Delhi High Court 
ಸುದ್ದಿಗಳು

ಮೃತ ವ್ಯಕ್ತಿಯ ವೀರ್ಯವನ್ನು ಆತನ ಒಪ್ಪಿಗೆ ಮೇರೆಗೆ ಸಂತಾನೋತ್ಪತ್ತಿಗೆ ಬಳಸುವುದು ಕಾನೂನುಬಾಹಿರವಲ್ಲ: ದೆಹಲಿ ಹೈಕೋರ್ಟ್

“ಈಗಿನ ಭಾರತೀಯ ಕಾನೂನಿನ ಅಡಿಯಲ್ಲಿ, ವೀರ್ಯದಾತರು ಅಥವಾ ಅಂಡಾಣುದಾತೆಯ ಒಪ್ಪಿಗೆ ಪತ್ರ ತೋರಿಸಿದರೆ ಆಗ ಮರಣೋತ್ತರ ಸಂತಾನೋತ್ಪತ್ತಿಗೆ ಯಾವುದೇ ನಿರ್ಬಂಧ ಇರದು" ಎಂದು ನ್ಯಾಯಾಲಯ ಹೇಳಿದೆ.

Bar & Bench

ತನ್ನ ಸಂರಕ್ಷಿತ ವೀರ್ಯವನ್ನು ಸಂತಾನೋತ್ಪತ್ತಿಗಾಗಿ ಬಳಸುವುದಕ್ಕೆ ಸಾವಿಗೂ ಮುನ್ನ ಒಪ್ಪಿಗೆ ನೀಡಿದ್ದ ಈಗ ಮೃತಪಟ್ಟಿರುವ ವ್ಯಕ್ತಿಯ ವೀರ್ಯವನ್ನು ಆ ವ್ಯಕ್ತಿಯ ಪೋಷಕರಿಗೆ ಹಸ್ತಾಂತರಿಸಲು ದೆಹಲಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ತನ್ನ ವೀರ್ಯ ಅಥವಾ ಅಂಡಾಣು ಬಳಕೆಗಾಗಿ ಈಗಾಗಲೇ ಒಪ್ಪಿಗೆ ಸೂಚಿಸಿದ್ದರೆ ಅಂತಹ ವ್ಯಕ್ತಿಯ ಮರಣದ ನಂತರ ಆತನ ಇಲ್ಲವೇ ಆಕೆಯ ವೀರ್ಯಾಣು ಅಥವಾ ಅಂಡಾಣು ಬಳಕೆ ಮಾಡುವ ಮರಣೋತ್ತರ ಸಂತಾನೋತ್ಪತ್ತಿ ವಿಧಾನಕ್ಕೆ ಯಾವುದೇ ನಿಷೇಧವಿಲ್ಲ ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ಗಮನಾರ್ಹ ತೀರ್ಪು ನೀಡಿದ್ದಾರೆ.

ಈಗಿನ ಭಾರತೀಯ ಕಾನೂನಿನ ಅಡಿಯಲ್ಲಿ, ವೀರ್ಯದಾತರು ಅಥವಾ ಅಂಡಾಣುದಾತೆಯ ಒಪ್ಪಿಗೆ ಪತ್ರ ತೋರಿಸಿದರೆ ಆಗ ಮರಣೋತ್ತರ ಸಂತಾನೋತ್ಪತ್ತಿಗೆ ಯಾವುದೇ ನಿರ್ಬಂಧ ಇರದು ಎಂದು ನ್ಯಾಯಾಲಯ ಹೇಳಿದೆ.

ವೀರ್ಯದಾತರು ಅಥವಾ ಅಂಡಾಣುದಾತೆಯ ಒಪ್ಪಿಗೆ ಪತ್ರ ತೋರಿಸಿದರೆ ಆಗ ಮರಣೋತ್ತರ ಸಂತಾನೋತ್ಪತ್ತಿಗೆ ಯಾವುದೇ ನಿರ್ಬಂಧ ಇರದು.
ದೆಹಲಿ ಹೈಕೋರ್ಟ್

ಕ್ಯಾನ್ಸರ್‌ನಿಂದಾಗಿ 2020 ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ನಿಧನರಾದ ವ್ಯಕ್ತಿಯ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ. ಕಿಮೋಥೆರಪಿಯಿಂದಾಗಿ ಸಂತಾನೋತ್ಪತ್ತಿ ಸಮಸ್ಯೆ ಎದುರಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ರೋಗಿ ತಮ್ಮ ವೀರ್ಯ ಸಂಗ್ರಹಿಸಲು ಅನುಮತಿಸಿದ್ದರು.

ವ್ಯಕ್ತಿಯ ಮರಣದ ನಂತರ ತಮ್ಮ ವಂಶಾಭವೃದ್ಧಿಗೆಂದು ಮಗನ ಸಂಗ್ರಹಿಸಿಟ್ಟಿದ್ದ ವೀರ್ಯ ಬಳಸಲು ಆತನ ಪೋಷಕರು ಬಯಸಿದ್ದರು. ಆದರೆ ನ್ಯಾಯಾಲಯದ ಆದೇಶ ಇಲ್ಲದೆ ಆಸ್ಪತ್ರೆ ವೀರ್ಯದ ಮಾದರಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ತಾವು 'ಕ್ಲಾಸ್ ಒನ್‌' ವ್ಯಾಪ್ತಿಯಲ್ಲಿ ಬರುವ ಮೃತ ಮಗನ ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ವಾದಿಸಿದ ಪೋಷಕರು ತಮ್ಮ ಮಗುವಿನ ಆನುವಂಶಿಕ ವಸ್ತುಗಳನ್ನು ಪಡೆಯಲು ತಮಗೆ ಯಾವುದೇ ಕಾನೂನಾತ್ಮಕ ನಿರ್ಬಂಧ ಇಲ್ಲ. ತಮ್ಮ ಮಗನ ವೀರ್ಯ ಬಳಸಿ ಬಾಡಿಗೆ ತಾಯ್ತನ ಇಲ್ಲವೇ ಮತ್ತಾವುದಾದರೂ ವಿಧಾನದ ಮೂಲಕ ಜನಿಸುವ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅಲ್ಲದೆ ಮರಣೋತ್ತರ ಸಂತಾನೋತ್ಪತ್ತಿಗೆ ವಿದೇಶಗಳಲ್ಲಿ ಅವಕಾಶ ಇದೆ ಎಂದು ವಿವಿಧ ಕಾನೂನುಗಳನ್ನು ಉಲ್ಲೇಖಿಸಿದ್ದರು.

ಮೃತ ಮಗ ತನ್ನ ವೀರ್ಯ ಸಂರಕ್ಷಣೆಗಾಗಿ ಸ್ಪಷ್ಟ ಒಪ್ಪಿಗೆ ನೀಡಿರುವುದನ್ನು ಗಮನಿಸಿದ ನ್ಯಾಯಾಲಯ ಅದು ಆತನ ಕುಟುಂಬದ ಆಸ್ತಿಯಾಗಿದೆ. ವ್ಯಕ್ತಿಯ ಮರಣದ ನಂತರ ಆತನ ಹೆತ್ತವರು ಮೃತರ ವಾರಸುದಾರರಾಗುವುದರಿಂದ ವೀರ್ಯವನ್ನು ಪಡೆಯಲು ಅವರು ಅರ್ಹರಾಗಿದ್ದಾರೆ ಎಂದಿತು.

ಪೋಷಕರ ಅರ್ಜಿಯನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದ ನ್ಯಾಯಾಲಯ ಅಜ್ಜ ಅಜ್ಜಿಯರು ಪರಿತ್ಯಕ್ತ, ವಿಚ್ಛೇದಿತ ಇಲ್ಲವೇ ನಿಧನದ ಕಾರಣಕ್ಕೆ ತಮ್ಮ ಮಕ್ಕಳ ಮಕ್ಕಳನ್ನು ಅಂದರೆ ಮೊಮ್ಮಕ್ಕಳನ್ನು ಸಲಹುವುದು ಭಾರತದಲ್ಲಿ ಅಸಾಮಾನ್ಯ ಸಂಗತಿಯೇನೂ ಅಲ್ಲ. ಸಾಂಸ್ಕೃತಿಕ ಮತ್ತು ಸಾಮಾಜಿಕ ನೀತಿಯು ಅಜ್ಜ- ಅಜ್ಜಿಯರನ್ನು ಮಕ್ಕಳ ಪಾಲನೆಯಿಂದ ದೂರವಿಡುವುದಿಲ್ಲ ಎಂದಿತು.

ಆದರೆ ವೀರ್ಯವನ್ನು ವಾಣಿಜ್ಯ ಅಥವಾ ವಿತ್ತೀಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.