ಅರ್ಜಿ ಬರೆಯಲು ಎಐ ಮೇಲೆ ವಕೀಲರ ಮಿತಿಮೀರಿದ ಅವಲಂಬನೆ: ಕೇರಳ ಹೈಕೋರ್ಟ್ ಆತಂಕ

ಆರ್ಥಿಕ ಸೈಬರ್ ವಂಚನೆಗೆ ಸಂಬಂಧಿಸಿದ ಅರ್ಜಿಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Law Library AI
Law Library AI
Published on

ಸೂಕ್ತ ಕಾನೂನು ಸಂಶೋಧನೆ ಇಲ್ಲದೆ ಅರ್ಜಿ ಬರೆಯಲು ವಕೀಲರು ಎಐ ಪರಿಕರಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದನ್ನು ಕೇರಳ ಹೈಕೋರ್ಟ್‌ ಟೀಕಿಸಿದೆ [ಬ್ಲೂ ಸ್ಟಾರ್ ಅಲ್ಯೂಮಿನಿಯಂ & ಡೋರ್ ಹೌಸ್ ಮತ್ತು ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಎಐ ಬಳಸಿ ಅರ್ಜಿ ಬರೆಯುತ್ತಿರುವ ವಕೀಲರು ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಹಲವು ಬಾರಿ ಎಡವಿದ್ದಾರೆ ಎಂದು ನ್ಯಾಯಮೂರ್ತಿ ಎಂ ಎ ಅಬ್ದುಲ್ ಹಖೀಮ್ ಅಸಮಾಧಾನ ವ್ಯಕ್ತಪಡಿಸಿದರು.

Also Read
ನ್ಯಾಯಾಲಯಗಳಲ್ಲಿ ಓತಪ್ರೋತವಾಗಿ ಎಐ ಬಳಕೆ: ಎಚ್ಚರದಿಂದ ಇದ್ದೇವೆ ಎಂದ ಸುಪ್ರೀಂ ಕೋರ್ಟ್‌

ಕೆಲವು ರಿಟ್ ಅರ್ಜಿಗಳು ಎಐ ಮೂಲಕ ರಚಿತವಾದಂತೆ ಕಾಣುತ್ತಿವೆ. ಅವುಗಳಲ್ಲಿ ಮೂಲಭೂತ ಸಂಗತಿಗಳೇ ಇರುವುದಿಲ್ಲ. ನ್ಯಾಯಾಲಯ ರಿಟ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗಳಿಗೆ ಹಲವು ಬಾರಿ ವಕೀಲರ ಬಳಿ ಉತ್ತರವೇ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ಬ್ಯಾಂಕ್ ಖಾತೆ ಸ್ಥಗಿತ ತೆರವು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಎಐ ಆಧಾರಿತ ಅರ್ಜಿಗಳನ್ನು ಕಿರಿಯ ವಕೀಲರು ಹೆಚ್ಚಾಗಿ ಸಲ್ಲಿಸುತ್ತಿದ್ದಾರೆ ಎಂದಿತು.

“ಬಹುತೇಕ ರಿಟ್ ಅರ್ಜಿಗಳಲ್ಲಿ, ಅರ್ಜಿದಾರರರಿಗೂ ಆರೋಪಿತ ಅಪರಾಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ, ಅಪರಾಧಕ್ಕೆ ಸಂಬಂಧಿಸಿದ ಮೊತ್ತದ ಒಂದು ಭಾಗತಮಗೆ ತಿಳಿಯದೇ ನಡೆದ ನಿಜವಾದ ವ್ಯಾಪಾರ ವ್ಯವಹಾರದ ಮೂಲಕ ಬಂದಿದೆ ಎಂದು ಹೇಳಿ ತಮ್ಮ ಖಾತೆಯ ಸ್ಥಗಿತ ತೆರವುಗೊಳಿಸುವಂತೆ ವಿನಂತಿಸುತ್ತಾರೆ ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಹೆಚ್ಚಿನ ರಿಟ್ ಅರ್ಜಿಗಳಲ್ಲಿ ಅನೇಕವು ನಿಜವಾದ ವ್ಯವಹಾರದ ವಿವರಗಳನ್ನಾಗಲಿ, ಅರ್ಜಿದಾರರ ವ್ಯಾಪಾರದ ಸ್ವಭಾವವನ್ನಾಗಲಿ ಸ್ಪಷ್ಟವಾಗಿ ಉಲ್ಲೇಖಿಸಿರುವುದಿಲ್ಲ,” ಎಂದು ನ್ಯಾಯಾಲಯ ವಿವರಿಸಿದೆ.

ಕೆಲವು ಸಂದರ್ಭಗಳಲ್ಲಿ, ಅರ್ಜಿದಾರರಿಗೂ ತಿಳಿಯದೆಯೇ ಅವರ ಹೆಸರಿನಲ್ಲಿ ನಕಲಿ ದಾಖಲೆಗಳ ಮೂಲಕ ಅರ್ಜಿಗಳು ಸಲ್ಲಿಕೆಯಾಗಿರುವುದನ್ನೂ ನ್ಯಾಯಾಲಯ ಉದಾಹರಣೆ ಸಹಿತ ಬಹಿರಂಗಪಡಿಸಿದೆ. ಆ ಮೂಲಕ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

Also Read
ಕೃತಕ ಬುದ್ಧಿಮತ್ತೆ ಬಳಸಿ ತೀರ್ಪು ನೀಡುವಂತಿಲ್ಲ: ದೇಶದಲ್ಲಿಯೇ ಮೊದಲ ಮಾರ್ಗಸೂಚಿ ಪ್ರಕಟಿಸಿದ ಕೇರಳ ಹೈಕೋರ್ಟ್

ಆದ್ದರಿಂದ, ಬ್ಯಾಂಕ್ ಖಾತೆಗಳ ಸ್ಥಗಿತ ತೆರವು ಕುರಿತು ಸಲ್ಲಿಸುವ ಎಲ್ಲಾ ಅರ್ಜಿಗಳಲ್ಲೂ ಅರ್ಜಿದಾರರ ಪ್ರದೇಶದ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು. ಇದರಿಂದ ನಕಲಿ ವ್ಯಕ್ತಿಗಳು ಅರ್ಜಿ ಸಲ್ಲಿಸದಂತೆ ತಡೆಯಲು ಅನುಕೂಲವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಆದೇಶದ ಬಳಿಕ,  ಹೈಕೋರ್ಟ್‌ ಕಿರಿಯ ವಕೀಲರ ಕುರಿತು ಮಾಡಿದ್ದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯಶವಂತ್‌ ಶೆಣೈ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಇಂತಹ ನಿರ್ದೇಶನಗಳು ನ್ಯಾಯ ದೊರಕಿಸಿಕೊಡುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡುತ್ತವೆ. ಹೈಕೋರ್ಟ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ನೀಡಲಾದ ತೀರ್ಪುಗಳಿಗೆ ಈ ಹೇಳಿಕೆ ವಿರುದ್ಧವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.  

Kannada Bar & Bench
kannada.barandbench.com