ಕಳೆದ ವರ್ಷ ಕಾಲೇಜಿನಲ್ಲಿ ಹತ್ಯೆಗೀಡಾಗಿದ್ದ ದಲಿತ ವಿದ್ಯಾರ್ಥಿಯ ಪೋಷಕರಿಗೆ ₹20 ಲಕ್ಷ ಪರಿಹಾರ ನೀಡುವಂತೆ ಮೆಸ್ರಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಬಿಐಟಿ) ಜಾರ್ಖಂಡ್ ಹೈಕೋರ್ಟ್ ಆಗಸ್ಟ್ 13ರಂದು ನಿರ್ದೇಶನ ನೀಡಿದೆ.
ಬಿಐಟಿ ಮೆಸ್ರಾ ಆಡಳಿತ ಮಂಡಳಿ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಂಜಯ್ ಪ್ರಸಾದ್ , ಸಂಸ್ಥೆ ತನ್ನ ಜವಾಬ್ದಾರಿಗಳಿಂದ ನುಣುಚಿಕೊಂಡಿದೆ ಎಂದರು.
ಬಿಐಟಿ ಮೆಸ್ರಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದ ರಾಜಾ ಪಾಸ್ವಾನ್, ವಿದ್ಯಾರ್ಥಿಗಳ ಕ್ರೂರ ಥಳಿತದಿಂದ ಸಾವನ್ನಪ್ಪಿದ್ದಾನೆ ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ವಿದ್ಯಾರ್ಥಿಗಳು ಬಾಹ್ಯ ಬೆದರಿಕೆಗಳಿಗೆ ಗುರಿಯಾಗದಂತೆ ತಡೆಯುವ ರಕ್ಷಣಾ ಗೋಡೆಯು ಕಾಲೇಜು ಕ್ಯಾಂಪಸ್‌ನಲ್ಲಿ ಇಲ್ಲದಿರುವುದನ್ನು ನ್ಯಾಯಾಲಯ ನಿರ್ದಿಷ್ಟವಾಗಿ ಗಮನಿಸಿತು. ವಿಶ್ವವಿದ್ಯಾಲಯಗಳಲ್ಲಿನ ಭದ್ರತಾ ಲೋಪ ಸರಿಪಡಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಸರ್ಕಾರಿ ಅಧಿಕಾರಿಗಳಿಗೆ ಒತ್ತಾಯಿಸಿತು.
ಈ ಸಂಬಂಧ ಎಂಜಿನಿಯರಿಂಗ್, ವೈದ್ಯಕೀಯ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು ನಡೆಸುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಸಿದ್ಧಪಡಿಸುವಂತೆ ನ್ಯಾಯಾಲಯ ಜಾರ್ಖಂಡ್ ಸರ್ಕಾರದ ಉನ್ನತ ತಾಂತ್ರಿಕ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಸರ್ಕಾರದ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿತು. ವಿದ್ಯಾರ್ಥಿಗಳು ಸಕಾಲಿಕವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವಂತೆ ಕಾಲೇಜುಗಳು, ಹಾಸ್ಟೆಲ್‌ಗಳ ಬಳಿ ಔಷಧಾಲಯಗಳು, ಆಸ್ಪತ್ರೆ ಸ್ಥಾಪಿಸುವಂತೆ ಎಸ್‌ಒಪಿಯಲ್ಲಿ ನೋಡಿಕೊಳ್ಳಬೇಕು ಎಂದು ಅದು ಸ್ಪಷ್ಟಪಡಿಸಿತು.
ವ್ಯವಸ್ಥೆ ಸುಧಾರಣೆಯಾಗಬೇಕು ಎಂಬ ಅಗತ್ಯವನ್ನು ಒತ್ತಿಹೇಳಿದ ನ್ಯಾಯಾಲಯ ಜಾರ್ಖಂಡ್‌ನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಅನ್ವಯವಾಗುವ ಈ ಕೆಳಗಿನ ಮಾರ್ಗಸೂಚಿಗಳನ್ನು ನಿಗದಿಪಡಿಸಿತು:
ಪ್ರತಿಷ್ಠಿತ ಆಸ್ಪತ್ರೆಗಳೊಂದಿಗೆ ಕಾಲೇಜುಗಳು ಚಿಕಿತ್ಸೆಗೆ ಸಂಬಂಧಿಸಿದಂತೆ ಕಡ್ಡಾಯ ಒಪ್ಪಂದ ಮಾಡಿಕೊಳ್ಳಬೇಕು;
ಪುರುಷ ಮತ್ತು ಮಹಿಳಾ ವೈದ್ಯರು ಕ್ಯಾಂಪಸ್‌ಗೆ ಬಂದು ಚಿಕಿತ್ಸೆ ನೀಡುವ ವ್ಯವಸ್ಥೆ ಇರಬೇಕು;
ಸಾಕಷ್ಟು ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು;
ಕಾರ್ಯಶೀಲ ಸಿಸಿಟಿವಿ ಕಣ್ಗಾವಲು, ಕುಂದುಕೊರತೆ ಪರಿಹಾರ ಕೋಶಗಳ ಸ್ಥಾಪನೆ;
ವಿದ್ಯಾರ್ಥಿ ನಿಗಾದಾರರು ಇರುವಂತೆ ನೋಡಿಕೊಳ್ಳಬೇಕು;
ಆನ್‌ಲೈನ್ ದೂರು ವೇದಿಕೆಗಳನ್ನು ತೆರೆಯಬೇಕು;
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಚಲನೆಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ರೂಪಿಸಬೇಕು.
ಮೃತ ವಿದ್ಯಾರ್ಥಿಯು ದಲಿತ ಸಮುದಾಯಕ್ಕೆ ಸೇರಿದ್ದು, ಆತನ ತಂದೆಯು ನೀಡಿರುವ ದೂರಿನಲ್ಲಿ ತಮ್ಮ ಮಗನ ವಿರುದ್ಧ ಆತನ ಕೆಲ ಸಹಪಾಠಿಗಳು ಜಾತಿಯ ಹೆಸರಿನಲ್ಲಿ ಅಶ್ಲೀಲವಾಗಿ ಬೈಯುತ್ತಿದ್ದರು. ಹಲವು ಸಂದರ್ಭಗಳಲ್ಲಿ ಆತನನ್ನು ಬೆತ್ತಲುಗೊಳಿಸಿ ಕಿರುಕುಳ ನೀಡಿದ್ದರು. ಈ ಬಗ್ಗೆ ರಾಜಾ ಪದೇ ಪದೇ ದೂರು ನೀಡಿದ್ದರು ಎಂಬುದಾಗಿ ರಾಜಾ ಅವರ ತಂದೆ ಹೇಳಿದ್ದರು.
ಘಟನೆ ನಡೆದ ದಿನ ಕೂಡ ತುರ್ತಾಗಿ ಕಾಲೇಜಿಗೆ ಬರುವಂತೆ ತನ್ನನ್ನು ಮಗ ಬೇಡಿಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ಆತ ವಾಂತಿ ಮಾಡಿಕೊಳ್ಳುತ್ತಿರುವುದಾಗಿಯೂ, ಪ್ರಜ್ಞೆ ತಪ್ಪಿರುವುದಾಗಿಯೂ ಪ್ರಾಂಶುಪಾಲರು ಕರೆ ಮಾಡಿದ್ದರು. ಆದರೆ ನೈಜ ಘಟನೆಯನ್ನು ಕಾಲೇಜು ಆಡಳಿತ ಮಂಡಳಿ ಮರೆಮಾಚಿ ವಿದ್ಯಾರ್ಥಿ ಕೇವಲ ಅಸ್ವಸ್ಥನಾಗಿದ್ದಾನೆ ಎಂದು ನಂಬುವಂತೆ ಮಾಡಿತ್ತು. ಮರುದಿನ ರಾಜಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಆತ ಮೃತಪಟ್ಟ ಎಂದು ಅವರು ತಿಳಿಸಿದ್ದರು.
ತನಿಖೆಯ ಪ್ರಕಾರ, 10-15 ಜನರ ಗುಂಪು ರಾಜಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಸಹಾಯಕ ವಾರ್ಡನ್ ಮತ್ತು ಹಾಸ್ಟೆಲ್‌ನ ವಾರ್ಡನ್ ಇಬ್ಬರೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿತ್ತು.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಹೊರಗಿನವರ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿದ್ದರೆ ಅದರಿಂದ ಕಾಲೇಜು ಆಡಳಿತ ನುಣುಚಿಕೊಳ್ಳುವಂತಿಲ್ಲ. ಇದು ಗಂಭೀರ ಆಡಳಿತ ಲೋಪ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಪೊಲೀಸರು ಅಪೂರ್ಣವಾಗಿ ತನಿಖೆ ನಡೆಸಿರುವುದನ್ನೂ ಟೀಕಿಸಿದ ನ್ಯಾಯಾಲಯ, ಅಪರಾಧಿಗಳನ್ನು ರಕ್ಷಿಸದೆ ನ್ಯಾಯಯುತ ತನಿಖೆ ನಡೆಸುವಂತೆ ರಾಂಚಿ ಪೊಲೀಸರಿಗೆ ನಿರ್ದೇಶನ ನೀಡಿತು.