ಐಸಿಐಸಿಐ ಬ್ಯಾಂಕ್ ನೀಡಿದ ಸಾಲಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ಧ ಹೂಡಲಾಗಿದ್ದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ದೆಹಲಿ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ .
ಆರೋಪಿಗಳಿಂದ ಯಾವುದೇ ಅಪರಾಧ ಅಥವಾ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ- 1949 ರ ಸೆಕ್ಷನ್ 19 (2) ರ ಉಲ್ಲಂಘನೆ ಕಂಡುಬಂದಿಲ್ಲ ಎಂದು ಸಿಬಿಐ ಸಲ್ಲಿಸಿದ ಮುಕ್ತಾಯ ವರದಿಯನ್ನು ನ್ಯಾಯಾಲಯವು ಸ್ವೀಕರಿಸುತ್ತಿದೆ ಎಂದು ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶೈಲೇಂದರ್ ಮಲಿಕ್ ತಿಳಿಸಿದ್ದಾರೆ.
ಕ್ವಾಂಟಮ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಂಜಯ್ ದತ್ ನೀಡಿದ ದೂರಿನ ಮೇರೆಗೆ 2017ರಲ್ಲಿ ಪ್ರಣಯ್ ಮತ್ತು ರಾಧಿಕಾ, ಆರ್‌ಆರ್‌ಡಿಪಿ ಹೋಲ್ಡಿಂಗ್ಸ್ ಮತ್ತು ಎನ್‌ಡಿಟಿವಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಎನ್‌ಡಿಟಿವಿಯಲ್ಲಿ ಶೇ.20 ರಷ್ಟು ಪಾಲನ್ನು ಪಡೆಯಲು ಪ್ರಣಯ್ ಮತ್ತು ರಾಧಿಕಾ ಹಾಗೂ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಸಾಲ ಪಡೆದಿವೆ ಎಂದು ದೂರುದಾರರು ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಣಯ್ ಮತ್ತು ರಾಧಿಕಾ ಹಾಗೂ ಆರ್‌ಆರ್‌ಪಿಆರ್ ಹೋಲ್ಡಿಂಗ್ ನಂತರ ಐಸಿಐಸಿಐ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂದು ದೂರಲಾಗಿತ್ತು.
ಪಿತೂರಿ ಪರಿಣಾಮವಾಗಿ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 19(2) ಅನ್ನು ಉಲ್ಲಂಘಿಸಿ ಐಸಿಐಸಿಐ ಬ್ಯಾಂಕ್ ರೂ.375 ಕೋಟಿಗಳ ಮುಂಗಡ ಸಾಲ ನೀಡಿತು. ಆ ಮೂಲಕ ಎನ್‌ಡಿಟಿವಿಯ ) ಪ್ರವರ್ತಕರ ಸಂಪೂರ್ಣ ಷೇರುಗಳನ್ನು (ಸುಮಾರು 61% ಸ್ವಾಧೀನಪಡಿಸಿಕೊಂಡಿತು. ಅಲ್ಲದೆ ಐಸಿಐಸಿಐ ವಾರ್ಷಿಕ ಬಡ್ಡಿದರವನ್ನು 19% ರಿಂದ 9.5% ಕ್ಕೆ ಇಳಿಸುವ ಮೂಲಕ ಸಾಲದ ಮರುಪಾವತಿಯನ್ನು ಒಪ್ಪಿಕೊಂಡಿತು. ಇದರಿಂದ ಐಸಿಐಸಿಐ ಬ್ಯಾಂಕ್‌ಗೆ 48 ಕೋಟಿ ರೂಪಾಯಿಗಳ ಅಕ್ರಮ ನಷ್ಟ ಉಂಟಾಯಿತು. ಇದೆಲ್ಲದರಿಂದಾಗಿ ಆರೋಪಿಗಳಿಗೆ ಲಾಭವಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಕಳೆದ ವರ್ಷ ಸಲ್ಲಿಸಿರುವ ಮುಕ್ತಾಯ ವರದಿಯಲ್ಲಿ, ಹಣಕಾಸು ವರ್ಷ 2007-08, 2008-09 ಮತ್ತು 2009-10ರ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ 83 ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಬಡ್ಡಿದರ ಕಡಿಮೆ ಮಾಡಿದ್ದು ಪ್ರಣಯ್ ಮತ್ತು ರಾಧಿಕಾ ಹಾಗೂ ಎನ್‌ಡಿಟಿವಿ ಪ್ರಕರಣದಲ್ಲಿ ಅಂತಹ ಕಡಿತ ಮಾಡಲಾಗಿಲ್ಲ ಎಂದು ಸಿಬಿಐ ಹೇಳಿತ್ತು.
ಬಡ್ಡಿದರವನ್ನು 19% ರಿಂದ 9.65% ಕ್ಕೆ ಇಳಿಸಲು ಸರ್ಕಾರಿ ಅಧಿಕಾರಿ ಅಥವಾ ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ರಹಸ್ಯ ಇಲ್ಲವೇ ಕ್ರಿಮಿನಲ್ ಪಿತೂರಿ ನಡೆಸಿಲ್ಲ ಅಥವಾ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿಲ್ಲ. ಪ್ರಮೋದ್ ಕುಮಾರ್ ಅಂಡ್ ಅಸೋಸಿಯೇಟ್ಸ್ ನಡೆಸಿದ ಸಾಲದ ದಾಖಲೆಯ ವಿಧಿ ವಿಜ್ಞಾನ ಪರೀಕ್ಷೆ ಕೂಡ ಐಸಿಐಸಿಐ ಬ್ಯಾಂಕ್ ಸಾಲ ಮನ್ನಾ ಮಾಡುವ ಮೂಲಕ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 19(2)ನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿರುವುದಾಗಿ ಸಿಬಿಐ ನ್ಯಾಯಾಲಯಕ್ಕೆ ವಿವರಿಸಿತ್ತು.