ಒಂದೊಮ್ಮೆ ಜನತಾ ಬಜಾರ್‌ನಲ್ಲಿ ₹231 ವೇತನ ಪಡೆಯುತ್ತಿದ್ದ ಸಚಿವ ಸೋಮಣ್ಣ ವಿರುದ್ಧದ ಅಕ್ರಮ ಆಸ್ತಿ ಆರೋಪಗಳೇನು?

ಆರೋಪಿ ಸೋಮಣ್ಣ ಅವರು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ಮೌಲ್ಯದಲ್ಲಿ ನಿವೇಶನ, ಜಮೀನು ಖರೀದಿಸಿದ್ದಾರೆ ಎಂದು ದೂರುದಾರ ರಾಮಕೃಷ್ಣ ಆರೋಪಿಸಿದ್ದಾರೆ.
Housing Minister V Somanna

Housing Minister V Somanna

Facebook

ವಸತಿ ಸಚಿವ ವಿ ಸೋಮಣ್ಣ ಅವರ ವಿರುದ್ಧ ದೂರುದಾರ ರಾಮಕೃಷ್ಣ ಅವರು ಮಾಡಿರುವ ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರ ಆರೋಪವನ್ನು ಪರಿಗಣಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮಣ್ಣ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಿದ್ದು, ಸೋಮವಾರ ಸಮನ್ಸ್ ಜಾರಿ ಮಾಡಿದೆ.

ದೂರುದಾರ ರಾಮಕೃಷ್ಣ ಅವರು ನ್ಯಾಯಾಲಯದ ಮುಂದೆ ಸೋಮಣ್ಣ ಅವರ ವಿರುದ್ಧ ಆಸ್ತಿ, ಹಣ, ಹೂಡಿಕೆ, ಆಭರಣ ಖರೀದಿಗೆ ಸಂಬಂಧಿಸಿದ 39 ದಾಖಲೆಗಳನ್ನು ಸಲ್ಲಿಸಿದ್ದು, ಸಚಿವರ ಆದಾಯ, ಖರ್ಚು-ವೆಚ್ಚ, ಆಸ್ತಿ, ಒಡವೆ ಖರೀದಿ, ಹೂಡಿಕೆಯಲ್ಲಿ ಅಜಗಜಾಂತರ ಇರುವುದನ್ನು ವಿವರಿಸಿದ್ದಾರೆ. ಅವುಗಳಲ್ಲಿ ಪ್ರಮುಖ ವಿವರಗಳ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಲ್ಲಿ ಮಾರಾಟ ಸಹಾಯಕನಾಗಿ ಕೆಲಸಕ್ಕೆ ಸೇರಿದಾಗ ಸೋಮಣ್ಣ ಅವರ ಮಾಸಿಕ ಸಂಬಳವು 231 ರೂಪಾಯಿಗಳಾಗಿತ್ತು. ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು ₹15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ₹71,437 ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ₹18,49,89,441 ಆಗಿದೆ. ಸುಮಾರು ₹12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.

1999-2000ದಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ ಸೋಮಣ್ಣ ಅವರ ಆದಾಯವು ₹2,02,323 ಇತ್ತು. ₹1,20,909 ಸಾಲ ಮರು ಪಾವತಿ ಮಾಡಿದ್ದು, ₹4,41,658 ಆಭರಣ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಪತ್ನಿ ಹೆಸರಿನಲ್ಲಿ ₹1,10,619 ಮೌಲ್ಯದ ಆಸ್ತಿ ಖರೀದಿಸಿದ್ದು, ₹8,40,796 ಮೌಲ್ಯದ ಹೊಸ ಕಾರು, ₹3,22,713 ಗಳನ್ನು ಬ್ಯಾಂಕ್‌ ಮತ್ತು ನಗದಿನ ರೂಪದಲ್ಲಿ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ₹8.45 ಲಕ್ಷವನ್ನು ಪತ್ನಿ ಮತ್ತು ಮಕ್ಕಳಿಗೆ ಪಾವತಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಮಕ್ಕಳ ಹೆಸರಿನಲ್ಲಿ ವಿವಿಧ ಕಂಪೆನಿಗಳಲ್ಲಿ ₹37,25,000 ಹೂಡಿಕೆ ಮತ್ತು ₹22,02,323 ಅನ್ನು ಆದಾಯ ಎಂದು ಘೋಷಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಅವರ ಆದಾಯ ಇದ್ದದ್ದು ₹2,02,323 ಮಾತ್ರ ಎಂದು ಹೇಳಲಾಗಿದೆ. ಹಳೆಯ ಕಾರನ್ನು ₹2.5 ಲಕ್ಷ ಮಾರಾಟ ಮಾಡಿದ್ದು, ₹8,40,796 ಮೌಲ್ಯದ ಹೊಸ ಕಾರು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಮಕ್ಕಳ ಹೆಸರಿನಲ್ಲಿ ವಿವಿಧ ಕಂಪೆನಿಗಳಲ್ಲಿ ₹37,25,000 ಹೂಡಿಕೆ ಮಾಡಿದ್ದು, ₹32,00,887 ಆಸ್ತಿ ಖರೀದಿಸಿದ್ದಾಗಿ ಹೇಳಿದ್ದಾರೆ. ಸಾರ್ವಜನಿಕ ವ್ಯಕ್ತಿಯಾಗಿದ್ದೂ ₹15 ಲಕ್ಷ ಉಡುಗೊರೆ ಬಂದಿದೆ ಎಂದು ಸೋಮಣ್ಣ ಹೇಳಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

2001-02ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ₹3,22,670 ಆದಾಯ ಹೊಂದಿರುವುದಾಗಿ ಸೋಮಣ್ಣ ಘೋಷಿಸಿದ್ದಾರೆ. ಬಿಡಿಎ ₹10,10,000 ಮೌಲ್ಯದ ನಿವೇಶನ ಹಂಚಿಕೆ ಮಾಡಿದ್ದು, ಪತ್ನಿಯು ವಿಜಯನಗರದಲ್ಲಿ ₹24,76,000 ಮೌಲ್ಯದ ನಿವೇಶನ ಖರೀದಿಸಿದ್ದಾರೆ. ಪುತ್ರ ಬಿ ಎಸ್‌ ಅರುಣ್‌ ಅವರಿಗೆ ₹4 ಲಕ್ಷ ಉಡುಗೊರೆ ನೀಡಿದ್ದಾಗಿ ಘೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

2002-03ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ವರದಿಯಲ್ಲಿ ₹3,81,756 ಆದಾಯ ಘೋಷಿಸಿಕೊಂಡಿದ್ದು, ಬಿಡಿಎ ಹಂಚಿಕೆ ಮಾಡಿದ್ದ ನಿವೇಶನ ಸೇರಿದಂತೆ ಕೆಲವು ಆಸ್ತಿಗಳನ್ನು ₹14 ಲಕ್ಷಕ್ಕೆ ಮಾರಾಟ ಮಾಡಿದ್ದು, ಇತರೆ ಆಸ್ತಿಗಳನ್ನು ₹33 ಲಕ್ಷಕ್ಕೆ ಮಾರಾಟ ಮಾಡಿದ್ದಾಗಿ ವಿವರಿಸಿದ್ದಾರೆ. ಅಲ್ಲದೇ, ಜಯನಗರದಲ್ಲಿ ₹74,52,986 ಮೌಲ್ಯದ ಆಸ್ತಿ ಮತ್ತು ಬಸವನಪುರದಲ್ಲಿ ₹13,30,000 ಮೌಲ್ಯದ ಜಮೀನು, ಸುಲ್ತಾನ್‌ ಪಾಳ್ಯ ಮುಖ್ಯ ರಸ್ತೆಯಲ್ಲಿ ಪುತ್ರ ಅರುಣ್‌ ಹೆಸರಿನಲ್ಲಿ ₹9,32,000 ಮೌಲ್ಯದ ಪ್ಲಾಟ್‌ ಖರೀದಿಸಿದ್ದಾಗಿ ಘೋಷಿಸಿದ್ದಾರೆ.

2004-05 ಆಸ್ತಿ ವಿವರದ ಪ್ರಕಾರ ₹6,11,749 ಆದಾಯ ಘೋಷಿಸಿಕೊಂಡಿದ್ದು, ₹1,38,77,812 ಮೌಲ್ಯದ ಏಳು ಆಸ್ತಿಗಳನ್ನು ಸೋಮಣ್ಣ ಖರೀದಿಸಿದ್ದಾರೆ ಎಂದು ದೂರುದಾರರು ಆಪಾದಿಸಿದ್ದಾರೆ. ಎಸ್‌ಬಿಎಂನಲ್ಲಿ ₹11 ಸಾವಿರ, ₹8,30,221 ಅನ್ನು ಕ್ಲಾಸಿಕ್‌ ಬಿಲ್ಡರ್ಸ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ಸೋಮಣ್ಣ ಘೋಷಿಸಿದ್ದಾರೆ.

2004ರ ಡಿಸೆಂಬರ್‌ 8ರಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದಲ್ಲಿ 1.02 ಎಕರೆ ಜಮೀನನ್ನು ₹5,25,000 ಪಾವತಿಸಿ ಪತ್ನಿ ಖರೀದಿಸಿದ್ದಾರೆ. ಇದಕ್ಕಾಗಿ 53,540 ಸ್ಟ್ಯಾಂಪ್‌ ಶುಲ್ಕ ಪಾವತಿಸಿರುವುದಾಗಿ ತಿಳಿಸಿದ್ದಾರೆ.

2004ರ ಡಿಸೆಂಬರ್‌ 12ರಂದು ಕಂಬಿಪುರದಲ್ಲೇ ₹7,50,000 ಮೌಲ್ಯದ 1.20 ಎಕರೆ ಜಮೀನನ್ನು ₹76,940 ಸ್ಟ್ಯಾಂಪ್‌ ಶುಲ್ಕ ಪಾವತಿಸಿ ಖರೀದಿಸಿದ್ದಾಗಿ ಸೋಮಣ್ಣ ಘೋಷಿಸಿದ್ದಾರೆ. ಕಂಬಿಪುರದಲ್ಲೇ ₹3.5 ಲಕ್ಷ ಪಾವತಿಸಿ 28 ಗುಂಟೆ ಜಮೀನು ಖರೀದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

2004ರ ಡಿಸೆಂಬರ್‌ 8ರಂದು ಸೋಮಣ್ಣ ಅವರ ಪತ್ನಿಯು ತಾವರೆಕೆರೆಯಲ್ಲಿ 2.02 ಗುಂಟೆ ಜಮೀನನ್ನು ₹4,56,000 ಪಾವತಿಸಿ ಖರೀದಿಸಿದ್ದಾರೆ. 2005-06ರ ಅವಧಿಯಲ್ಲಿ ಲೋಕಾಯುಕ್ತ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಆರೋಪಿ ಸೋಮಣ್ಣ ಅವರು ಪತ್ನಿ ಹೆಸರಿನಲ್ಲಿ ಆನೇಕಲ್‌ ತಾಲ್ಲೂಕು ಮತ್ತು ತಾವರೆಕೆರೆಯಲ್ಲಿ ₹35,97,968 ಮೌಲ್ಯದ ಆಸ್ತಿ ಖರೀದಿಸಿದ್ದಾಗಿ ಘೋಷಿಸಿದ್ದಾರೆ.

2006 ಜೂನ್‌ 30ರಂದು ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ₹50 ಸಾವಿರಕ್ಕೆ ನಿವೇಶನ ಖರೀದಿಸಿರುವ ಕ್ರಯ ಪತ್ರದಲ್ಲಿ ತಿಳಿಸಲಾಗಿದೆ. ವಾಸ್ತದಲ್ಲಿ ಆಗ ಮಾರುಕಟ್ಟೆ ಮೌಲ್ಯವು ₹18,97,500 ಇತ್ತು ಎಂದು ಆರೋಪಿಸಲಾಗಿದೆ.

2005ರ ಮಾರ್ಚ್‌ 2ರಂದು ಮಾಡಲಾಗಿರುವ ಕ್ರಯ ಪತ್ರವನ್ನು ದೂರುದಾರರು ಸಲ್ಲಿಸಿದ್ದು, ಇದರಲ್ಲಿ ಯಶವಂತಪುರ ಹೋಬಳಿಯ ಮಲ್ಲತ್ತಹಳ್ಳಿಯಲ್ಲಿ 2.05 ಗುಂಟೆ ಜಮೀನನ್ನು ಆರೋಪಿ ಸೋಮಣ್ಣ ಅವರು 20 ಲಕ್ಷಕ್ಕೆ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಆಸ್ತಿಯ ಮಾರ್ಗಸೂಚಿಯ ಮೌಲ್ಯವು ₹1,78,59,600 ಎಂದು ದೂರಲಾಗಿದೆ.

Also Read
ಸಚಿವ ಸೋಮಣ್ಣ ಅವರಿಂದ ಶೇ. 204ರಷ್ಟು ಅಕ್ರಮ ಆಸ್ತಿ ಸಂಪಾದನೆ; ಕ್ರಿಮಿನಲ್‌ ಪ್ರಕರಣ ದಾಖಲಿಸಲು ನ್ಯಾಯಾಲಯದ ಆದೇಶ

ಆರೋಪಿ ಸೋಮಣ್ಣ ಅವರು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ಮೌಲ್ಯದಲ್ಲಿ ನಿವೇಶನ, ಜಮೀನು ಖರೀದಿಸಿದ್ದಾರೆ ಎಂದು ದೂರುದಾರ ರಾಮಕೃಷ್ಣ ಆರೋಪಿಸಿದ್ದಾರೆ.

ಬೆಂಗಳೂರಿನ ಹೊಸಹಳ್ಳಿ ನಗರಸಭೆ ಸದಸ್ಯ, ಶಾಸಕ, ಸಚಿವರಾದ ಬಳಿಕ ಆರೋಪಿ ಸೋಮಣ್ಣ ಅವರು ಹೇಗೆ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ವಿವರಿಸಬೇಕಿದೆ ಎಂದಿರುವ ಪೀಠವು ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್‌ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್‌ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶ ಮಾಡಿದೆ.

Attachment
PDF
RamaKrishna Versus V Somanna.pdf
Preview
Kannada Bar & Bench
kannada.barandbench.com