Minister V Somanna and Lokayukta
Minister V Somanna and Lokayukta 
ಸುದ್ದಿಗಳು

ಅಕ್ರಮ ಆಸ್ತಿ ಆರೋಪ: ಸಚಿವ ಸೋಮಣ್ಣ ವಿರುದ್ಧ ತನಿಖೆ ಮುಂದುವರಿಸಲು ಲೋಕಾಯುಕ್ತ ಪೊಲೀಸ್‌ಗೆ ಆದೇಶಿಸಿದ ವಿಶೇಷ ನ್ಯಾಯಾಲಯ

Bar & Bench

ವಸತಿ ಸಚಿವ ವಿ ಸೋಮಣ್ಣ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸುವಂತೆ ಲೋಕಾಯುಕ ಪೊಲೀಸರಿಗೆ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಕರ್ನಾಟಕ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ 2022ರ ಮಾರ್ಚ್‌ 21ರಂದು ಈ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯದಂತೆ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ತನಿಖೆ ಮುಂದುವರಿಸಲು ಆದೇಶಿಸುವುದು ಸೂಕ್ತ. ಈ ಆದೇಶ ಮಾಡಿದ ದಿನದಿಂದ ಎರಡು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಬಿ ಜಯಂತ್‌ ಕುಮಾರ್‌ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿದಾರರ ಪರ ವಕೀಲರು “ಸಿಆರ್‌ಪಿಸಿ ಸೆಕ್ಷನ್‌ 202(1)ರ ಅಡಿ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನ್ಯಾಯಾಲಯವು ಮಾರ್ಚ್‌ 21ರಂದು ಆದೇಶ ಮಾಡಿತ್ತು. ಹೈಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರವು ಎಸಿಬಿಯನ್ನು ರದ್ದುಪಡಿಸಿರುವುದರಿಂದ ತನಿಖೆ ಮುಂದುವರಿಸಲು ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರಿಗೆ ನಿರ್ದೇಶಿಸಬೇಕು” ಎಂದು ಕೋರಿದರು. ಇದನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.

ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶ ಮಾಡಿತ್ತು.