ಟ್‌ಗೆ ಚಂಡೀಗಢದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹19,000 ದಂಡ ವಿಧಿಸಿದೆ  [ಅಮೀರ್ ಕೊಹರ್ ಮತ್ತು ಮೇಕ್‌ಮೈಟ್ರಿಪ್ ಇನ್ನಿತರರ ನಡುವಣ ಪ್ರಕರಣ]

ಗ್ರಾಹಕ ರಕ್ಷಣೆ (ಇ-ವಾಣಿಜ್ಯ) ನಿಯಮಾವಳಿ- 2020 ರ ಪ್ರಕಾರ ಮೇಕ್‌ ಮೈ ಟ್ರಿಪ್ ಅಥವಾ ಗೋ ಫಸ್ಟ್ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಅಧ್ಯಕ್ಷ ಪವನ್‌ಜೀತ್‌ ಸಿಂಗ್‌ ಮತ್ತು ಸದಸ್ಯರಾದ ಸುರ್ಜೀತ್ ಕೌರ್, ಸುರೇಶ್ ಕುಮಾರ್ ಸರ್ಡಾನಾ ಅವರಿದ್ದ ಪೀಠ ತಿಳಿಸಿತು. 

ಎರಡೂ ಸಂಸ್ಥೆಗಳು ಬೇರೆ ಬೇರೆ ಸೇವೆ ಒದಗಿಸುತ್ತಿದ್ದರೂ ಅವೆರಡೂ ಗ್ರಾಹಕರಿಗೇ ಸೇವೆ ಒದಗಿಸುವ ಕರ್ತವ್ಯ ನಿರ್ವಹಿಸುತ್ತಿರುವಾಗ ಅವು ಗ್ರಾಹಕ ರಕ್ಷಣೆ (ಇ-ವಾಣಿಜ್ಯ) ನಿಯಮಾವಳಿ- 2020ರ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ವಿವರಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಚಂಡೀಗಢದ ನಿವಾಸಿಯೊಬ್ಬರ ಥಾಯ್ಲೆಂಡ್‌ ಯಾತ್ರೆಗೆ ಮುಂದಾಗಿದ್ದರು. ಗೋ ಫಸ್ಟ್‌ ಕಂಪೆನಿಯ ವಿಮಾನದಲ್ಲಿ ತೆರಳಲು ಅವರು ಮೇಕ್‌ ಮೈ ಟ್ರಿಪ್‌ ಮೂಲಕ ಟಿಕೇಟ್‌ ಖರೀದಿಸಿದ್ದರು. ಅದರೆ ಅವರು ಹೊರಡುವ ಕೆಲವೇ ವಾರಗಳ ಮೊದಲು ಕಾರ್ಯಾಚರಣೆಯ ಕಾರಣಗಳಿಗಾಗಿ ವಿಮಾನ ಯಾನ ರದ್ದಾಗಿದೆ ಎಂದು ದೂರುದಾರರಿಗೆ ಗೋ ಫಸ್ಟ್‌ ತಿಳಿಸಿತು. ಏಪ್ರಿಲ್ 1 ರಂದು ಮಾತ್ರವಲ್ಲದೆ ಮರುದಿನವೂ ಅವರ ವಿಮಾನಯಾನ ಮತ್ತೊಮ್ಮೆ ರದ್ದಾಯಿತು. ಪರಿಣಾಮ ಕಾಬ್ರಿಯಲ್ಲಿ ಮತ್ತು ಫುಕೆಟ್‌ನಲ್ಲಿ ಹೋಟೆಲ್‌ ವಾಸ್ತವ್ಯಕ್ಕಾಗಿ ಅವರು ಮಾಡಿಕೊಂಡಿದ್ದ ಬುಕಿಂಗ್‌ ರದ್ದಾಯಿತು. ವಿಮಾನ ರದ್ದಾದ್ದರಿಂದ ಹೋಟೆಲ್‌ ವಾಸ್ತವ್ಯಕ್ಕೆ ವಿನಿಯೋಗಿಸಿದ ಹಣವೂ ನಷ್ಟವಾಗಿತ್ತು. ತಾವು ಎದುರಿಸಿದ ಅನಾನುಕೂಲತೆ ಮತ್ತು ಆರ್ಥಿಕ ನಷ್ಟಕ್ಕೆ ಮೇಕ್‌ ಮೈ ಟ್ರಿಪ್‌ ಮತ್ತು ಗೋ ಫಸ್ಟ್ ಎರಡೂ ಕಾರಣವೆಂದು ದೂರುದಾರರು ವಾದಿಸಿದರು.

ದೂರಿಗೆ ಪ್ರತಿಕ್ರಿಯಿಸಿದ ಮೇಕ್‌ ಮೈ ಟ್ರಿಪ್‌ ತಾನು ಕೇವಲ ಮಧ್ಯಸ್ಥ ಕಂಪೆನಿ. ಗೋ ಫಸ್ಟ್‌ನಿಂದ ಉಂಟಾದ ಅಡಚಣೆಗಳಿಗೆ ತಾನು ಹೊಣೆಯಲ್ಲ. ಕಂಪೆನಿ ಕೇವಲ ಬುಕಿಂಗ್‌ ಪ್ರಕ್ರಿಯೆ ಸುಗಮಗೊಳಿಸುತ್ತದೆ. ತನಗೆ ವಿಮಾನಯಾನ ಕಾರ್ಯಾಚರಣೆ ಮತ್ತು ಮರುಪಾವತಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣ ಇಲ್ಲ ಎಂದಿತು.

ಮತ್ತೊಂದೆಡೆ ಗೋ ಫಸ್ಟ್‌ ವಿಚಾರಣೆಗೆ ಹಾಜರಾಗದಿದ್ದುದರಿಂದ ಅವರ ವಿರುದ್ಧ ಏಕಪಕ್ಷೀಯವಾಗಿ ಪ್ರಕರಣ ಮುನ್ನಡೆಸಿದ ನ್ಯಾಯಾಲಯ ಎರಡೂ ಸಂಸ್ಥೆಗಳು ದೂರುದಾರರ ಪ್ರಯಾಣದ ಯೋಜನೆಗಳಿಗೆ ಅಡ್ಡಿ ಉಂಟುಮಾಡಿದ್ದಕ್ಕೆ ಹೊಣೆಗಾರರು ಎಂದು ಹೇಳಿತು.

ಅದರಂತೆ, ದೂರುದಾರರಿಗೆ ಮೇಕ್‌ಮೈಟ್ರಿಪ್ ಮತ್ತು ಗೋ ಫಸ್ಟ್‌ ಜಂಟಿಯಾಗಿ ₹8,900 ಮರುಪಾವತಿ ಮಾಡಬೇಕು ಎಂದಿತು. ಇದರಲ್ಲಿ ಫುಕೆಟ್‌ನಲ್ಲಿ ಹೋಟಲ್‌ ಬುಕಿಂಗ್‌ ಮಾಡಿದ್ದಕ್ಕೆ ₹6,384 ಮತ್ತು ಕ್ರಾಬಿಯಲ್ಲಿ ವಾಸ್ತವ್ಯವನ್ನು  ₹2,516 ಸೇರಿದೆ ಎಂದಿತು. ಅಲ್ಲದೆ ಗ್ರಾಹಕರಿಗೆ ಉಂಟಾದ ಮಾನಸಿಕ ಸಂಕಟ ಮತ್ತು ದಾವೆ ವೆಚ್ಚವಾಗಿ ₹ 10,000 ಪಾವತಿಸಲು ಆದೇಶಿಸಲಾಯಿತು.