ಸೃಷ್ಟಿಶೀಲ ಕೃತಕ ಬುದ್ಧಿಮತ್ತೆ (ಜನರೇಟಿವ್ ಎಐ) ಬಳಕೆಯಿಂದ ಉಂಟಾಗುವ ಕಾನೂನು ಸವಾಲು ಪರಿಹರಿಸಲು 1957ರ ಹಕ್ಕುಸ್ವಾಮ್ಯ ಕಾಯಿದೆಯನ್ನು ಪರಿಶೀಲನೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು, ಕೃತಿಸ್ವಾಮ್ಯ ಕಾಯಿದೆ ಮೇಲೆ ಸೃಷ್ಟಿಶೀಲ ಎಐ ಉಂಟು ಮಾಡುತ್ತಿರುವ ಪರಿಣಾಮ ಅಧ್ಯಯನ ಮಾಡಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಎಂಟು ತಜ್ಞ ಸದಸ್ಯರ ಸಮಿತಿ ರಚಿಸಿದೆ ಎಂದು ಹೇಳಿದರು.
ಎಐ ವ್ಯವಸ್ಥೆಗಳ ತರಬೇತಿಯಲ್ಲಿ ಕಾಪಿರೈಟ್ ಹೊಂದಿರುವ ವಿಷಯಗಳ ಬಳಕೆಯ ಮೇಲೆ ಕೇಂದ್ರೀಕರಿಸಿದ ಕಾರ್ಯಪತ್ರದ ಭಾಗ–1 ಅನ್ನು (ವರ್ಕಿಂಗ್ ಪೇಪರ್) ಸಮಿತಿ ಈಗಾಗಲೇ ಪೂರ್ಣಗೊಳಿಸಿದೆ. ಕಾರ್ಯಪತ್ರವನ್ನು ಈಗಾಗಲೇ ಸರ್ಕಾರ ಪ್ರಕಟಿಸಿದ್ದು ಸಂಬಂಧಪಟ್ಟವರ ಪ್ರತಿಕ್ರಿಯೆ ಕೋರಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಎಐ ಬಳಕೆಯಿಂದ ಉಂಟಾಗುವ ಹೊಸ ಕಾನೂನು ಮತ್ತು ನೀತಿ ಸಂಬಂಧಿತ ಸವಾಲುಗಳನ್ನು ನಿರ್ವಹಿಸಲು ಹಕ್ಕುಸ್ವಾಮ್ಯ ಕಾಯಿದೆಯ ಪ್ರಸ್ತುತ ವಿಧಿಗಳು ಸಮರ್ಪಕವಾಗಿವೆಯೇ ಎಂಬುದನ್ನು ಪರಿಶೀಲಿಸುವ ಜವಾಬ್ದಾರಿ 2025ರ ಏಪ್ರಿಲ್ 28ರಂದು ರಚಿಸಲಾದ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಎಐ ಸೃಜಿಸಿದ ಕೃತಿಗಳ ಕರ್ತೃತ್ವ, ಮಾಲೀಕತ್ವ ಮತ್ತು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಸ್ತುತ ಪರಿಶೀಲನೆಯಲ್ಲಿದ್ದು ಇನ್ನೂ ಪರಿಶೀಲನೆಯಲ್ಲಿರುವ ಕಾರ್ಯಪತ್ರದ ಭಾಗ 2 ರಲ್ಲಿ ತಿಳಿಸಲಾಗುವುದು ಎಂದು ಸಚಿವರು ಹೇಳಿದರು. ವಿಷಯಗಳನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದ್ದು ಇನ್ನೂ ಪರಿಶೀಲನೆಯ ಹಂತದಲ್ಲಿರುವ ಕಾರ್ಯಪತ್ರದ ಭಾಗ–2ರಲ್ಲಿ ಅದಕ್ಕೆ ಕಂಡುಕೊಂಡ ಪರಿಹಾರದ ವಿವರಗಳು ಇರಲಿವೆ ಎಂದು ಸಚಿವರು ತಿಳಿಸಿದರು.
ಹಕ್ಕುಸ್ವಾಮ್ಯ ಕಾಯಿದೆ ಪ್ರಕಾರ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಉಂಟಾಗುವ ಕಾನೂನು ಮತ್ತು ನೀತಿ ನಿರೂಪಣೆಗೆ ಒದಗುವ ಸವಾಲುಗಳನ್ನು ಗುರುತಿಸುವುದು ಮತ್ತು ವಿಶ್ಲೇಷಿಸುವುದು, ಅಸ್ತಿತ್ವದಲ್ಲಿರುವ ಶಾಸನಬದ್ಧ ನಿಬಂಧನೆಗಳ ಸಮರ್ಪಕತೆಯನ್ನು ಪರಿಶೀಲಿಸುವುದು ಮತ್ತು ಅಗತ್ಯವಿರುವಲ್ಲಿ ಶಿಫಾರಸುಗಳನ್ನು ಮಾಡುವುದು ಸಮಿತಿಯ ಕೆಲಸವಾಗಿದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ, ತನ್ನ ವಿಶ್ಲೇಷಣೆಯ ಆಧಾರದಲ್ಲಿ ಒಂದು ಕಾರ್ಯಪತ್ರವನ್ನು ತಯಾರಿಸಿ ಅಂತಿಮಗೊಳಿಸಿ ಇಲಾಖೆಯಿಂದ ಪ್ರಕಟಿಸುವ ಜವಾಬ್ದಾರಿಯನ್ನೂ ಸಮಿತಿಗೆ ನೀಡಲಾಗಿದೆ.
[ಸಚಿವರ ಉತ್ತರದ ಪ್ರತಿ]