
ಭೂಸ್ವಾಧೀನ ಕಾಯಿದೆಯ ಸೆಕ್ಷನ್ 23(1ಎ) ಮತ್ತು (2) ಜೊತೆಗೆ ಸೆಕ್ಷನ್ 28ರ ನಿಬಂಧನೆಯ ಪ್ರಕಾರ ಪಾವತಿಸಬೇಕಾದ ಬಡ್ಡಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಯಿದೆಯ ಸೆಕ್ಷನ್ 3ಜೆ ಹೊರಗಿಡಲಿದ್ದು ಇದು ಸಂವಿಧಾನಬಾಹಿರ ಎಂದು 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಆದರೆ ತೀರ್ಪನ್ನು ಭವಿಷ್ಯವರ್ತಿಯಾಗಿ ಮಾತ್ರವೇ ಅನ್ವಯಿಸಬೇಕು ಎಂದು ಕೋರಿ ಎನ್‌ಎಚ್‌ಎಐ ಅರ್ಜಿ ಸಲ್ಲಿಸಿತ್ತು.
ಸೋಮವಾರ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ, ಮನವಿ ಪುರಸ್ಕರಿಸಿದರೆ ರಾಷ್ಟ್ರೀಯ ಹೆದ್ದಾರಿ ಕಾಯಿದೆಯ 3ಜೆ ಸೆಕ್ಷನ್ ಸೃಷ್ಟಿಸಿದ್ದ ಗೊಂದಲವನ್ನು ಇಲ್ಲವಾಗಿಸಿದ್ದ ತಾರ್ಸೆಮ್ ಸಿಂಗ್ ತೀರ್ಪನ್ನು ರದ್ದುಗೊಳಿಸಿದಂತಾಗುತ್ತದೆ ಎಂದಿದೆ.
ಅಲ್ಲದೆ ಇದು ವಿಭಿನ್ನ ಸಮಯಗಳಲ್ಲಿ ಸ್ವಾಧೀನಕ್ಕಾಗಿ ಭೂಮಿ ನೀಡಿದ ವ್ಯಕ್ತಿಗಳ ನಡುವೆ ಅಸಮಾನತೆ ಉಂಟುಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಎನ್‌ಎಚ್‌ಎಐ ಮನವಿ ಪುರಸ್ಕರಿಸಿದರೆ, ಅದು ಬಹಳಷ್ಟು ಭೂಸ್ವಾಧೀನ ಪ್ರಕರಣಗಳ ಮರುಪರಿಶೀಲನೆಗೆ ಕಾರಣವಾಗುತ್ತದೆ. ಆ ಬಗೆಯ ವೈಯಕ್ತಿಕ ಪ್ರಕರಣಗಳಲ್ಲಿ ಮತ್ತಷ್ಟು ವಿಳಂಬ ಉಂಟುಮಾಡುತ್ತದೆ ಎಂದು ಕೂಡ ಪೀಠ ಹೇಳಿದೆ.
ಕಾಯಿದೆಯನ್ನು ಭವಿಷ್ಯವರ್ತಿಯಾಗಿ ಅನ್ವಯಿಸದಿದ್ದರೆ ತನಗೆ ₹ 100 ಕೋಟಿ ಹೊರೆ ಉಂಟಾಗಲಿದೆ ಎಂಬ ಎನ್‌ಎಚ್‌ಎಐ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಸಾರ್ವಜನಿಕ- ಖಾಸಗಿ ಮಾದರಿಯಡಿ ಅಭಿವೃದ್ಧಿಯಾಗುತ್ತಿರುವುದರಿಂದ ಯೋಜನೆ ಆರಂಭಿಸಿದವರು ಮತ್ತು ಹೆದ್ದಾರಿ ಬಳಸಲು ವಾಹನ ಖರೀದಿಸುವ ಗ್ರಾಹಕರ ಮೇಲೆ ಅದರ ಹೊರೆ ಬೀಳುತ್ತದೆ ಎಂದಿತು.
ಈ ಹಿನ್ನೆಲೆಯಲ್ಲಿ ತಾರ್ಸೆಮ್ ಸಿಂಗ್ ಪ್ರಕರಣದಲ್ಲಿ ನೀಡಲಾದ ಪರಿಹಾರವನ್ನು ಅದು ಎತ್ತಿಹಿಡಿದು ಅರ್ಜಿ ತಿರಸ್ಕರಿಸಿತು.