ಸುದ್ದಿಗಳು

ನಿರ್ದಿಷ್ಟವಾಗಿ ಹೇಳದ ಹೊರತು ತೀರ್ಪುಗಳು ಸದಾ ಪೂರ್ವನ್ವಯ: ಸುಪ್ರೀಂ ಕೋರ್ಟ್

ತೀರ್ಪು ಭವಿಷ್ಯವರ್ತಿಯಾಗಿ ಮಾತ್ರ ಅನ್ವಯವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳದಿದ್ದಾಗ, ಅದು ಪೂರ್ವಾನ್ವಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಸ್ಪಷ್ಟವಾಗಿ ಬೇರೆ ರೀತಿಯಲ್ಲಿ ಉಲ್ಲೇಖಿಸದಿದ್ದಾಗ ತೀರ್ಪುಗಳು ಪೂರ್ವಾನ್ವಯವಾಗುತ್ತವೆ ಎಂದು ಭಾವಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಕನಿಷ್ಕ್ ಸಿನ್ಹಾ ಮತ್ತಿತರರು ಹಾಗೂ ಪ. ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಶಾಸಕಾಂಗ ಜಾರಿಗೆ ತರುವ ಕಾಯಿದೆಗಳು ಸಾಮಾನ್ಯವಾಗಿ ಭವಿಷ್ಯವರ್ತಿಯಾಗಿ ಅನ್ವಯವಾಗುತ್ತವೆಯಾದರೂ ತೀರ್ಪೊಂದು ಭವಿಷ್ಯಕ್ಕೆ ಮಾತ್ರ ಅನ್ವಯ ಎಂದು ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಸಾಂವಿಧಾನಿಕ ನ್ಯಾಯಾಲಯದ ತೀರ್ಪುಗಳು ಹೇಳದೇ ಇದ್ದಾಗ ಆ ತೀರ್ಪು ನಿರ್ದಿಷ್ಟವಾಗಿ ಭವಿಷ್ಯವರ್ತಿಯಾಗುತ್ತದೆ ಎಂದು ಹೇಳಲಾಗದು ಎಂಬುದಾಗಿ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿದೆ.

ಪ್ರಿಯಾಂಕಾ ಶ್ರೀವಾಸ್ತವ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೇಳಿರುವಂತೆ  ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 156(3) ರ ಅಡಿಯಲ್ಲಿ ದೂರುಗಳೊಂದಿಗೆ ಅಫಿಡವಿಟ್ ಸಲ್ಲಿಸುವ ಅವಶ್ಯಕತೆ ಭವಿಷ್ಯವರ್ತಿಯಾಗಿ ಮಾತ್ರ ಅನ್ವಯಿಸುತ್ತದೆ ವಿನಾ ತೀರ್ಪಿಗೂ ಮೊದಲು ಸಲ್ಲಿಸಲಾದ ದೂರುಗಳಿಗೆ ಅಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿತು.

ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದ ತೀರ್ಪನ್ನು ಪೂರ್ವಾನ್ವಯ ಮಾಡಬೇಕು ಎಂದು ಮೇಲ್ಮನವಿದಾರರು ವಾದಿಸಿದ್ದರು. ಬೇರೆ ರೀತಿಯಲ್ಲಿ ನಿರ್ದಿಷ್ಟಪಡಿಸದ ಹೊರತು, ಎಲ್ಲಾ ಸುಪ್ರೀಂ ಕೋರ್ಟ್ ತೀರ್ಪುಗಳು ಹಿಂದಿನ ಮತ್ತು ಭವಿಷ್ಯದ ಪ್ರಕರಣಗಳೆರಡಕ್ಕೂ  ಅನ್ವಯಿಸಬೇಕು ಎಂದು ಕೋರಿದ್ದರು. ಆದರೆ, ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಧ್ವನಿ ಬೇರೆ ಇದ್ದು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಭವಿಷ್ಯಕ್ಕೆ ಅನ್ವಯವಾಗುವಂತೆ ಪಾಲಿಸಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಇದಕ್ಕೆ ಒಪ್ಪಲಿಲ್ಲ.

ಸ್ಪಷ್ಟವಾಗಿ ಬೇರೆ ರೀತಿಯಲ್ಲಿ ಹೇಳದ ಹೊರತು, ತೀರ್ಪಿನ ಸ್ವರೂಪ ಸಾಮಾನ್ಯವಾಗಿ ಪೂರ್ವಾನ್ವಯವಾಗಿರುತ್ತದೆ. ಅನಗತ್ಯ ತೊಂದರೆಗಳನ್ನು ತಡೆಗಟ್ಟಲು ಮತ್ತು ಉತ್ತಮ ನಂಬಿಕೆಯಿಂದ ನೀಡಲಾದ ಹಿಂದಿನ ತೀರ್ಪಿಗೆ ಅಡ್ಡಿಪಡಿಸುವುದನ್ನು ತಪ್ಪಿಸಲು ಭವಿಷ್ಯವರ್ತಿ ಅನ್ವಯದ ತತ್ವವನ್ನು ಅಳವಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದ ತೀರ್ಪನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮತ್ತು ಅಧೀನ ನ್ಯಾಯಾಧೀಶರಿಗೆ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು ಎಂದು ಗಮನಸೆಳೆದಿರುವ ಪೀಠ , ಹಿಂದಿನ ದೂರುಗಳಿಗೆ ಪೂರ್ವಾನ್ವಯ ಮಾಡುವ ಬದಲು ಭವಿಷ್ಯವರ್ತಿಯಾಗಿ ಅನುಸರಿಸಲು ಉದ್ದೇಶಿಸಲಾಗಿತ್ತು ಎಂಬ ಅಂಶವನ್ನು ತಿಳಿಸಿತು.

ಆದ್ದರಿಂದ,  ಮೇಲ್ಮನವಿ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ 2015ರ ತೀರ್ಪಿಗೂ ಮೊದಲು ಸಲ್ಲಿಸಲಾದ ದೂರುಗಳನ್ನು ಅಫಿಡವಿಟ್ ಇಲ್ಲದ ಕಾರಣ ಅಮಾನ್ಯಗೊಳಿಸಲಾಗುವುದಿಲ್ಲ ಎಂಬ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು. ಆದರೆ, ತಮ್ಮ ವಿರುದ್ಧ ಇನ್ನೂ ಆರೋಪ ನಿಗದಿಯಾಗದೆ ಇದ್ದರೆ ಮೇಲ್ಮನವಿದಾರರು ತಮ್ಮನ್ನು ಪ್ರಕರಣದಿಂದ ಖುಲಾಸೆಗೊಳ್ಳಲು ಕೋರುವ ಸ್ವಾತಂತ್ರ್ಯವನ್ನು ಅವರಿಗೆ ನೀಡಿತು.